ಬೆಂಗಳೂರು: ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳು ತಮ್ಮ ಕೈಯಾರೆ ತಯಾರಿಸಿ ಮಾರುವ ಉತ್ಪನ್ನಗಳು ಜಿಎಸ್‌ಟಿಯಿಂದ ಹೊರಗಿಡಬೇಕೆಂದು ಒತ್ತಾಯಿಸಿ ಕಳೆದ ಆರು ದಿನಗಳಿಂದ ನಡೆಸುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ರಂಗಕರ್ಮಿ ಪ್ರಸನ್ನ ಗುರುವಾರ ಕೈ ಬಿಟ್ಟಿದ್ದಾರೆ.
ಗ್ರಾಮ ಸೇವಾ ಸಂಘದ ವತಿಯಿಂದ ಬಸನವಗುಡಿಯ ನಿಡುಮಾಮಿಡಿ ಮಠದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ಅವರು ತಮ್ಮ ಒಡನಾಡಿಗಳು ಹಾಗೂ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಗುರುವಾರ ಸಂಜೆ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರಿಂದ ಎಳನೀರು ಪಡೆದು ಅದನ್ನು ಸೇವಿಸುವ ಮೂಲಕ ಪ್ರಸನ್ನ ಉಪವಾಸ ಮುಕ್ತಾಯಗೊಳಿಸಿದರು.
ನವೆಂಬರ್ 5ರ ಜಿಎಸ್‌ಟಿ ಸಭೆಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದರು.
ಮೋಜಿನ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಉತ್ಪಾದಿಸುವುದೇ ಜಿಡಿಪಿ ಬೆಳವಣಿಗೆ, ದೇಶದ ಬೆಳವಣಿಗೆ ಎಂದು ಸರ್ಕಾರಗಳು ತಿಳಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಗ್ರಾಮೀಣ ಬಡವರ ಉತ್ಪಾದಕತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ಬಡವರಿಗೆ ಹಾಗೂ ಅವರ ಉತ್ಪನ್ನಗಳಿಗೆ ಬೆಲೆ ಕೊಡಿಸುವುದು ಹೋರಾಟದ ದೀರ್ಘಕಾಲೀನ ಉದ್ದೇಶವಾಗಿದೆ. ನಮ್ಮ ಆದರ್ಶ ಸಾಕಾರಗೊಳ್ಳುವವರೆಗೆ ನಾವು ಸುಮ್ಮನಿರುವುದಿಲ್ಲ, ಸಾರ್ವಜನಿಕವಾಗಿ ಪಣ ತೊಡುತ್ತಿದ್ದೇವೆ ಎಂದರು.