ಹುಬ್ಬಳ್ಳಿ: ರಾಜ್ಯದಲ್ಲಿ ಹಲವು ಜನಪದ ಕಲೆಗಳು ಬೆಳೆದು ಬಂದಿದ್ದು, ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿ-ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಹೇಳಿದರು. ಸಿದ್ಧಾರೂಢ ಮಠದ ಆವರಣದಲ್ಲಿ ಕನ್ನಡ-ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ರವಿವಾರ ನಡೆದ ಜನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಜನಪದ ಕಲೆ ತುಂಬಾ ಪುರಾತನವಾದದ್ದು. ಅದು ಪ್ರಸ್ತುತ ಅವಸಾನದಂಚಿನಲ್ಲಿದ್ದು, ಅದನ್ನು ಉಳಿಸಿ-ಬೆಳೆಸುವ ಕೆಲಸ ನಿರಂತರವಾಗಿ ಮಾಡಬೇಕೆಂದರು.
ಜಾನಪದ ಕಲೆಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಿ ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಜನಪದಕಲಾವಿದರು ಅಭಿಮಾನದಿಂದ ಕಲೆಗಳನ್ನು ಪ್ರದರ್ಶಿಸಬೇಕು. ಜನಪದ ಕಲೆಗಳು ನಾಡಿನ ಮೂಲ ಸಂಸ್ಕೃತಿಗಳಾಗಿವೆ. ಆಧುನಿಕ ಜಗತ್ತಿನಲ್ಲಿ ಈ ಕಲೆಗಳನ್ನು ಕಾಪಾಡಬೇಕಿದೆ. ಉತ್ತರ ಕರ್ನಾಟಕ ಜನಪದ ಕಲೆಗಳ ತವರು. ಬಾಳಪ್ಪ ಹುಕ್ಕೇರಿ, ಗುರುರಾಜ ಹೊಸಕೋಟಿ, ಮಲ್ಲಿಕಾರ್ಜುನ ಮನ್ಸೂರ್, ರಾಜಶೇಖರ ಮನ್ಸೂರ್, ಎಂ.ಎಸ್ ಸಾಹುಕಾರ ಜನಪದ ಕಲೆಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಪ್ರತಿವರ್ಷವೂ ಜನಪದ ಜಾತ್ರೆಯನ್ನು ಆಯೋಜಿಸಬೇಕು. ಕಳೆದ ನಾಲ್ಕು ವರ್ಷದಿಂದ ಧಾರವಾಡ ಉತ್ಸವ ಆಯೋಜನೆ ಮಾಡಿಲ್ಲ, ಇಂತಹ ಸಂದರ್ಭದಲ್ಲಿ ಜಾನಪದ ಜಾತ್ರೆ ಆಯೋಜನೆ ಮಾಡಿರುವುದು ಸಂತಸ ತಂದಿದೆ. ಮಕ್ಕಳಿಗೆ ಜನಪದ ಕಲೆಗಳನ್ನು ಕಲಿಸಿ ರೂಢಿಸಬೇಕು ಎಂದರು.
ಕನ್ನಡ – ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಚಲವಾದಿ ಪ್ರಾಸ್ತಾವಿಕ ಮಾತನಾಡಿ, ಕನ್ನಡ-ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅವರು 15 ಜಿಲ್ಲೆಗಳಲ್ಲಿ ಜನಪದ ಜಾತ್ರೆಗಳನ್ನು ನಡೆಸುವಂತೆ ನಿರ್ದೇಶನ ನೀಡಿದ್ದಾರೆ. ಮುಖ್ಯಮಂತ್ರಿಗಳು ಜನಪದ ಕಲೆ ಉಳಿಸುವ ನಿಟ್ಟಿನಲ್ಲಿಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಇದರಿಂದ ಯೋಜನೆ ರೂಪಿಸಲು, ಕಾರ್ಯಕ್ರಮ ನಡೆಸಲು ಅನುಕೂಲವಾಗಿದೆ ಎಂದು ಹೇಳಿದರು.
ರಾಜು ಸಬ್ಬನಳ್ಳಿ, ಸಿದ್ದಾರ್ಥ, ರಾಮೂ ಮೂಲಗಿ, ಸಿದ್ಧಾರೂಢ ಮಠದ ಟ್ರಸ್ಟ್ ಚೇರ್ಮೇನ್ ಡಿ.ಡಿ. ಮಾಳಗಿ ಇನ್ನಿತರರಿದ್ದರು. ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಸ್ವಾಗತಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಹಾಗೂ ಆಕಾಶವಾಣಿ ಕಲಾವಿದೆ ಆರತಿ ಕಾರ್ಯಕ್ರಮ ನಡೆಸಿಕೊಟ್ಟರು.