ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ವೀರ ಸಾವರ್ಕರ್ ಫೋಟೋ ಹಾಕಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಧರಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸದೆ ಫೋಟೋ ಅಳವಡಿಸುವ ನಿರ್ಧಾರ ತೆಗೆದುಕೊಂಡಿರುವುದು ಕಾಂಗ್ರೆಸ್ ಆಕ್ಷೇಪಕ್ಕೆ ಕಾರಣವಾಗಿದೆ.
ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ಕಾಗೇರಿ ಅವರಿಗೆ ಪತ್ರ ಬರೆದು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಸೇರಿದಂತೆ ಬಹುತೇಕ ಎಲ್ಲ ಕಾಂಗ್ರೆಸಿಗರು ವಿರೋಧಿಸಿದ್ದಾರೆ. ಹೀಗಾಗಿ ಈ ಬಾರಿಯ ವಿಧಾನಸಭೆ ಕಲಾಪ ಆರಂಭದಿಂದಲೇ ವಾದ- ವಿವಾದದ ಗೂಡಾಗುವ ಸಾಧ್ಯತೆ ಇದೆ
.
ಇದನ್ನೂ ಓದಿ:ಮರಾಠಿ ಮಹಾಮೇಳಾವ್ ಗೆ ಅನುಮತಿ ನಿರಾಕರಣೆ: ವೇದಿಕೆ ತೆರವುಗೊಳಿಸಿದ ಅಲೋಕ ಕುಮಾರ್
ಸ್ಪೀಕರ್ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಸಾವರ್ಕರ್ ಒಬ್ಬ ವಿವಾದಾತ್ಮಕ ವ್ಯಕ್ತಿ. ಅವರ ಬದಲು ದಾರ್ಶನಿಕರು, ವಿಚಾರವಂತರು, ಸಂತರ ಫೋಟೋ ಅಳವಡಿಸುವುದು ಸೂಕ್ತ ಎಂದು ಹೇಳಿದ್ದಾರೆ.
ಆದರೆ ಸ್ಪೀಕರ್ ಕಾಗೇರಿ ಅವರು ಸಾವರ್ಕರ್ ಸೇರಿದಂತೆ ಏಳು ಜನ ಗಣ್ಯರ ಫೋಟೋವನ್ನು ಅಳವಡಿಸುವ ನಿರ್ಧಾರದಿಂದ ಹಿಂದೆ ಸರಿಯದೇ ಇರಲು ನಿರ್ಧರಿಸಿದ್ದಾರೆ.