ದೇವನಹಳ್ಳಿ: ದೇಶಿ ಕ್ರೀಡೆಗಳಾದ ಕಬಡ್ಡಿ, ಖೋಖೋ, ಇತರೆ ಕ್ರೀಡೆಗಳು ಉಳಿಸಿ ಬೆಳೆಸಲು ಯುವಕರು ಮುಂದಾಗಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾಧ್ಯಕ್ಷ ಎಚ್.ಎಂ.ರವಿಕುಮಾರ್ ತಿಳಿಸಿದರು.
ತಾಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಜಿಲ್ಲಾ ಬಿಜೆಪಿ ರೈತಮೋರ್ಚಾ ಹಾಗೂ ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಟದಿಂದ ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಮೋದಿ ಕಪ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಅ.2ರವರೆಗೆ ಪ್ರತಿನಿತ್ಯವೂ ಒಂದೊಂದು ಕಾರ್ಯಕ್ರಮ ನಡೆಸಲಾಗುತ್ತಿದೆ. ಯುವಜನರನ್ನು ಉತ್ತೇಜಿಸಲು ಗ್ರಾಮೀಣ ಸೊಬಗಿನ ಕಬಡ್ಡಿ ಪಂದ್ಯ ಆಯೋಜಿಸಿದ್ದೇವೆ. ಪ್ರಧಾನಿ ಮೋದಿ ವಿಶ್ವದ ನಾಯಕರು. ಆಟದಲ್ಲಿ ಸೋಲು ಗೆಲುವು ಸಾಮಾನ್ಯ. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಸಮತೋಲನ, ಧೈರ್ಯ, ಸೋತಾಗ ಅಳುಕದೆ ಮರುಪ್ರಯತ್ನಿಸುವ ಛಲ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರೈತರ ಖಾತೆಗೆ ಹಣ: ಪ್ರಧಾನಿ ಮೋದಿ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಪ್ರಧಾನಮಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 6 ಸಾವಿರ ರೂ., ರಾಜ್ಯ ಸರ್ಕಾರದಿಂದ 4 ಸಾವಿರ ರೂ. ಹಾಕುತ್ತಿದೆ. ರೈತರ ಖಾತೆಗೆ ಹಣ ಹಾಕಿದ ಮೊದಲ ಸರ್ಕಾರ ಬಿಜೆಪಿಯದ್ದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಟದ ಸಂಚಾಲಕ ನೀಲೇರಿ ಅಂಬರೀಶ್‌ಗೌಡ ಮಾತನಾಡಿ, ಕಬಡ್ಡಿ ಪಂದ್ಯಾವಳಿಯಲ್ಲಿ 20 ತಂಡ ಭಾಗವಹಿಸಿವೆ. ಪ್ರಧಾನಿ ಮೋದಿ ಸರ್ಕಾರ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಪ್ರತಿ ಕ್ರೀಡಾಪಟುಗೆ ಉತ್ತೇಜನ ನೀಡಿ, ಸಾಧನೆ ಮಾಡಲು ಅನುಕೂಲ ಮಾಡುತ್ತಿದೆ. ದೇಶವು ಸಾಕಷ್ಟು ಪ್ರಶಸ್ತಿ ಗೆದ್ದು ಬರುತ್ತಿದೆ ಎಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್ ಮಾತನಾಡಿ, ಪ್ರಧಾನಿ ಮೋದಿ ಸರ್ಕಾರ 8 ವರ್ಷದಲ್ಲಿ ಉತ್ತಮ ಜನಪರ ಯೋಜನೆಗಳನ್ನು ರೂಪಿಸಿದೆ. ಪ್ರತಿ ಮನೆಗೂ ಒಂದಲ್ಲ ಒಂದು ಕಾರ್ಯಕ್ರಮ ನೀಡಿ ಮಾದರಿ ಸರ್ಕಾರವಾಗಿದೆ. ಸೆ.17ರಿಂದ ಅ.2ರವರೆಗೆ ಸೇವಾಪಾಕ್ಷಿಕ ಸಪ್ತಾಹವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ಈ ವೇಳೆಯಲ್ಲಿ ತಾಲೂಕು ಅಸಂಘಟಿತ ಕಾರ್ಮಿಕ ಪ್ರಕೋಷ್ಟದ ಸಂಚಾಲಕ ಸುರೇಶಾಚಾರ್, ತಾಲೂಕು ಸೊಸೈಟಿ ನಾಮನಿರ್ದೇಶಕ ರವಿಚಂದ್ರ, ಗ್ರಾಪಂ ಸದಸ್ಯ ಮುನೀಂದ್ರ, ಆನಂದ್‌ಗೌಡ, ಮುಖಂಡ ಅಂಬರೀಶ್, ವೇಣುಗೋಪಾಲ್, ಗುರುಪ್ರಸಾದ್, ನಂಜೇಗೌಡ, ಪ್ರವೀಣ್, ಮುನಿರಾಜು, ಮಹೇಶ್ ಇದ್ದರು.