Advertisement

ಸವಣೂರು :ಅಡಿಕೆಯೊಂದಿಗೆ ಕರಟಿತು ಕೃಷಿಕರ ಬದುಕು!

05:10 PM Apr 05, 2019 | pallavi |
ಪ್ರವೀಣ್‌ ಚೆನ್ನಾವರ
ಸವಣೂರು : ಕಳೆದ ಕೆಲ ದಿನಗ ಳಿಂದ ಬೆಂಕಿಯಂತೆ ಸುಡುತ್ತಿರುವ ಬಿಸಿಲಿನ ತಾಪ ತಡೆಯಲಾಗದೆ ಅಡಿಕೆ
ಮರಗಳು ಕರಟಿ ಹೋಗಲಾರಂಭಿಸಿವೆ. ಇದರೊಂದಿಗೆ ಕೃಷಿಕರ ಬದುಕಿನ ಧಾರೆಯೂ ಚಿಂತಾಜನಕ ಸ್ಥಿತಿಯಲ್ಲಿದೆ!
ಮಳೆಗಾಲದಲ್ಲಿ ಎಡಬಿಡದೆ ಸುರಿದ ವಿಪರೀತ ಮಳೆಯಿಂದಾಗಿ ಅಡಿಕೆ ಫಸಲಿಗೆ ಕೊಳೆರೋಗ ಬಾಧಿಸಿ ಕಂಗೆಟ್ಟಿದ್ದ ಕೃಷಿಕರ ಪಾಲಿಗೆ ಈ ಬಿಸಿಲ ಧಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಇದೇ ಸ್ಥಿತಿ ಮೇ ತಿಂಗಳ ಕೊನೆಯ ತನಕ ಮುಂದುವರಿದಲ್ಲಿ ಅಡಿಕೆ ಮರಗಳು ನಾಶವಾಗಿ ಮುಂದಿನ ಫಸಲು ನಷ್ಟವಾಗುತ್ತದೆ. 2 ದಿನದ ಹಿಂದೆ ಮಳೆ ಸುರಿದಿದ್ದರೂ, ಬಿಸಿಲಿನ ತೀವ್ರತೆ ಮತ್ತಷ್ಟು
ಹೆಚ್ಚಿದೆ.
ತಾಲೂಕಿನ ಹಲವಾರು ಕಡೆಗಳಲ್ಲಿ ಅಡಿಕೆ ತೋಟಗಳು ಒಣಗಿ ಹೋಗಿವೆ. ಗ್ರಾಮಾಂತರ ಪ್ರದೇಶದ ಕೃಷಿಕರು ಅಡಿಕೆ ಕೃಷಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನದಲ್ಲಿದ್ದಾರೆ. ಅಡಿಕೆ ಮರಗಳು ಕರಟಿ ಹೋಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗದೆ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ.
ಕೆಲವೊಂದು ಕಡೆಗಳಲ್ಲಿನ ಕೊಳವೆಬಾವಿಗಳಲ್ಲಿಯೂ ನೀರು ಬರಿದಾಗಿದೆ. ಸರಕಾರ ಹೊಸ ಕೊಳವೆ ಬಾವಿ ಕೊರೆಯಲು ಅವಕಾಶ ಕೂಡ ನೀಡುತ್ತಿಲ್ಲ. ಹಾಗಾಗಿ ನೀರಿಲ್ಲದ ಪ್ರದೇಶಗಳಲ್ಲಿನ ರೈತರು ಹೊಸ ಕೊಳವೆಬಾವಿ ಕೊರೆದು ಕೃಷಿ ಉಳಿಸಿಕೊಳ್ಳುವಂತೆಯೂ ಇಲ್ಲ. ಕೆಲವೊಂದು ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಇದ್ದರೂ, ವಿದ್ಯುತ್‌ ಸಮಸ್ಯೆ ಕೃಷಿ ಉಳಿಸಿಕೊಳ್ಳುವ ರೈತರ ಪ್ರಯತ್ನಕ್ಕೆ ಅಡ್ಡಿಯಾಗಿದೆ.
ಹಿಂಗಾರಗಳು ಕರಟಿವೆ ಜಿಲ್ಲೆಯ ಜೀವನಾಡಿ ಬೆಳೆಯಾಗಿರುವ ಅಡಿಕೆಗೆ ಜೀವಜಲದ ಬಾಧೆ ಒಂದು ಕಡೆಯಿಂದಾದರೆ, ಇನ್ನೊಂದು ಕಡೆಯಲ್ಲಿ ಬಿಸಿಲಿನ ಧಗೆಯೂ ಅಡಿಕೆ ಮರವನ್ನು ಸುಡುತ್ತಿದೆ. ಜಿಲ್ಲೆಯಲ್ಲಿ ಎಲ್ಲೆಡೆ ಜಲಮಟ್ಟ ಕುಸಿದಿದ್ದು, ಕೃಷಿಕರ ನೀರಾಶ್ರಯದ ಕೆರೆ, ಬಾವಿಗಳು ಬತ್ತಿ ಹೋಗಿವೆ. ನೀರಿನ ಪ್ರಮಾಣ ಕಡಿಮೆಯಾದ ಪ್ರದೇಶಗಳಲ್ಲಿನ ಅಡಿಕೆ ತೋಟಗಳು ಬಿಸಿಲಿನ ಧಗೆ ಸಹಿಸಿಕೊಳ್ಳಲಾಗದೆ ಕರಟಿ ಹೋಗಲಾರಂಭಿಸಿದೆ. ಈಗಾಗಲೇ ಕೆಲವೊಂದು ಕಡೆಗಳ ತೋಟಗಳಲ್ಲಿ ಅಡಿಕೆ ಮರಗಳು ಸತ್ತು ಹೋಗಿವೆ.
ಇನ್ನು ಹಲವಾರು ತೋಟಗಳಲ್ಲಿ ಅಡಿಕೆ ಮರದ ಸೋಗೆಗಳು ಸುಟ್ಟು ಜೋತು ಬೀಳಲಾರಂಭಿಸಿದ್ದು, ಫಸಲು ನೀಡಬೇಕಾಗಿದ್ದ ಹಿಂಗಾರಗಳು ಕರಟಿ ಹೋಗಿವೆ. ಮುಂದೆ ಮರಗಳು ಜೀವಂತ ಉಳಿದರೂ ಫಸಲು ನೀಡದ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್‌ ಕಣ್ಣು ಮುಚ್ಚಾಲೆ ದಿನಕ್ಕೆ ಕೇವಲ 3-4 ಗಂಟೆ ಮಾತ್ರ ತ್ರೀಫೇಸ್‌ ವಿದ್ಯುತ್‌ ನೀಡಲಾಗುತ್ತಿದೆ.
ಈ ರೀತಿಯಾದರೆ ಕೃಷಿಯನ್ನು ಉಳಿಸಿಕೊಳ್ಳುವುದಾದರೂ ಹೇಗೆ? ಬಿಸಿಲ ಧಗೆಯಿಂದ ಕಾಯ್ದ ಭೂಮಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿದರೂ ಏನೂ ಪ್ರಯೋಜನ ಆಗುತ್ತಿಲ್ಲ. ಸುಡು ಬಿಸಿಲಿನಿಂದಾಗಿ ಅಡಿಕೆ ಹಿಂಗಾರ ಸಂಪೂರ್ಣ ಕರಟಿ ಹೋಗುತ್ತಿದೆ. ಸ್ವಲ್ಪ ಪ್ರಮಾಣದ ನೀರು ಹಾಯಿಸಿ ಸಾಯುವ ಮರವನ್ನು ಉಳಿಸಿಕೊಳ್ಳಬಹುದೇ ಹೊರತು ಫಸಲು ಪಡೆಯಲು ಸಾಧ್ಯವಿಲ್ಲ.
 ಸಕಾಲದಲ್ಲಿ ಮಳೆ ಬಾರದೆ ಬಿಸಿಲಿನ ತಾಪ ಹೀಗೆಯೇ ಮುಂದುವರಿದಲ್ಲಿ ಅಡಿಕೆ ಕೃಷಿಕರು ಅತಂತ್ರ ಸ್ಥಿತಿಗೆ ಒಳಗಾಗುವುದು ಖಂಡಿತ
Advertisement

Udayavani is now on Telegram. Click here to join our channel and stay updated with the latest news.

Next