Advertisement

ರಾಜ್ಯದ 105 ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸತ್ವ ಕಂಪನಿ ಒಡಂಬಡಿಕೆ

07:35 PM Sep 22, 2022 | Team Udayavani |

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ-2022’ ಆಶಯಗಳಿಗೆ ಪೂರಕವಾಗಿ ರಾಜ್ಯದ 105 ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸತ್ವ ಮೀಡಿಯಾ ಆ್ಯಂಡ್ ಕನ್ಸಲ್ಟಿಂಗ್ ಪ್ರೈ. ಲಿ. ಜತೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ.

Advertisement

ಬುಧವಾರ (ಸೆ.21) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರ ಸಮ್ಮುಖದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ರಾಜ್ಯದ ಯಾದಗಿರಿ, ಹಾವೇರಿ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯ ಒಟ್ಟು 105 ಸರ್ಕಾರಿ ಶಾಲೆಗಳನ್ನು ಒಪ್ಪಂದದ ಅನ್ವಯ ಅಭಿವೃದ್ಧಿಪಡಿಸಲಾಗುತ್ತದೆ.

ಶಾಲೆಗಳು ಹಾಗೂ ಶಾಲೆಗಳ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಕಲಿಕೆ ಮತ್ತು ಫಲಿತಾಂಶ ಸುಧಾರಣೆ, ಮಕ್ಕಳ ನೋಂದಣಿ ಹೆಚ್ಚಳಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಪಠ್ಯಕ್ರಮ, ತರಗತಿಯಲ್ಲಿ ಬೋಧನೆ ಕ್ರಮಗಳ ಸುಧಾರಣೆ ಸೇರಿದಂತೆ ಇನ್ನಿತರ ಉತ್ತಮ ರೂಢಿಗಳ ಕುರಿತು ಶಿಕ್ಷಕರು, ಮುಖ್ಯ ಶಿಕ್ಷಕರು, ಕ್ಷೇತ್ರ ಸಂಪನ್ಮೂಲ ಸಂಯೋಜಕರು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ವೃತ್ತಿ ಸಾಮರ್ಥ್ಯವನ್ನು ವೃದ್ಧಿಪಡಿಸಲಾಗುತ್ತದೆ.

ಶಾಲೆಗಳಲ್ಲಿ ಅಗತ್ಯವಾದ ಎಲ್ಲ ಕಲಿಕಾ ಸಾಮಗ್ರಿಗಳನ್ನು ಒದಗಿಸುವುದು ಮತ್ತು ಉತ್ತಮಪಡಿಸುವುದು, ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಜೊತೆಗೆ ಕಂಪ್ಯೂಟರ್ ಲ್ಯಾಬ್ ಸೌಲಭ್ಯ ಒದಗಿಸಲಾಗುತ್ತದೆ.

Advertisement

ಸ್ಪೋಕನ್ ಇಂಗ್ಲೀಷ್, ‘ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ’ (STEM) ಲ್ಯಾಬ್, ನೈತಿಕ ವಿಜ್ಞಾನ ತರಗತಿ, ಉದ್ಯಮಶೀಲತೆ ಗುಣಗಳು, ಆಲೋಚನೆಗಳ ಕುರಿತು ತರಬೇತಿ, ಕೌಶಲ್ಯ ಮತ್ತು ಭವಿಷ್ಯದಲ್ಲಿ ವೃತ್ತಿ ಜೀವನ ರೂಪಿಸಿಕೊಳ್ಳುವ ಕುರಿತು ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಶಾಲಾಭಿವೃದ್ಧಿ ಸಮಿತಿ, ಶಾಲೆ ಮೇಲುಸ್ತುವಾರಿ ಸಮಿತಿ, ಪಾಲಕರು, ಹಳೇ ವಿದ್ಯಾರ್ಥಿಗಳನ್ನು ಸೇರಿಸಿ ಸಮುದಾಯಗಳ ತೊಡಗಿಸಿಕೊಳ್ಳುವಿಕೆ ಮೂಲಕ ಭವಿಷ್ಯದಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸುವ ಜತೆಗೆ ನಿರಂತರವಾಗಿ ಬೆಳವಣಿಗೆಯಾಗುವಂತೆ ನೋಡಿಕೊಳ್ಳುವ ಪ್ರಯತ್ನಗಳನ್ನು ಮಾಡುವ ಉದ್ದೇಶವಿದೆ.

‘‘ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ’ (ಡಯಟ್), ಶಿಕ್ಷಣ ಇಲಾಖೆಯ ಜತೆ ಸಂಯೋಜನೆಯೊಂದಿಗೆ ಕಾರ್ಯ ನಿರ್ವಹಿಸುವ ಮೂಲಕ ಈ ಶಾಲೆಗಳು, ಸಮೀಪದ ಇನ್ನಿತರ ಶಾಲೆಗಳಿಗೆ ಮಾದರಿಯಾಗಿ ಅಭಿವೃದ್ಧಿಯಾಗುವ ವಿಶ್ವಾಸವಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರಾದ ಬಿ.ಸಿ. ನಾಗೇಶ್ ಹೇಳಿದರು.

ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ ಹಾಗೂ ಸತ್ವ ಮೀಡಿಯಾ ಆ‌್ಯಂಡ್ ಕನ್ಸಲ್ಟಿಂಗ್ ಪ್ರೈ. ಲಿ.ನ ಶ್ರೀಕೃಷ್ಣ ಅವರು ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ಒಡಂಬಡಿಕೆ ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಸ್ಟಾರ್ಟಪ್ ವಿಷನ್ ಗ್ರೂಪ್‌ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರು ಈ ವೇಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next