ಸದಾ ಹೊಸತನ್ನು ಕೊಡುವ ನಿಟ್ಟಿನಲ್ಲಿ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ವಾಹಿನಿ ಎನಿಸಿಕೊಂಡಿರುವ ಸ್ಟಾರ್ ಸುವರ್ಣ, ಇದೀಗ ಮತ್ತೂಂದು ಹೊಸತನ ತುಂಬಿರುವ ಧಾರಾವಾಹಿ ಪ್ರಸಾರ ಮಾಡುತ್ತಿದೆ. “ಸತ್ಯಂ ಶಿವಂ ಸುಂದರಂ’ ಇದು ಈಗಾಗಲೇ ಆ.7 ರಿಂದ (ಸೋಮವಾರ) ರಾತ್ರಿ 7ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಅನೇಕ ವಿಶೇಷತೆಗಳಿವೆ. ಇಲ್ಲಿ ಇದೇ ಮೊದಲ ಸಲ ಹೀರೋ ಚೇತನ್ ಚಂದ್ರ, ಆದಿಲೋಕೇಶ್ ಹಾಗೂ ಸುಷ್ಮಾ ವೀರ್ ನಟಿಸುತ್ತಿದ್ದಾರೆ.
ಅಷ್ಟೇ ಅಲ್ಲ, ಈ ಧಾರಾವಾಹಿಗೆ “ಬಾಹುಬಲಿ’, “ಅರುಂಧತಿ’ ಚಿತ್ರಗಳಲ್ಲಿ ಕೆಲಸ ಮಾಡಿರುವ ಹೈದರಾಬಾದ್‌ನ ಖ್ಯಾತ ಕಲಾ ನಿರ್ದೇಶಕ ನಾಣಿ ಅವರು ಅದ್ಧೂರಿಯಾಗಿರುವ ವಿಶೇಷ ಸೆಟ್‌ವೊಂದನ್ನು ಹಾಕಿದ್ದಾರೆ. ಬಿಡದಿ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿ ಹಾಕಿರುವ ವಿಶೇಷ ಸೆಟ್, ಶ್ರೀಮಂತರ ಮನೆಯೇನೋ ಎಂಬಂತೆಯೇ ಕಂಗೊಳಿಸುತ್ತಿದೆ. ವಿಶೇಷವಾಗಿ ನಿರ್ಮಿಸಿರುವ ಆ ಮನೆಯೇ ಧಾರಾವಾಹಿಯ ಹೈಲೈಟ್‌ಗಳಲ್ಲೊಂದು.
ಸುಮಾರು 20 ದಿನಗಳ ಅವಧಿಯಲ್ಲೇ ಅದ್ಭುತ ಸೆಟ್ ಹಾಕಿರುವ ನಾಣಿ ಅವರು, ಅಷ್ಟೊಂದು ಕಡಿಮೆ ಅವಧಿಯಲ್ಲಿ ಬೆರಗಾಗುವಂತಹ ನೆ ನಿರ್ಮಿಸಿ, ನೋಡುಗರಲ್ಲಿ ಅಚ್ಚರಿ ಮೂಡುವಂತೆ ಮಾಡಿದ್ದಾರೆ. ಐದು ಐಶಾರಾಮಿಯಾಗಿರುವ, ಅಷ್ಟೇ ವಿಶಾಲವುಳ್ಳ ಕೊಠಡಿಗಳು, ದೊಡ್ಡದ್ದೊಂದು ಹಾಲ್, ಹೊರಾಂಗಣದಲ್ಲಿ ಪಾರ್ಕ್, ಸ್ವಿಮ್ಮಿಂಗ್ ಫೂಲ್ ಸೆಟ್ ಸೇರಿದಂತೆ ರಾಜಮನೆತನದಷ್ಟೇ ಕಲರ್‌ಫುಲ್ ಎನಿಸುವ ಸೆಟ್‌ನಲ್ಲಿ ದುಬಾರಿ ಉಪಕರಣಗಳೇ ತುಂಬಿವೆ.
“ಸತ್ಯ ಶಿವಂ ಸುಂದರಂ’ ಧಾರಾವಾಹಿ ಅಚೀಚೆ ಚಿತ್ರೀಕರಣಗೊಳ್ಳದೆ, ಅಲ್ಲಿಯೇ ಶೂಟಿಂಗ್ ಮಾಡುವಷ್ಟರ ಮಟ್ಟಿಗೆ ಎಲ್ಲಾ ರೀತಿಯ ಉಪಕರಣಗಳು, ಆ ಮನೆಯಲ್ಲಿವೆ ಎಂಬುದು ಇನ್ನೊಂದು ವಿಶೇಷ. ಎಷ್ಟೇ ಆಗಲಿ ಅದೊಂದು ಶ್ರೀಮಂತ ಅರಸರ ಮನೆ. ಹಾಗಾಗಿ, ಅರಸರ ಮನೆ ಹೇಗಿರುತ್ತೋ, ಯಥಾವತ್ ಹಾಗೆಯೇ ಇರಬೇಕು ಎಂಬ ಕಾರಣಕ್ಕೆ ನಿರ್ದೇಶಕ ಪವನ್‌ಕುಮಾರ್ ಅವರು ಕಲಾನಿರ್ದೇಶಕ ನಾಣಿ ಅವರ ಬಳಿ ಸಾಕಷ್ಟು ಚರ್ಚಿಸಿ, ತಮ್ಮ ಕಲ್ಪನೆಯ ಸೆಟ್ ನಿರ್ಮಿಸಿಕೊಂಡಿದ್ದಾರೆ. ಇನ್ನು, ಅಂಥದ್ದೊಂದು ಸೆಟ್ ಹಾಕುವುದಕ್ಕೂ ಧೈರ್ಯ ಬೇಕು.
ಅಂಥದ್ದೊಂದು ಥೈರ್ಯ ಮಾಡಿದ್ದು, ನಿರ್ಮಾಪಕ ಗಂಗಾಧರ್. ಒಂದು ಸಿನಿಮಾಗೆ ಏನೆಲ್ಲಾ ಖರ್ಚಾಗುತ್ತೋ, ಅಷ್ಟೇ ವೆಚ್ಚದಲ್ಲಿ ಈ ಧಾರಾವಾಹಿ ನಿರ್ಮಿಸಲು ಮುಂದಾಗಿದ್ದಾರೆ ಅವರು. ಈಗಾಗಲೇ ಆ ಮನೆಗೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ್ದು, ಆ ಪಾತ್ರಧಾರಿಗಳೆಲ್ಲರೂ ರಿಚ್ ಆಗಿ ಕಾಣಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಅಷ್ಟೇ ರಿಚ್ ಎನಿಸುವಂತಹ ಕಾಸ್ಟೂéಮ್ ಕೂಡ ಮಾಡಿಸಿದ್ದಾರೆ. ಅಲ್ಲಿಗೆ ಸ್ಟಾರ್ ಸುವರ್ಣದಲ್ಲಿ ಅತೀ ಅದ್ಧೂರಿಯಾಗಿ ನಿರ್ಮಾಣಗೊಂಡು, ಪ್ರಸಾರವಾಗುತ್ತಿರುವ ಧಾರಾವಾಹಿ ಅಂದರೆ ತಪ್ಪಿಲ್ಲ.
ಅಂದಹಾಗೆ, ಇದು ಹಿಂದಿಯಲ್ಲಿ ಪ್ರಸಾರವಾಗುತ್ತಿರುವ “ಇಷ್‌ಬಾಜ್’ ಧಾರಾವಾಹಿಯ ರಿಮೇಕ್. ಅಲ್ಲಿ ಅದ್ಭುತ ಯಶಸ್ಸು ಕಂಡಿರುವ ಧಾರಾವಾಹಿಯನ್ನು, ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಪ್ರೇಕ್ಷಕರ ಗಮನಸೆಳೆಯಲಾಗುತ್ತದೆ ಎನ್ನುತ್ತಾರೆ ನಿರ್ದೇಶಕ ಪವನ್‌ಕುಮಾರ್. ಅಂದಹಾಗೆ, ಇದು ಅಣ್ಣತಮ್ಮಂದಿರ ನಡುವಿನ ಪ್ರೀತಿ, ವಾತ್ಸಲ್ಯ ಸಾರುವ ಧಾರಾವಾಹಿ. ಇಲ್ಲೊಂದಷ್ಟು ಪ್ರೀತಿ, ಪ್ರೇಮ, ಮುನಿಸು, ಸಣ್ಣದ್ದೊಂದು ಅಸಮಾಧಾನ ಹೀಗೆ ಹಲವು ಅಂಶಗಳಿವೆಯಂತೆ.
ಚೇತನ್‌ಚಂದ್ರ, ಆದಿಲೋಕೇಶ್, ನೀನಾಸಂ ಅಶ್ವತ್ಥ್, ಸ್ನೇಹಾ, ಅಪೂರ್ವ, ಭಾರ್ಗವಿ ನಾರಾಯಣ್, ಗಿರೀಶ್, ಅಜೇಯ್‌ರಾಜ್, ಅಪೂರ್ವ, ಶಾಲಿನಿ ಇತರರು ಪಾತ್ರ ಹಾಗೂ ತಂಡ ಕುರಿತು ಗುಣಗಾನ ಮಾಡಿದರು. ವಾಸುಕಿ ವೈಭವ್ ರಾಜ್ ಮೋಹನ್ ಸಂಗೀತವಿದೆ.ಪುರುಷೋತ್ತಮ್ ಸಂಭಾಷಣೆ ಬರೆದರೆ, ರಾಮ್‌ಸಿಂಗ್ ಛಾಯಾಗ್ರಹಣವಿದೆ. ವಾಹಿನಿಯ ಮುಖ್ಯಸ್ಥ ಬಿಕಾಸ್ ಹಾಗೂ ಫಿಕ್ಷನ್ ಹೆಡ್ ಸುಷ್ಮಾ ಭಾರಧ್ವಾಜ್, ಸುನೀಲ್, ಪ್ರೀತಿ ಇತರರು ಇದ್ದರು.