Advertisement

ಎಲೆನಾವದಗಿ ಗ್ರಾಮಸ್ಥರಿಂದ ಸತ್ಯಾಗ್ರಹ

12:22 PM Nov 26, 2021 | Team Udayavani |

ಆಳಂದ: ಗ್ರಾಮೀಣ ಭಾಗದಲ್ಲಿ ನೀರು, ರಸ್ತೆ, ವಿದ್ಯುತ್‌ ಚರಂಡಿಗಳಂತ ಕನಿಷ್ಟ ಸೌಲಭ್ಯಗಳನ್ನು ಸಹ ಒದಗಿಸಲು ಆಗದೇ ಇರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆಡಳಿತ ಸಂಪೂರ್ಣಗಿ ವಿಫಲವಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಎಸ್‌. ಕೊರಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕವು ಕೊಡಲಹಂಗರಗಾ ಗ್ರಾಪಂ ವ್ಯಾಪ್ತಿಯ ಎಲೆನಾವದಗಿ ಗ್ರಾಮದಲ್ಲಿ ಕಾಮಗಾರಿಯ ಅವ್ಯವಹಾರ ತನಿಖೆಗೆ ಒತ್ತಾಯಿಸಿ ಹಾಗೂ ಮೂಲಸೌಲಭ್ಯ ಕಲ್ಪಿಸುವಂತೆ ಗುರುವಾರ ಬಸ್‌ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡು ತಾಪಂ ಕಚೇರಿ ಎದುರು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಆರಂಭಿಸಿದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಗೆ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಂದರೂ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗಿಯಾಗಿ ಹಣ ಲೂಟಿ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಘೋಡಕೆ, ಪ್ರಧಾನ ಕಾರ್ಯದರ್ಶಿ ಶರಣ ಕುಲಕರ್ಣಿ ಮಾತನಾಡಿ ಬೇಡಿಕೆ ಈಡೇರದಿದ್ದಲ್ಲಿ ಉಪವಾಸ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಗುಡಗಿದರು.

ಎಲೆನಾವದಗಿಯ 10 ಲಕ್ಷ ರೂ. ವೆಚ್ಚದ ಸಾಮೂಹಿಕ ಶೌಚಾಲಯ ನಿರ್ನಾಮ ಕೈಗೊಂಡಿದ್ದು, ಪುನರ್‌ ನಿರ್ಮಾಣ ಕೈಗೊಳ್ಳಬೇಕು. ಮಂಜೂರಾದ 3.5 ಲಕ್ಷ ರೂ. ವೆಚ್ಚದ ಶಾಲಾ ಆಟದ ಮೈದಾನ ಕಾಮಗಾರಿಯನ್ನು ಶೀಘ್ರವೇ ಕೈಗೊಳ್ಳಬೇಕು. 15ನೇ ಹಣಕಾಸಿನ ಏಳು ಲಕ್ಷ ರೂ. ದುರ್ಬಳಕೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಬೀದಿ ದೀಪ, ರಸ್ತೆ, ರಚಂಡಿ ನಿರ್ಮಾಣ, ಮಹಿಳಾ ಶೌಚಾಲಯ, ಕುಡಿಯುವ ನೀರಿನ ಪೈಪಲೈನ್‌ ದುರಸ್ತಿ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

Advertisement

ವೇದಿಕೆ ಯುವ ಘಟಕದ ಕಾರ್ಯದರ್ಶಿ ಗಣಪತ ರಾವ್‌ ಪಾಟೀಲ, ಗ್ರಾಮ ಘಟಕದ ಅಧ್ಯಕ್ಷ ದತ್ತಪ್ಪ ಪೂಜಾರಿ, ಉಪಾಧ್ಯಕ್ಷ ಚಂದ್ರಶೇಖರ ಬಿರಾದಾರ, ಗ್ರಾಮದ ನಾಗೇಂದ್ರಪ್ಪ ಪಾಟೀಲ, ಶಿವಲಿಂಗ ನಾಗೋಜಿ, ಈರಣ್ಣಾ ದೇವಂತಗಿ, ಗಂಗಾರಾವ್‌ ಹೊಸದೊಡ್ಡಿ, ಧರ್ಮರಾಯ ಮಾಲಿಪಾಟೀಲ, ಶ್ರೀಪತಿ ಪೂಜಾರಿ, ಅನಿಲ ಜಮಾದಾರ, ಚಂದ್ರಕಾಂತ ದೇವಣಗಾಂವ, ರಾಜು ಬಿರಾದಾರ, ಕುಮಾರ ಬಾವಿಮನಿ, ರವಿಂದ್ರ ಪೂಜಾರಿ, ಮಲ್ಲಪ್ಪ ಪೊಳೆ, ಖಾಜಾಸಾಬ್‌ ಮೈನೋದ್ದೀನ್‌ ಅಬ್ದುಲ್‌ ಖಂಡಾಳೆ, ನಾಗಪ್ಪ ಕೆರೆ, ಅಬ್ದುಲ್‌ ಘನಿ, ಶಾಂತಪ್ಪ ಪೂಜಾರಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ್ದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಕೆ. ಶೀಲವಂತ ಅವರು ಅವ್ಯವಹಾರ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ನೋಟಿಸ್‌ ಜಾರಿಗೊಳಿಸಿ, ವಾರದೊಳಗೆ ಖುದ್ದಾಗಿ ಪರಿಶೀಲನೆ ನಡೆಸುವುದಾಗಿ ಲಿಖೀತ ಭರವಸೆ ನೀಡಿದ ಮೇಲೆ ಸತ್ಯಾಗ್ರಹ ಹಿಂದಕ್ಕೆ ಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next