Advertisement

ಮೂಡಿಗೆರೆ: ಬಂಟ್ವಾಳದ ಸಾವದ್ ನನ್ನು ಹತ್ಯೆ ಮಾಡಿ ದೇವರಮನೆ ಸಮೀಪ ಗುಡ್ಡದಲ್ಲಿ ಶವ
ಎಸೆದು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತರನ್ನು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ದಾವೂದ್ ಅಮೀರ್(25), ಅಬ್ದುಲ್ ರಹೀಜ್ (23), ಬಂಟ್ವಾಳದ ಕಾವಲ ಮೂಡೂರು ಗ್ರಾಮದ ಆಫ್ರಿದಿ(23), ಮಹಮ್ಮದ್ ಇರ್ಷಾದ್(20) ಎಂದು ಗುರುತಿಸಲಾಗಿದೆ.

ಈಗಾಗಲೇ ಕೊಲೆಗೆ ಸಂಬಂಧಿಸಿದಂತೆ ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝೈನುಲ್ಲಾ ಎಂಬುವರನ್ನು  ಬಂಧಿಸಲಾಗಿದ್ದು, ತಲೆಮರೆಸಿಕೊಂಡಿದ್ದ ನಾಲ್ವರನ್ನು ಭಾನುವಾರ ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿದಂತಾಗಿದೆ.

ಜೂನ್ 8 ರಂದು ದೇವರಮನೆ ಸಮೀಪ ರಸ್ತೆಯಂಚಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಆ ಶವ ತಮ್ಮ ಮಗನದೆಂದು ಬಂಟ್ವಾಳ ಮೂಲದ ಕುಟುಂಬ ಗುರುತಿಸಿತ್ತು.ಕೊಲೆಗೀಡಾದ ಸಾವದ್ ಮಾದಕವಸ್ತು ವ್ಯಸನಿಯಾಗಿದ್ದ ಮತ್ತು ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿತ್ತು. ಗಾಂಜಾ ಮಾರಾಟ ವ್ಯವಹಾರದಲ್ಲಿ ಉಂಟಾದ ಗಲಾಟೆ ಕೊಲೆಗೆ ಕಾರಣವಾಗಿತ್ತು ಎಂದು ತಿಳಿದುಬಂದಿತ್ತು.

Advertisement

ದಕ್ಷಿಣ ಕನ್ನ ಜಿಲ್ಲೆಯ ಪಡುಬಿದ್ರೆಯ ಬೆಂಗ್ರೆ ಎಂಬಲ್ಲಿ ಸಾವದ್ ನನ್ನು ಕೊಲೆ ಮಾಡಿ ಹೆಣವನ್ನು ತಂದು ದೇವರಮನೆ ಗುಡ್ಡದಲ್ಲಿ ಎಸೆದು ಹೋಗಿದ್ದ ಬಗ್ಗೆ ಆರೋಪಿಗಳು ಹೇಳಿಕೆ ನೀಡಿದ್ದರು.

ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮೇಗೌಡ ಮತ್ತು ಬಣಕಲ್ ಎಸ್.ಐ. ಜಂಜೂರಾಜ್ ಮಹಾಜನ್ ನೇತೃತ್ವದ ಪೊಲೀಸ್ ತಂಡ ನಿನ್ನೆ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next