Advertisement

ಜ. 30: ಉಪ್ಪಿನಂಗಡಿಯಲ್ಲಿ ಮರಳಿಗಾಗಿ ಸತ್ಯಾಗ್ರಹ

10:03 AM Jan 19, 2019 | |

ಉಪ್ಪಿನಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆಯನ್ನು ಸರಕಾರದ ಗಮನ ಸೆಳೆಯುವ ಮತ್ತು ಬಡವರಿಗೆ ಸುಲಭದಲ್ಲಿ ಮರಳು ದೊರಕುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀಜಿ ಪುಣ್ಯತಿಥಿಯಂದು (ಜ. 30) ಉಪ್ಪಿನಂಗಡಿಯಲ್ಲಿ ಮರಳು ಸತ್ಯಾಗ್ರಹ ನಡೆಸಲು ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ವೇದಿಕೆ ರಾಜ್ಯ ಸಂಚಾಲಕ ವಿಲ್ಫ್ರೆಡ್‌ ಡಿ’ಸೋಜಾ ಅವರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು, ಸಂಘ – ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಸಭೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್‌ ರಹಿಮಾನ್‌ ವಿಷಯ ಪ್ರಸ್ತಾವಿಸಿ, ಮರಳು ಸಮಸ್ಯೆಯಿಂದಾಗಿ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ಅದರಲ್ಲೂ ಬಡವರಿಗೆ ಬಸವ ವಸತಿ ಯೋಜನೆಯಲ್ಲಿ ಮಂಜೂರಾಗಿರುವ ಮನೆಗಳನ್ನು ನಿರ್ಮಿಸಲು ಮರಳು ದೊರಕದಂತಾಗಿದೆ. ಬಡವರು ಮನೆ ನಿರ್ಮಾಣಕ್ಕೆ ಪಿಕ್‌ಅಪ್‌ ವಾಹನದಲ್ಲಿ ಮರಳು ತಂದರೂ ಅದನ್ನು ಪೊಲೀಸರು ಹಿಡಿದು ಕೇಸು ಹಾಕುತ್ತಾರೆ. ದೊಡ್ಡ ಕುಳಗಳು ಲಾರಿಯಲ್ಲಿ ಸಾಗಾಟ ಮಾಡುವುದಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ, ಇದು ಸರಿ ಆಗಬೇಕಾಗಿದೆ. ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ಕಾರ್ಮಿಕ ಮುಖಂಡ ಬಿ.ಎಂ. ಭಟ್ ಮಾತನಾಡಿ, ಆಧುನೀಕರಣದ ಹೆಸರಿನಲ್ಲಿ ಮರಳು ಕೇಂದ್ರೀಕರಣ ಮಾಡುವ ತಂತ್ರ ನಡೆಯುತ್ತಿದೆ. ಮರಳು ದೊರಕುವುದಿಲ್ಲ ಎನ್ನುವಂತಿಲ್ಲ. ಒಂದು ಲೋಡ್‌ ಮರಳು ಬೇಕಾದರೆ 18ರಿಂದ 20 ಸಾವಿರ ರೂ. ಕೊಡಬೇಕು. ಶಾಲಾ ಕಟ್ಟಡ ದುರಸ್ತಿ ಮಾಡಲು ಅನುದಾನ ಬಂದರೆ ಆ ಹಣ ಮರಳು ತರಿಸಲು ಸಾಕಾಗುವುದಿಲ್ಲ. ಇನ್ನು ಬಡವರು ಮನೆಯಲ್ಲಿ ಮದುವೆ ಕಾರ್ಯ ಇದ್ದು, ಮನೆ ರಿಪೇರಿ ಮಾಡೋಣ ಎಂದರೂ ಮರಳು ದೊರಕುತ್ತಿಲ್ಲ. ಪಂಚಾಯತ್‌ ಮೂಲಕ ಸುಲಭವಾಗಿ ಮರಳು ದೊರಕುವಂತೆ ಆಗಬೇಕು, ಈ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಆಗಬೇಕು ಎಂದರು.

ಹೋರಾಟ ಸಮಿತಿ ರಚನೆ
ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಸುರೇಶ್‌ ಅತ್ರಮಜಲು, ಸುನೀಲ್‌ ಕುಮಾರ್‌, ಯು.ಕೆ. ಇಬ್ರಾಹಿಂ, ಚಂದ್ರಶೇಖರ ಮಡಿವಾಳ, ಇಳಂತಿಲ ಗ್ರಾ.ಪಂ. ಅಧ್ಯಕ್ಷ ಯೂಸುಫ್ ಪೆದಮಲೆ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್‌ ಕುಮಾರ್‌, ಸದಸ್ಯರಾದ ಪ್ರಸಿಲ್ಲಾ ಪಿಂಟೋ, ತೇಜ ಕುಮಾರಿ, ತಣ್ಣೀರುಪಂಥ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಂ, ನೆಕ್ಕಿಲಾಡಿ ನಮ್ಮೂರು ನಮ್ಮವರು ಸಂಘಟನೆಯ ಜತೀಂದ್ರ ಶೆಟ್ಟಿ, ಅಬ್ದುಲ್‌ ರಹಿಮಾನ್‌ ಯುನಿಕ್‌, ಆಟೋ ರಿಕ್ಷಾ ಚಾಲಕರ ಸಂಘದ ಖಲಂದರ್‌ ಶಾಫಿ, ಅಬ್ದುಲ್‌ ಲತೀಫ್, ರೋಟರಿ ಸಂಸ್ಥೆಯ ಇಸ್ಮಾಯಿಲ್‌ ಇಕ್ಬಾಲ್‌, ವಿವಿಧ ಸಂಘಟನೆ ಮುಖಂಡರಾದ ಅಶ್ರಫ್ ಬಸ್ತಿಕ್ಕಾರ್‌, ಮಂಜುನಾಥ ಬೆಳ್ತಂಗಡಿ, ರೂಪೇಶ್‌ ಅಲಿಮಾರ್‌, ಇಬ್ರಾಹಿಂ ಮೋನು ಪಿಲಿಗೂಡು, ಆದಂ ಕೊಪ್ಪಳ ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಯಿತು.

Advertisement

ಗಾಂಧೀಜಿ ಮಾದರಿ ಸತ್ಯಾಗ್ರಹ
ಮಾನವ ಬಂಧುತ್ವ ವೇದಿಕೆಯ ಸಂಚಾಲಕ ವಿಲ್ಫ್ರೆಡ್‌ ಡಿ’ಸೋಜಾ ಮಾತನಾಡಿ, ಮರಳು ಸಮಸ್ಯೆ ಗಂಭೀರವಾಗಿದ್ದು, ಇದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ನಾವು ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಮಾಡಿದ ರೀತಿಯಲ್ಲಿ ಮರಳು ಸತ್ಯಾಗ್ರಹ ಮಾಡೋಣ. ಎರಡು ನದಿಗಳು ಹರಿಯುವ ಉಪ್ಪಿನಂಗಡಿ ಇದಕ್ಕೆ ಸೂಕ್ತ ಜಾಗವಾಗಿದ್ದು, ಈ ನಿಟ್ಟಿ ಸಂಘಟಿತರಾಗಿ ಹೋರಾಟ ಮಾಡೋಣ ಎಂದರು. ಅದರಂತೆ ಜ. 30ರಂದು ಗಾಂಧಿ ಪುಣ್ಯತಿಥಿಯಂದು ಮಹಾತ್ಮರು ದಂಡಿ ಯಾತ್ರೆ ಮಾಡಿದ ರೀತಿಯಲ್ಲಿ ಮರಳು ಸತ್ಯಾಗ್ರಹ ನಡೆಸೋಣ ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next