ಕುಂದಾಪುರ: ಸಮಾಜದಲ್ಲಿ ಇನ್ನೊಬ್ಬರ ನೋವು, ನಲಿವುಗಳಿಗೆ ಸ್ಪಂದಿಸುವ ಮಾನವೀಯ ಮನೋಭಾವವೇ ಸೌಹಾರ್ದ. ಭಾವನೆಗಳ ಭಾವೈಕ್ಯತೆ ತುಂಬಿರುವ ದೇಶದಲ್ಲಿ ಮದರ್ ಥೇರೆಸಾ, ಅಬ್ದುಲ್ ಕಲಾಂ ನಮಗೆಲ್ಲ ಸ್ಫೂರ್ತಿಯಾಗಬೇಕು ಎಂದು ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠ್ಠಲದಾಸ ಸ್ವಾಮೀಜಿ ಹೇಳಿದರು. ಅವರು ಕೆಥೋಲಿಕ್ ಸಭೆ ಉಡುಪಿ ಪ್ರದೇಶ ಕುಂದಾಪುರ ವಲಯ ಸಮಿತಿ ಆಶ್ರಯದಲ್ಲಿ ಪ.ಪೂ. ಕಾಲೇಜಿನ ಆವರಣದಲ್ಲಿ ರವಿವಾರ ಸಂಜೆ ನಡೆದ ಸೌಹಾರ್ದ ಕ್ರಿಸ್ಮಸ್ ಉದ್ಘಾಟಿಸಿ ಮಾತನಾಡಿದರು.
ಎಲ್ಲವೂ ಯಾಂತ್ರಿಕವಾಗಿರುವ ಇಂದಿನ ಕಾಲದಲ್ಲಿ ನಾವು ಯಾವುದೇ ಮಾನವೀಯ ಮೌಲ್ಯವಿಲ್ಲದ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ಭಾವನೆಯಿಂದ ಹೊರಬರಲು ಒಗ್ಗಟ್ಟಿನ ಮಂತ್ರ ಪಠಿಸುವ ಅಗತ್ಯವಿದೆ. ಪ್ರೀತಿ, ಪ್ರೇಮ ಮರೆತು ಇಂದಿನ ಯಾಂತ್ರಿಕ ಪ್ರಪಂಚದಲ್ಲಿ ಕಳೆದು ಹೋಗುತ್ತಿರುವ ನಮ್ಮಲ್ಲಿ, ಸಹೋದರತೆ ಅರಿವು ಮೂಡಿ ಸಮಾಜ ಕಟ್ಟುವ ಕಾರ್ಯಗಳು ನಡೆಯಬೇಕು ಎಂದು ಹೇಳಿದರು.
ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೋ ಕ್ರಿಸ್‌ಮಸ್ ಸಂದೇಶ ನೀಡಿ, ಹರಿವ ನದಿಗಳು ಕೊನೆಗೆ ಒಟ್ಟಾಗಿ ಸಮುದ್ರ ಸೇರುವಂತೆ ವಿವಿಧ ಧರ್ಮದ ದಾರಿಗಳು ಕೊನೆಗೊಳ್ಳುವುದು ಭಗವಂತನ ಮಡಿಲಲ್ಲಿ. ಶ್ರೇಷ್ಠವಾದ ಹಾಗೂ ಶಾಂತಿಯುತವಾದ ಸಮಾಜ ಕಟ್ಟಬೇಕು ಎನ್ನುವುದು ಧರ್ಮವು ನಮಗೆ ಹೇಳಿಕೊಡುತ್ತದೆ ಎಂದರು. ಹೃದಯವೆಂಬ ದೇವ ಮಂದಿರದಲ್ಲಿ ಸರ್ವರನ್ನು ಪೂಜಿಸುವುದು ನೈಜ ಸೌಹಾರ್ದತೆ. ಬಹು ತತ್ವದಲ್ಲಿ ನಂಬಿಕೆ ಇರುವ ಭಾರತದಲ್ಲಿ ರಾಜಕೀಯ ಕಾರಣಕ್ಕಾಗಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ದಿಕ್ಸೂಚಿ ಭಾಷಣದಲ್ಲಿ ಸದ್ಭಾವನಾ ವೇದಿಕೆ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಹೇಳಿದರು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ಸ್ಟ್ಯಾನ್ಲಿ ತಾವ್ರೊ, ಸಿಎಸ್‌ಐ ಇಗರ್ಜಿ ಧರ್ಮಗುರು ಕಿಶೋರ ಕುಮಾರ, ಜಡ್ಕಲ್‌ನ ಸೈಂಟ್ ಜಾರ್ಜ್ ಇಗರ್ಜಿ ಧರ್ಮಗುರು ವರ್ಗಿàಸ್ ಪುದಿಯಡತ್ತ್, ಸಾಸ್ತಾನ ಸೈಂಟ್ ಥೋಮಸ್ ಆರ್ಥೋಡಕ್ಸ್ ಇಗರ್ಜಿ ಧರ್ಮಗುರು ನೋಯಲ್ ಲೂವಿಸ್, ಕೆಥೊಲಿಕ್ ಸಭಾ ಅಧ್ಯಕ್ಷ ಮೈಕಲ್ ಪಿಂಟೊ, ಕಾರ್ಯದರ್ಶಿ ಲೀನಾ ತಾವ್ರೊ, ಕಾರ್ಯಕ್ರಮ ಸಂಚಾಲಕ ಎಲ್ರಾಯ್ ಕಿರಣ್ ಕ್ರಾಸ್ತಾ ಉಪಸ್ಥಿತರಿದ್ದರು. ಸಮಾಜ ಸೇವಕ ವಾಸುದೇವ ಹಂದೆ, ಸೀರಾಜ್ ಅಹಮ್ಮದ್ ಹಾಗೂ ಲಿಫ್ಟ್‌ನ್ ಒಲಿವೇರಾ ಅವರನ್ನು ಗೌರವಿಸಲಾಯಿತು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿದರು. ವಿನೋದ್ ಕ್ರಾಸ್ತಾ, ಜಾನ್ಸ್ ಡಿ’ಆಲ್ಮೇಡಾ, ನ್ಯಾನ್ಸಿ ಡಿ’ಸೋಜಾ ಸಮ್ಮಾನ ಪತ್ರ ವಾಚಿಸಿದರು. ಮೇಬಲ್ ಡಿಸೋಜಾ ಹಾಗೂ ಫೈವನ್ ಡಿಸೋಜಾ ನಿರೂಪಿಸಿದರು.
ಏಕತೆಯ ಸಂಕೇತ
ಶಾಂತಿ, ಪ್ರೀತಿ ಮತ್ತು ದಯೆಯ ಸಂದೇಶವನ್ನು ಪ್ರತೀ ಧರ್ಮ ಪ್ರತಿಪಾದಿಸುತ್ತದೆ. ಎಲ್ಲಧರ್ಮಗಳು ಕೂಡ ಇತರ ಧರ್ಮಗಳನ್ನು ಗೌರವಿಸಬೇಕೆಂದು ಹೇಳುತ್ತದೆ. ಎಲ್ಲರೂ ಒಂದೇ ಮಾನವ ಕುಲದವರಾಗಿದ್ದಾರೆಂದು ಅದು ಪ್ರತಿಪಾದಿಸುತ್ತದೆ.
– ಡಾ| ಜೆರಾಲ್ಡ್ ಐಸಾಕ್ ಲೊಬೊ, ಧರ್ಮಾಧ್ಯಕ್ಷ, ಉಡುಪಿ ಧರ್ಮ ಪ್ರಾಂತ