Advertisement
ಭೂಮಿಯ ಸಂರಚನೆಯೂ ಅಷ್ಟೇ ರೋಚಕವಾಗಿದೆ. ಸುಸ್ಥಿರವಾದ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಜೀವಿಗಳು ವಾಸಿಸಲು ಯೋಗ್ಯವಾದ ಏಕೈಕ ಸ್ಥಳವಾಗಿದೆ. ಹಾಗಾಗಿ ಭೂಮಿಗೆ ತಾಯಿ ಸ್ಥಾನ ನೀಡಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆ ಮಾತಿನ ಅರ್ಥ ಕಳೆದುಕೊಳ್ಳುತ್ತಿದೆ. ಭೂಮಿ ಕುರಿತಾದ ಕಾಳಜಿ ಬರೀ ಅಕ್ಷರಕ್ಕೆ ಮತ್ತು ಭಾಷಣಕ್ಕೆ ಸೀಮಿತವಾಗುತ್ತಿದೆ. ಮನುಷ್ಯ ತನ್ನ ಸುಖ ಮತ್ತು ವೈಭೋಗದ ಜೀವನಕ್ಕಾಗಿ ಭೂಮಿಯ ಒಡಲನ್ನು ಬಗೆದು ಬರಿದು ಮಾಡು ತ್ತಿದ್ದಾನೆ. ನೈಸರ್ಗಿಕ ಸಂಪತ್ತನ್ನು ದೋಚಿ ತಾನು ಶ್ರೀಮಂತನಾಗಲು ಹಂಬಲಿಸುತ್ತಿದ್ದಾನೆ. ಇದರಿಂದ ಸಂತುಲಿತ ಪರಿಸರವೂ ಕೂಡ ನಾಶವಾಗುತ್ತಿದೆ.
Related Articles
Advertisement
ಇತ್ತ ಮಾನವ ತನ್ನ ತಪ್ಪು, ಅತಿರೇಕಗಳನ್ನು ಮುಂದುವ ರಿಸುತ್ತಿದ್ದರೆ, ಅತ್ತ ಭೂಮಿ ತಾಯಿ ನೂರಾರು ಅವಘಡಗಳ ಮೂಲಕ ಎಚ್ಚರಿಕೆ ಕೊಡುತ್ತಿದ್ದಾಳೆ. ಈ ಎಲ್ಲ ಸಂದರ್ಭಗಳಲ್ಲಿ ಮಾನವನ ವರ್ತನೆಯ ಬಗೆಗೆ ಒಂದಿಷ್ಟು ಚರ್ಚೆಗಳು ನಡೆಯುತ್ತವೆಯಾದರೂ ವಾರ, ತಿಂಗಳು ಕಳೆದ ಬಳಿಕ ನಮ್ಮ ಮನಃಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದೆ ಯಥಾಪ್ರಕಾರ ನಮ್ಮ ವರ್ತನೆಗಳನ್ನು ಮುಂದುವರಿಸುತ್ತಲೇ ಬಂದಿ ದ್ದೇವೆ. ಇದಕ್ಕೆ ತೀರಾ ಇತ್ತೀಚಿನ ನಿದರ್ಶನ ಎಂದರೆ ಕೊರೊನಾ ಸಾಂಕ್ರಾಮಿಕ ಪಸರಿಸಿದ ಸಂದರ್ಭ. ಇಷ್ಟೆಲ್ಲ ನಮ್ಮ ಕಣ್ಣೆದುರೇ ನಡೆಯುತ್ತಿದ್ದರೂ ನಾವು ಗುಲಗಂಜಿ ಯಷ್ಟೂ ಬದಲಾಗಿಲ್ಲ ಎಂಬುದು ದುರಂತ.
ನಮ್ಮ ಹಕ್ಕು, ಕರ್ತವ್ಯಗಳಲ್ಲಿ ಕಿಂಚಿತ್ ಹಸ್ತಕ್ಷೇಪ, ಅನ್ಯಾಯವಾದಾಗಲೂ ಬೀದಿಗಿಳಿದು ಹೋರಾ ಡುತ್ತೇವೆ. ಆದರೆ ಅನ್ನ, ಆಹಾರ, ಗಾಳಿಯನ್ನಿತ್ತು ನಮ್ಮನ್ನು ಪೋಷಿಸುವ ಪರಿಸರದ ಮೇಲೆ ನಾವು ಇಷ್ಟೆಲ್ಲ ಅನ್ಯಾಯ ಎಸಗುತ್ತಿದ್ದರೂ ಒಂದು ದಿನವೂ ನಾವು ಆ ಕುರಿತು ಚಿಂತಿಸಿಯೇ ಇಲ್ಲ. ಈ ವಿಷಯದಲ್ಲಿ ನಮ್ಮದು ದಿವ್ಯ ಮೌನ. ಭೂಮಿಯ ದುರ್ಬಳಕೆ, ಪರಿಸರದ ಮೇಲಿನ ಅತ್ಯಾಚಾರದ ತೀವ್ರತೆ ನಮಗಿನ್ನೂ ಅರ್ಥ ವಾಗಿಲ್ಲ. ಆದರೆ ಇದು ಅರ್ಥವಾಗುವ ಕಾಲ ತುಂಬಾ ದೂರವಿಲ್ಲ ಎಂಬುದನ್ನು ಈ ಪ್ರಕೃತಿ ಪದೇಪದೆ ಎಚ್ಚರಿಸುತ್ತಲೇ ಇದೆ.
ಸ್ವ ಹಿತಾಸಕ್ತಿ ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಬೀದಿಗಿಳಿಯುವ ನಾವು ಅರಣ್ಯ ಉಳಿಸಲು, ಅಕ್ರಮ ಗಣಿಗಾರಿಕೆ ತಡೆಯಲು ಹೋರಾಟ ಮಾಡಿದ ಉದಾಹರಣೆಗಳು ತೀರಾ ವಿರಳ. ಇತ್ತೀಚೆಗೆ ಕೊಡಗಿನಲ್ಲಿ ಹೆಲಿಟೂರಿಸಂ ನಿರ್ಮಿಸಲು ದೊಡ್ಡ ಪ್ರಮಾಣದ ಮರಗಳ ಮಾರಣಹೋಮಕ್ಕೆ ಆದೇಶವಾದಾಗ ಅದನ್ನು ಅಲ್ಲಿನ ಜನ, ಜನಪ್ರತಿನಿಧಿಗಳು ಪಕ್ಷಭೇದ ಮರೆತು ಪ್ರತಿಭಟಿಸಿದ್ದರು. ಇಂಥ ಕಾರ್ಯಗಳು ದೇಶದ ಮೂಲೆ ಮೂಲೆಗಳಲ್ಲಿ ನಡೆಯಲೇಬೇಕಾಗಿದೆ. ಅದರ ಬದಲು 200 ಮರಗಳನ್ನು ಕಡಿಯಲು ಅನುಮತಿ ಪಡೆದು, 300 ಮರಗಳನ್ನು ಕಡಿಯುವವರ ಸಾಲಿನಲ್ಲಿ ಗುರುತಿಸಿಕೊಳ್ಳುವುದು ಆತ್ಮಹತ್ಯೆಗೆ ಸಮನಾದುದು.
ಈ ದಿನ ನಾವು ಒಂದಷ್ಟು ಪ್ರತಿಜ್ಞೆಗಳನ್ನು ಮಾಡಿಕೊಳ್ಳಲೇಬೇಕಾಗಿದೆ. ಕೆಲವೊಂದು ವೈಯಕ್ತಿಕ ಜವಾಬ್ದಾರಿಗಳನ್ನು ನಾಳಿನ ಒಳಿತಿಗಾಗಿ ಅನುಸರಿಸುವುದು ಕೂಡ ಅನಿವಾರ್ಯ. ಗಿಡವನ್ನು ನೆಟ್ಟು, ಪೋಷಿಸುವುದು, ಭೂಮಿಗೆ ಕಂಟಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವುದು, ತ್ಯಾಜ್ಯವನ್ನು ಮರುಬಳಕೆ ಮಾಡುವುದು, ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯದಿರುವುದು ಇತ್ಯಾದಿ ಕಾರ್ಯಗಳನ್ನು ಬದ್ಧತೆಯಿಂದ ನಾವು ನಡೆಸಿಕೊಟ್ಟಾಗ ಪರಿಸರ ಜಾಗೃತಿ, ಉಳಿವು ಸಾಧ್ಯ. ಜನರಲ್ಲಿ ಯಾವಾಗ ಪರಿಸರ ಪ್ರಜ್ಞೆ ಮೂಡುತ್ತದೆಯೋ ಅಂದು ವ್ಯವಸ್ಥೆ ಮುಕ್ಕಾಲು ಭಾಗ ಸರಿಯಾದಂತೆ. ಪ್ರಸಕ್ತ ವರ್ಷದಲ್ಲಿ ಭೂಮಿ ಮತ್ತು ಪರಿಸರಸ್ನೇಹಿಯಾಗಿ ಬದುಕುವ ಸಂಕಲ್ಪ ನಮ್ಮೆಲ್ಲರದಾಗಲಿ.
– ಕಾರ್ತಿಕ್ ಅಮೈ