ಸವದತ್ತಿ: ಆರಂಭದಿಂದಲೂ ನಿರಂತರ ಮುನ್ನಡೆ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್ ವೈದ್ಯ ಅವರು ಮೊದಲ ಬಾರಿ ಗೆಲವಿನ ನಗೆ ಬೀರಿ ವಿಧಾನಸಭೆ ಪ್ರವೇಶಿಸಿದ್ದು ನಿರಂತರ ಅಧಿಕಾರ ವಂಚಿತ ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಬಿಜೆಪಿಯ ಭದ್ರಕೋಟೆ ಸವದತ್ತಿ ಕ್ಷೇತ್ರ ಛಿದ್ರಗೊಳಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಆಪ್ತ ವಿಶ್ವಾಸ್ ವೈದ್ಯ ಅವರು ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ರತ್ನಾ ಮಾಮನಿ ವಿರುದ್ಧ 14,695 ಮತಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ.
ಹೆಚ್ಚು ಅಂತರದಿಂದ ಗೆಲುವಿನ ದಡ ತಲುಪಿದ ಇವರ ಅಭಿವೃದ್ಧಿ ಪರ್ವದ ಭರವಸೆ ಹಾಗೂ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ ಮುನ್ನೆಲೆಗೆ ತಂದಿವೆ. ಮೊದಲು ಸುತ್ತಿನ ಎಣಿಕೆ ಆರಂಭದಿಂದಲೂ ಮುನ್ನಡೆ ಸಾಧಿಸುತ್ತಾ ಬಂದಿರುವ ವೈದ್ಯ ಅವರು ಪ್ರತಿ ಸ್ಪರ್ಧಿ ಬಿಜೆಪಿ ಮುನ್ನಡೆಗೆ ಅವಕಾಶವನ್ನೇ ನೀಡಲಿಲ್ಲ. ಮೂರು ಅವಧಿಗೆ ಆಡಳಿತ ನಡೆಸಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಪಡಿಸದ ಕಾರಣಕ್ಕಾಗಿ ಬಿಜೆಪಿಗೆ ಅನುಕಂಪವೂ ಸಾಥ್ ನೀಡಿಲ್ಲ. ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಜೆಡಿಎಸ್‌ನ ಸೌರಭ ಚೋಪ್ರಾ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಿ. ಆನಂದ ಚೋಪ್ರಾ ಮತ್ತು ದಿ. ಆನಂದ ಮಾಮನಿ ಅಗಲಿಕೆಗಳು ಅನುಕಂಪವಾಗಿ ಪ್ರಭಾವ ಬೀರಲಿಲ್ಲ.
ಲಿಂಗಾಯತ ಮತ ಪಡೆಯುವಲ್ಲಿ ಬಿಜೆಪಿ ಎಡವಿದ್ದು, ಇದನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಂಡ ಕಾಂಗ್ರೆಸ್ ಮತಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರುಗಳ ಅಬ್ಬರದ ಪ್ರಚಾರ ಮತ್ತು ಸಂಘಟನೆಗೆ ಹೆಚ್ಚಿನ ಮಹತ್ವ ನೀಡಿದ್ದು ಗೆಲುವಿಗೆ ಪೂರಕವಾಗಿದೆ. ಮೂರು ಬಾರಿ ಆಡಳಿತ ನಡೆಸಿ ರಾಜಕಾರಣದಲ್ಲಿ ತಮ್ಮದೇ ಆದ ಅಸ್ತಿತ್ವ ಉಳಿಸಿಕೊಳ್ಳಲು ಆಗದೇ ಮಾಮನಿ ಕುಟುಂಬ ಹಾಗೂ ಕಾಂಗ್ರೆಸ್ ಟಿಕೆಟ್ ಲಭಿಸದೇ ಕೌಜಲಗಿ ಕುಟುಂಬಗಳು ರಾಜಕೀಯದಿಂದ ನೇಪಥ್ಯಕ್ಕೆ ಸರಿದಂತಾಗಿದೆ. ಬ್ರಾಹ್ಮಣ ಸಮುದಾಯದ ವಿಶ್ವಾಸ ವೈದ್ಯ ಮುಸ್ಲಿಂ, ದಲಿತ, ಕುರುಬ, ಲಿಂಗಾಯತ ಹಾಗೂ ಇತರೆ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದಿ. ಆನಂದ ಮಾಮನಿ 62,480, ಪಕ್ಷೇತರ ದಿ. ಆನಂದ ಚೋಪ್ರಾ 56,189, ಹಾಗೂ ಸಧ್ಯ ಜಯಗಳಿಸಿದ ಕಾಂಗ್ರೆಸ್ಸಿನ ವಿಶ್ವಾಸ ವೈದ್ಯ 30,018 ಮತ ಪಡೆದಿದ್ದರು. ಇದರಿಂದ ಎಚ್ಚೆತ್ತ ವಿಶ್ವಾಸ್ ಅವರು ನಿರಂತರ ಪಕ್ಷ ಸಂಘಟನೆ, ಯುವಕರ ಪಡ್ಡೆ ಸೇರಿ ಕ್ಷೇತ್ರದ ಜನರ ಮತ್ತು ರಾಜ್ಯ, ರಾಷ್ಟ್ರ ನಾಯಕರ ಗಮನ ತನ್ನತ್ತ ಸೆಳೆದು ಈ ಬಾರಿ ಅಧಿಕಾರಕ್ಕೇರಿದ್ದಾರೆ.
ಕ್ಷೇತ್ರದಲ್ಲಿ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ದೂರ ಉಳಿದು ರೋಸಿ ಹೋಗಿದ್ದ ಕಾರ್ಯಕರ್ತರಿಗೆ ಈದೀಗ ಲಭಿಸಿದ ಗೆಲವು ಅತೀವ ಸಂಭ್ರಮವನ್ನುಂಟು ಮಾಡಿದೆ. ಸಮುದಾಯ ಬಲ ಇಲ್ಲದಿದ್ದರೂ ಕ್ಷೇತ್ರದಲ್ಲಿ ನಡೆಸಿದ ಸಾಮಾಜಿಕ ಕಾರ್ಯ, ಕಾಂಗ್ರೆಸ್‌ಗಿರುವ ದೊಡ್ಡ ಮತ ಬ್ಯಾಂಕ್, ಇತರ ಪಕ್ಷಗಳಿಂದಾಗದ ಅಭಿವೃದ್ಧಿ, ಕಾರ್ಯಕರ್ತರ ಕಡೆಗಣನೆ, ಬಿಜೆಪಿಗೆ ಲಿಂಗಾಯತ ವಿರೋಧ ಸೇರಿ ವೈದ್ಯರಿಗೆ ಪ್ರಮುಖ ಅಂಶಗಳ ಪ್ಲಸ್‌ನಿಂದಾಗಿ ಬದಲಾವಣೆ ಬಯಸಿದ ಜನ ಕಾಂಗ್ರೆಸ್ ಬೆಂಬಲಿಸಿದ್ದು ನಿಚ್ಚಳವಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಪ್ರಮುಖರ ಕಡೆಗಣನೆ, ಕುಟುಂಬ ರಾಜಕಾರಣದಿಂದ ಬೇಸತ್ತ ಬಿಜೆಪಿಗರು ಕಾಂಗ್ರೆಸ್ ಬೆಂಬಲಿಸಿದ್ದು ಗೆಲುವಿಗೆ ಕಾರಣವಾಗಿದೆ.
ಕಾಂಗ್ರೆಸ್ ಬಂಡಾಯದಿಂದ ಬಿಜೆಪಿಗೆ ಈ ಬಾರೀ ಲಾಭವಾಗಲಿಲ್ಲ. ಎಲ್ಲ ನ್ಯೂನ್ಯತೆಗಳನ್ನು ಸರಿ ಪಡಿಸಿ, ಮುಖಂಡರು ಒಗ್ಗಟ್ಟಿನಿಂದ ಕಾಂಗ್ರೆಸ್ ಗೆಲ್ಲಲು ಶ್ರಮಿಸಿದ್ದಾರೆ. ನಿರೀಕ್ಷೆಗೂ ಮೀರಿ ಸವದತ್ತಿ ಜನತೆ ನನ್ನ ಆಶೀರ್ವದಿಸಿ ಗೆಲ್ಲಿಸಿದ್ದಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಅಭಿರುಚಿಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ನಡೆಸಲು ಸದಾ ಸಿದ್ಧ. ಜಾತಿ ಮತ ಪಂತ ಬದಿಗಿರಿಸಿ ನಾವೆಲ್ಲರೂ ಒಂದೇ ಎಂದು ಎಲ್ಲರೊಟ್ಟಿಗೆ ಕ್ಷೇತ್ರವನ್ನು ಅಭಿವೃದ್ಧಿಯತ್ತ ಸಾಗಿಸೋಣ.
-ವಿಶ್ವಾಸ್ ವೈದ್ಯ, ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕರು, ಸವದತ್ತಿ.
ಇದನ್ನೂ ಓದಿ: ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಅವರಿಗೆ ಸಿಕ್ಕ ಮತಗಳೆಷ್ಟು?