Advertisement

ಖಾಸಗಿ ಗೋದಾಮಿನಲ್ಲಿ ಸರ್ಕಾರಿ ದಾಸ್ತಾನು

01:17 PM Aug 01, 2019 | Naveen |

ಸವಣೂರು: ಕೃಷಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ವಿತರಣೆಯಾಗಬೇಕಾಗಿದ್ದ ಜಿಂಕ್‌ ಹಾಗೂ ಬೋರಾನ್‌ ರಾಸಾಯನಿಕ ಪೋಷಕಾಂಶಗಳನ್ನು ಅನಧಿಕೃತವಾಗಿ ಶೇಖರಿಸಿ ಇಟ್ಟಿದ್ದ ಗೋದಾಮಿನ ಮೇಲೆ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಕೃಷಿ ಇಲಾಖೆಯ ಕೆಲ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ರಾಸಾಯನಿಕ ಪೋಷಕಾಂಶಗಳನ್ನು ಖಾಸಗಿ ಗೋದಾಮಿನಲ್ಲಿ ಶೇಖರಿಸಿದ್ದಾರೆ ಎಂದು ಕರವೇ ಹಾಗೂ ರೈತರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಖಾಸಗಿ ಮಾರಾಟ ಮಳಿಗೆಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಾಣೇಶ ಹಾದಿಮನಿ ಭೇಟಿನೀಡಿ ಪರಿಶೀಲನೆ ಕೈಗೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೃಷಿ ಇಲಾಖೆ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ನೀಡಬೇಕಿದ್ದ ಬೆಳೆಗಳಿಗೆ ನೀಡಲಾಗುವ ಪೋಷಕಾಂಶಗಳಾದ ಜಿಂಕ್‌ ಮತ್ತು ಬೋರಾನ್‌ ಚೀಲಗಳನ್ನು ಸಹಾಯಕ ಕೃಷಿ ಅಧಿಕಾರಿ ಬಿ.ಎಸ್‌. ಕಲಾಲ ಖಾಸಗಿ ಗೋದಾಮಿನಲ್ಲಿಟ್ಟು ಮಾರಾಟ ಮಾಡುತ್ತಿದ್ದಾರೆ. ಈ ಕೂಡಲೇ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರವೇ ಪದಾಕಾರಿಗಳು ಪಟ್ಟು ಹಿಡಿದರು.

ಈ ಕುರಿತು ಸಹಾಯಕ ಕೃಷಿ ಅಧಿಕಾರಿ ಬಿ.ಎಸ್‌.ಕಲಾಲ ಮಾತನಾಡಿ, 2016ರಲ್ಲಿ ತಾಲೂಕಿನ ಹತ್ತಿಮತ್ತೂರ ರೈತ ಸಂಪರ್ಕ ಕೇಂದ್ರಕ್ಕೆ ಕಳುಹಿಸಬೇಕಾಗಿದ್ದ ಪೋಷಕಾಂಶವನ್ನು ಸಂಪರ್ಕ ಕೇಂದ್ರದಲ್ಲಿ ಸಂಗ್ರಹದ ಅಡಚಣೆಯಿಂದ ಉಳಿದಿದ್ದನ್ನು ಅಂದಿನ ಅಧಿಕಾರಿ ಎಚ್.ಆರ್‌.ಮುಂದಿನಮನಿ ಎಪಿಎಂಸಿ ಗೋದಾಮಿನಲ್ಲಿ ಶೇಖರಿಸಿದ್ದರು. ಆದರೆ, ಕಳೆದ ಹಲವು ತಿಂಗಳ ಹಿಂದೆ ಎಪಿಎಂಸಿ ಗೋದಾಮು ತೆರವುಗೊಳಿಸಲು ತಿಳಿಸಿದ ಹಿನ್ನೆಲೆಯಲ್ಲಿ ಖಾಸಗಿ ಗೋದಾಮಿನಲ್ಲಿ ಇಡಲಾಗಿದೆ ಹೊರತು ಮಾರಾಟ ಮಾಡುತ್ತಿಲ್ಲ ಎಂದು ಸ್ಪಷ್ಟಿಕರಣ ನೀಡಲು ಮುಂದಾದರು.

ಆಕ್ರೋಶಗೊಂಡ ಕರವೇ ಕಾರ್ಯಕರ್ತರು, ಜು.30 ರಂದು ಹಣ ನೀಡಿ ನೀವು ನೇಮಿಸಿರುವ ಖಾಸಗಿ ವ್ಯಕ್ತಿಯಿಂದ ಪೋಷಕಾಂಶಗಳನ್ನು ಖರೀದಿಸಿದ್ದೇವೆ ಎಂದು ಬಿಳಿಹಾಳೆಯಲ್ಲಿ ಬರೆದುಕೊಟ್ಟ ಚೀಟಿ ಪ್ರದರ್ಶಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

Advertisement

ಕೃಷಿ ಇಲಾಖೆಯಲ್ಲಿ ಅವಧಿ ಮೀರಿದ ಬೋರಾನ್‌ ವಿತರಿಸಲಾಗುತ್ತಿದೆ. ಆದರೆ, ಕಾಳಸಂತೆಯಲ್ಲಿ ದಿನಾಂಕ ಹೊಂದಿರುವುದನ್ನು ವಿತರಿಸಲಾಗುತ್ತಿದೆ. ಇದು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಕೃಷಿ ಇಲಾಖೆ ಕಚೇರಿಯಲ್ಲಿ ಒಂದು ವರ್ಷದಿಂದ ಪೋಷಕಾಂಶ ಸೇರಿದಂತೆ ಕೃಷಿ ಉಪಕರಣಗಳನ್ನು ಖರೀದಿಸಿದ ರೈತರಿಗೆ ಯಾವುದೇ ಅಧಿಕೃತ ರಸೀದಿ ನೀಡದೆ ಹೆಚ್ಚುವರಿ ಹಣ ಪಡೆದು ಬಿಳಿಹಾಳೆಯಲ್ಲಿ ಬರೆದುಕೊಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದರು.

ನಂತರ, ಕೃಷಿ ಸಹಾಯಕ ನಿರ್ದೇಶಕ ಪ್ರಾಣೇಶ ಹಾದಿಮನಿ ಮಾತನಾಡಿ, ನಾನು ಅಧಿಕಾರ ವಹಿಸಿಕೊಂಡು ಕೇವಲ 4 ದಿನಗಳಾಗಿವೆ. ಹೀಗಾಗಿ ಒಂದು ವಾರ ಸಮಯ ಕೊಡಿ, ಈ ಕುರಿತು ತನಿಖೆ ಕೈಗೊಂಡು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕರವೇ ಜಿಲ್ಲಾ ಉಪಾಧ್ಯಕ್ಷ ನಂದೀಶ ಗೊಡ್ಡೆಮ್ಮಿ, ಪದಾಧಿಕಾರಿಗಳಾದ ಪ್ರಭು ಗೊಡ್ಡೆಮ್ಮಿ, ರುದ್ರಪ್ಪ ಗಿರಿಯಪ್ಪನವರ, ಬಸವರಾಜ ಅಮ್ಮನವರ, ಬಸವರಾಜ ಗಿರಿಯಪ್ಪನವರ, ಮಹೇಶ ಗೊಡ್ಡೆಮ್ಮಿ, ಜಗದೀಶ ಚಕ್ರಸಾಲಿ, ರಾಜಪ್ಪ ಚಕ್ರಸಾಲಿ ಹಾಗೂ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next