ಸವದತ್ತಿ: ತಾಲೂಕಿನ ಬಸಿಡೋಣಿ ಗ್ರಾಮದ ಸರಕಾರಿ ಶಾಲೆಯ 5, 6 ಮತ್ತು 7 ನೇ ತರಗತಿಯ ಸುಮಾರು 50ಕ್ಕೂ ಹೆಚ್ಚು ಮಕ್ಕಳು ವಿಷಾಹಾರದಿಂದ ಅಸ್ವಸ್ಥಗೊಂಡು ತಾಲೂಕಾಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.
ಶಾಲೆಯಲ್ಲಿ 239 ಮಕ್ಕಳಿಗೆ ಅನಿಮಿಯ ಮುಕ್ತ ಭಾರತ್ ಯೋಜನೆಯಡಿ ಕಬ್ಬಿನಾಂಶಯುಕ್ತ ಪೋಲಿಕ್ ಆಸಿಡ್ ಮಾತ್ರೆ 12 ಗಂಟೆಗೆ ನೀಡಲಾಗಿತ್ತು. ಮಧ್ಯಾಹ್ನ ಬಿಸಿಯೂಟದ ನಂತರ ಓರ್ವ ವಿದ್ಯಾರ್ಥಿನಿಗೆ ಹೊಟ್ಟೆ ನೋವಿನಿಂದ ಅವಸ್ಥಗೊಂಡಿದ್ದಳು. ಮೊದಲು 21 ಮಕ್ಕಳು, ಕ್ರಮೇಣ 20 ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ತ್ವರಿತವಾಗಿ ಶಾಲೆಯಿಂದ ನೇರವಾಗಿ ಆಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.
ಮಕ್ಕಳ ಅಸ್ವಸ್ಥತೆಗೆ ಕಾರಣ ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಆಸ್ಪತ್ರೆಗೆ ದಾಖಲಾದ ಮಕ್ಕಳು ಎಲ್ಲರು ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ.
ತಲೆ ಸುತ್ತು ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಮಕ್ಕಳಿಗೆ ಸದ್ಯ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಪ್ರಾಣಾಪಾಯದ ಭಯ ಇಲ್ಲ. ಗುಣಮುಖರಾದ ಮಕ್ಕಳನ್ನು ಗ್ರಾಮಕ್ಕೆ ಮರಳಿ ಕಳುಹಿಸಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಮಹೇಶ ಚಿತ್ತರಗಿ ತಿಳಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ಕರುಣೇಶಗೌಡ, ಪಿಎಸೈ ಶಿವಾನಂದ ಗುಡಗನಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.