ಸವಣೂರು: ಭಾಷೆ ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧ ಬೆಸೆಯುವ ಸಾಧನ. ಭಾಷೆಯಿಲ್ಲದಿದ್ದರೆ ಜಗತ್ತೆಲ್ಲವೂ ಕತ್ತಲೆಯಲ್ಲಿ ಮುಳುಗುತ್ತಿತ್ತು ಎಂದು ಸಮ್ಮೇಳನದ ಸರ್ವಾಧ್ಯಕ್ಷ ಶ್ರೀಕಂಠಗೌಡ ಅಯ್ಯನಗೌಡರ ಹೇಳಿದರು.
ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ತಾಲೂಕು 7 ನೇ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿದ ಅವರು, ಭಾವನೆಗಳಿಲ್ಲದಿದ್ದರೆ ಸಾಹಿತ್ಯ, ಸಂಸ್ಕೃತಿ ಅರಿವಾಗುತ್ತಿರಲಿಲ್ಲ. ಭಾಷೆಯಿಲ್ಲದೆ ಮಾನವನಿಲ್ಲ, ಜನಾಂಗವಿಲ್ಲ, ಸಮಾಜವಿಲ್ಲ. ಭಾಷೆ ಬೆಳೆದಂತೆ ಭಾವನೆಗಳು, ಭಾವನೆಗಳು ಬೆಳೆದಂತೆ ಬಾಂಧವ್ಯ, ಬಾಂಧವ್ಯದಿಂದ ಬಾಳು ಬೆಳೆದು ಪರಿಸರ ಪಸರಿಸಿದಂತೆ ಬದುಕು, ಬದುಕಿನ ಬೆಳಕಿನಲ್ಲಿ ಪ್ರಗತಿ, ಪ್ರಗತಿಯಿಂದ ಭವ್ಯತೆ ಲಭ್ಯವಾಗುತ್ತದೆ ಎಂದರು.
ಹೇಳುವುದು, ಕೇಳುವುದು, ಓದುವುದು, ಬರೆಯುವುದು, ಭಾಷಾ ಕೌಶಲ್ಯಗಳು ವಿಜ್ಞಾನದ ಆವಿಷ್ಕಾರದಿಂದ ಬದಲಾಗುತ್ತ ನಡೆದಿದೆ. ಮಾತೃ ಭಾಷೆ ಮೊದಲು ನಂತರ ರಾಷ್ಟ್ರ, ಜಾಗತಿಕ ಭಾಷೆಗಳ ಅರಿವಿನೊಂದಿಗೆ ಜಗತ್ತಿನ ಹೆಚ್ಚಿನ ಭಾಷೆಗಳನ್ನು ತಿಳಿದು ಬೆಳಕನ್ನು ಎಲ್ಲ ಕಡೆಯಿಂದ ಸ್ವೀಕರಿಸಿ ಬೆಳೆಯಬೇಕು. ಇಂಥ ಬೆಳವಣಿಗೆಗೆ ಈ ಸಾಹಿತ್ಯ ಸಮ್ಮೇಳನ ಕಾರ್ಯಗಳು ವಿದ್ಯಾರ್ಥಿಗಳನ್ನು ವಿಶ್ವಮಟ್ಟದಲ್ಲಿ ಬೆಳಗಿಸಲಿ ಎಂದು ಹೇಳಿದರು.
ಸರ್ಕಾರ ಸಮಾನ ಶಿಕ್ಷಣ ಒದಗಿಸಲಿ. ಮಾತೃ ಭಾಷೆ ಮೂಲಕ ಕನ್ನಡ ಶಾಲೆಗಳನ್ನು ಮುನ್ನಡೆಸುವಂತಾಗಬೇಕು. ಕನ್ನಡ ಪತ್ರಿಕೆಗಳನ್ನು ಸರ್ಕಾರ ರಕ್ಷಿಸಿ ಬೆಳೆಸಬೇಕು. ಇಂಗ್ಲಿಷ್ ಭಾಷೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ವಿಷಯಗಳ ಪರಿಜ್ಞಾನ ಪೂರ್ಣವಾಗದು. ಜಗತ್ತಿನಲ್ಲಿಯೇ ಮೊಟ್ಟಮೊದಲ ವಿಶ್ವವಿದ್ಯಾಲಯ ರಾಜ್ಯದ ಶಿಗ್ಗಾವಿ ತಾಲೂಕಿನಲ್ಲಿ ಆರಂಭವಾಗಿದ್ದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದರು.
ದೇಶದ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ವಿ.ಕೃ. ಗೋಕಾಕರಿಗೆ ಲಭಿಸಿದ್ದು, ಸವಣೂರಿನ ಹಿರಿಮೆಯಾಗಿದೆ. ಇಲ್ಲಿನ ಸಂಸ್ಥಾನದ ನವಾಬರು ಶಿಕ್ಷಣ, ಕೃಷಿ, ತೋಟಗಾರಿಕೆಗಳಿಗೆ ಪ್ರೇರಣೆ ನೀಡುವ ಮೂಲಕ ಕಾಯಕವಂತರನ್ನು ಪ್ರೋತ್ಸಾಹಿಸಿದ್ದರು. ನವಾಬರಿಂದ ಪ್ರಾರಂಭವಾದ ಸರ್ಕಾರಿ ಮಜೀದ ಹೈಸ್ಕೂಲ್ ಈಗ ಕಾಲೇಜಿನವರೆಗೆ ಬೆಳೆದಿದೆ. ಸವಣೂರು ತಾಲೂಕಿನ ಏಳು ಶಾಲೆಗಳು ಶತಮಾನ ಕಂಡಿರುವುದು ಈ ನೆಲದಲ್ಲಿನ ಶಿಕ್ಷಣ ಹಾಗೂ ಸಾಹಿತ್ಯದ ಕುರಿತ ಒಲವನ್ನು ತೋರುತ್ತದೆ. ಇಂತಹ ಶಾಲೆಗಳನ್ನು ರಕ್ಷಿಸಿ ಕನ್ನಡ ಉಳಿಸುವ ಮೂಲಕ ಇತರೆ ಭಾಷೆಗಳನ್ನೂ ಪ್ರೋತ್ಸಾಹಿಸುವಂತಾಗಬೇಕು. ಜತೆಗೆ ದೇಸಿ ಪದಕೋಶಗಳನ್ನು ಸಿದ್ಧಪಡಿಸಬೇಕು ಎಂದು ಹೇಳಿದರು.
ಕನ್ನಡವನ್ನು ಜಾಗತೀಕರಣಗೊಳಸಬೇಕು. ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಬಡತನ, ಅಸ್ಪೃಶ್ಯತೆ, ಭಿಕ್ಷಾಟನೆ, ನಿರುದ್ಯೋಗ ನಿವಾರಣೆಗೆ ವಚನಕಾರರ ಸಾಹಿತ್ಯದ ವಿವಿಧ ಕಾಯಕಗಳ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಡೆಯಬೇಕು. ಹಿಂದೂ-ಮುಸ್ಲಿಂರ ಐಕ್ಯತೆ ಸಂಕೇತವಾಗಿ ಉಳಿಸಿಕೊಂಡು ಬಂದ ತಾಣಗಳನ್ನು ರಕ್ಷಿಸಲು ಯೋಜನೆ ರೂಪಿಸುವಂತಾಗಬೇಕು. ಕೇಂದ್ರ ಸಾಹಿತ್ಯ ಪರಿಷತ್ತು ಶಾಖೋಪಶಾಖೆಗಳ ಮೂಲಕ ಅನೇಕ ವರ್ಷಗಳಿಂದ ವಿವಿಧ ಯೋಜನೆ ರೂಪಿಸಿ ಜಿಲ್ಲೆ, ತಾಲೂಕು, ಹಳ್ಳಿಗಳಿಗೆ ಸಂದೇಶ ಬೀರುತ್ತ ಭಾಷೆ,ನಾಡು-ನುಡಿ, ಕಲೆ-ಇತಿಹಾಸ ಸಂವರ್ಧನೆಗಾಗಿ ದುಡಿಯುತ್ತ ಬಂದಿದ್ದು, ಈಗಲೂ ದುಡಿಯುತ್ತಲಿದೆ. ಆ ನಿಟ್ಟಿನಲ್ಲಿ ಸರ್ವರೂ ಕನ್ನಡ ತೇರನ್ನು ಮುನ್ನಡೆಸಲಿ ಎಂದರು.