ಕೋಲಾರ: ಬೇರೆ ರಾಷ್ಟ್ರಗಳಿಂದ ಇಂಧನ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದಲ್ಲಿ ಇಂಧನ ಉಳಿಸುವ ಕಾರ್ಯ ಮಾಡಬೇಕಾದ ಅನಿವಾರ್ಯತೆ ಇದ್ದು ಅರ್ಧ ಕಿ.ಮೀ.ಗೂ ಹೋಗಲು ನಾವು ವಾಹನ ಅವಲಂಬಿಸುವುದು ಬೇಸರದ ಸಂಗತಿ ಎಂದು ಕೋಲಾರ ನಗರಠಾಣೆ ಪಿಎಸ್‌ಐ ಅಣ್ಣಯ್ಯ ತಿಳಿಸಿದರು.
ಇಂಧನ ಉಳಿತಾಯ ಸಪ್ತಾಹದ ಅಂಗವಾಗಿ ಇಂಡಿಯನ್ ಆಯಿಲ್ ಕಾಪೋರೇಷನ್ ವತಿಯಿಂದ ಇಂಧನ ಉಳಿಸಿ – ದೇಶ ಮತ್ತು ಪರಿಸರ ರಕ್ಷಿಸಿ ಎಂಬ ಘೋಷಣೆಯೊಂದಿಗೆ ಮುನಿಸ್ವಾಮಿ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳೊಂದಿಗೆ ನಗರದಲ್ಲಿ ಶುಕ್ರವಾರ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹಮ್ಮಿಕೊಂಡಿರುವ ಜಾಥಾ ಬಹಳ ಶ್ಲಾಘನೀಯ. ದಯಮಾಡಿ ಕಡಿಮೆ ಅಂತರವಿದ್ದರೆ ಕಾಲ್ನಡಿಗೆಯಲ್ಲಿ ಕ್ರಮಿಸಿ. ಇದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಅವಶ್ಯಕತೆ ಇದ್ದಲ್ಲಿ ವಾಹನ ಬಳಸುವುದರೊಂದಿಗೆ ಇಂಧನ ಉಳಿಸಿ ಎಂದರು.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮಾರುಕಟ್ಟೆ ವ್ಯವಸ್ಥಾಪಕ ಶ್ರೀನಿವಾಸ್ ನಾಗಿರೆಡ್ಡಿ, ದೇಶಾದ್ಯಂತ ನಮ್ಮ ಕಂಪನಿ ವತಿಯಿಂದ ವಾಹನ ಸವಾರರಲ್ಲಿ ಇಂಧನ ಉಳಿಸುವ, ಪರಿಸರ ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಜಾಥಾ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ದೇಶ ಉಳಿಸುವ ಸಲುವಾಗಿ ಇಂಧನ ಉಳಿಸುವ ಕರ್ತವ್ಯ ನಮ್ಮ ಮೇಲಿದೆ ಎಂದರು.
ಜಾಥಾಗೆ ಮೊದಲು ಶಾಲಾ ಮಕ್ಕಳು ಮತ್ತು ನೆರೆದಿದ್ದ ಗಣ್ಯರು ಇಂಧನ ಉಳಿಸುವ ಪ್ರತಿಜ್ಞಾ ಬೋಧನೆ ಸ್ವೀಕರಿಸಿದ ಸಂದರ್ಭದಲ್ಲಿ ಸೆವೆನಿಲ್ಸ್ ಪೆಟ್ರೋಲ್ ಬಂಕ್ ಮಾಲಿಕ ಎನ್.ಸಿ.ಸತೀಶ್, ಇಂಡಿಯನ್ ಆಯಿಲ್ ಬಂಕ್ ಡೀಲರ್‌ಗಳಾದ ಮಲ್ಲೇಶ್ ಬಾಬು, ಶಿವು, ಬಂಗಾರಪೇಟೆ ಕಾರ್ತಿಕ್, ಮುಳಬಾಗಿಲು ರಾಜಾರಾಮಣ್ಣ, ಸಿಬ್ಬಂದಿ ದೇವರಾಜ್‌ಗೌಡ ಇದ್ದರು.