Advertisement
ಕಣ್ಣು ಹಾಯಿಸಿದ ಕಡೆಯೆಲ್ಲ ಜನ ಸಮೂಹ. ಉಧೋ ಉಧೋ ಯಲ್ಲಮ್ಮ ನಿನ್ನಾಲ್ಕುಧೋ ಎಂಬ ದೇವಿಯ ನಾಮಸ್ಮರಣೆ ದಶ ದಿಕ್ಕುಗಳಲ್ಲಿ ಪ್ರತಿಧ್ವನಿಸಿತು. ಭಕ್ತ ಸಮೂಹ ಕುಟುಂಬ ಸಮೇತರಾಗಿ ಅಮ್ಮನ ಸನ್ನಿ ಧಿಗೆ ಬಂದು ವಿವಿಧ ಖಾದ್ಯ ತಯಾರಿಸಿ ನೈವೇದ್ಯ ಮತ್ತು ಪರಡಿ ತುಂಬಿಸಿದರು. ಸಂಪ್ರದಾಯದಂತೆ ಪೂಜಾದಿ ಕೈಂಕರ್ಯ ನಡೆಸಿ ಜಗವನ್ನು ರಕ್ಷಿಸಮ್ಮಾ ಜಗದಮ್ಮಾ ಎಂದು ಬೇಡಿಕೊಂಡರು.
ಅಮ್ಮನಿಗೆ ಪ್ರಿಯವೆನಿಸಿದ ಕುಂಕುಮ-ಭಂಡಾರ ವ್ಯಾಪಾರ ಬಲು ಜೋರಾಗಿತ್ತು. ದೇವಸ್ಥಾನ ಸುತ್ತಲಿರುವ ಕುಂಕುಮ-ಭಂಡಾರದ ಅಂಗಡಿಗಳಿಗೆ ಮುಗಿ ಬಿದ್ದು ಖರೀದಿ ನಡೆಸಿದರು. ಯಲ್ಲಮ್ಮ ದೇವಿ ಮುತ್ತೈದೆಯಾದ ಪೌರಾಣಿಕ ಹಿನ್ನೆಲೆಯಲ್ಲಿ ಭಕ್ತರು ಹಳೆ ಪರಡಿ ಬದಲಾಯಿಸಿ ಹೊಸ ಪರಡಿ, ಹಣ್ಣು, ಕಾಯಿ, ಬಳೆ, ಕುಂಕುಮ-ಭಂಡಾರ ಖರೀದಿಸಿ ಪರಡಿ ತುಂಬಿಸುವ ಕಾರ್ಯ ನಡೆಸಿದರು.
Related Articles
ಮುತ್ತೈದೆ ಹುಣ್ಣಿಮೆಯೆಂದು ಕರೆಯುವ ಭರತ ಹುಣ್ಣಿಮೆಯಂದು ಯಲ್ಲಮ್ಮ ದೇವಿ ಪತಿ, ಋಷಿ ಜಮದಗ್ನಿ ಮರುಜನ್ಮ ಪಡೆಯುತ್ತಾರೆ. ಇದರ ಪ್ರತೀಕವಾಗಿ ಪ್ರತಿವರ್ಷ ಭರತ ಹುಣ್ಣಿಮೆ ದಿನ ಎಲ್ಲ ಮುತ್ತೈದೆಯರು ದೇವಸ್ಥಾನಕ್ಕೆ ಬಂದು ಮೊದಲಿದ್ದ ಬಳೆಗಳನ್ನು ತೆಗೆಸಿ, ಹೊಸ ಹಸಿರು ಬಳೆಗಳನ್ನು ಧರಿಸುವ ವಾಡಿಕೆ ಇದೆ. ಹೀಗಾಗಿ ಗುಡ್ಡದಲ್ಲಿ ಹಸಿರು ಬಳೆಗಳ ವ್ಯಾಪಾರ ಭಾರೀ ಸದ್ದು ಮಾಡಿತು.
Advertisement