Advertisement

ಶನಿವಾರಸಂತೆ: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ದಾಂಧಲೆ 

04:00 AM Jul 10, 2017 | Team Udayavani |

ಶನಿವಾರಸಂತೆ: ಬೆಳ್ಳಂಬೆಳಗ್ಗೆ ಕಾಫಿತೋಟಗಳಿಗೆ ಏಕಾಏಕಿ ನುಗ್ಗಿದ ಕಾಡಾನೆಗಳ ಹಿಂಡು ದಾಂಧಲೆ ಎಬ್ಬಿಸಿ ಗ್ರಾಮಸ್ಥರನ್ನು ಗಾಬರಿಗೊಳಿಸಿದ್ದು, ಅನಂತರ ಗ್ರಾಮಸ್ಥರು ಕಾಡಾನೆಗಳನ್ನು 4 ಕಿ.ಮೀ. ದೂರದ ತನಕ ಓಡಿಸಿಕೊಂಡು ಹೋಗಿ ಅರಣ್ಯಕ್ಕೆ ಅಟ್ಟಿದ ಘಟನೆ ಶನಿವಾರ ಬೆಳಗ್ಗೆ ನಿಡ್ತ ಗ್ರಾ.ಪಂ.ವ್ಯಾಪ್ತಿಯ ಹಿತ್ಲುಕೇರಿ ಗ್ರಾಮದಲ್ಲಿ ನಡೆದಿದೆ.

Advertisement

ಶನಿವಾರ ಬೆಳಗ್ಗೆ ಸುಮಾರು 9 ಗಂಟೆ ಸುಮಾರಿಗೆ ಚೌಡನಹಳ್ಳಿ ಗ್ರಾಮದಿಂದ ಬಂದ  ಮರಿ ಆನೆಯೊಂದು ಸೇರಿದಂತೆ ಒಟ್ಟು 6 ಕಾಡಾನೆಗಳ ಹಿಂಡು ಹಿತ್ಲುಕೇರಿ ಗ್ರಾಮದ ಕಾಫಿತೋಟ ವೊಂದಕ್ಕೆ ನುಗ್ಗಿ ತೋಟದೊಳಗೆ ದಾಂಧಲೆ ಎಬ್ಬಿಸಿವೆ, ತೋಟ ದಲ್ಲಿ ಕಾಡಾನೆಗಳ ಹಿಂಡು ದಾಂಧಲೆ ಎಬ್ಬಿಸುತ್ತಿರುವ ಸುಳಿವು ತಿಳಿದ ನಾಯಿಗಳು ಬೊಗಳುತ್ತಿರುವ ಶಬ್ದ ಕೇಳಿ ಮನೆಯಿಂದ ಹೊರಬಂದ  ಕಾಫಿತೋಟದ ಮಾಲಕರು ತೋಟದಲ್ಲಿ  ಕಾಡಾನೆಗಳ ಹಿಂಡು ಓಡಾತ್ತಿರುವುದನ್ನು ಗಮನಿಸಿ ಅಕ್ಕಪಕ್ಕದ ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.
 
ಅಕ್ಕಪಕ್ಕದ ಕಾಫಿತೋಟದ ಮಾಲಕರು ಹಾಗೂ ಗ್ರಾಮಸ್ಥರೆ ಲ್ಲರೂ ಸೇರಿಕೊಂಡು ತೋಟದಿಂದ ಮತ್ತೂಂದು ತೋಟಕ್ಕೆ ಕಾಡಾನೆಗಳನ್ನು ಬೊಬ್ಬೆ ಹಾಕಿಕೊಂಡು ಓಡಿಸಿದ್ದಾರೆ. ಪಟಾಕಿ ಸಿಡಿಸಿ ಮತ್ತು ಇತರ ವಸ್ತುಗಳಿಂದ ಶಬ್ದವನ್ನು ಭರಿಸಿ ಗ್ರಾಮಸ್ಥರು ಕಾಡಾನೆಗಳನ್ನು ಓಡಿಸಿದ್ದಾರೆ. ಇದೇರೀತಿ ಸುಮಾರು 4 ಕಿ.ಮೀ. ದೂರದ ತನಕ ಗ್ರಾಮಸ್ಥರು ಕಾಡಾನೆಗಳನ್ನು ಓಡಿಸಿಕೊಂಡು ಹೋಗಿದ್ದಾರೆ. ಕಾಡಾನೆಗಳನ್ನು ತೋಟದೊಳಗೆ ಓಡಿಸುತ್ತಿದ್ದ ಸಂದರ್ಭದಲ್ಲಿ ಗಾಬರಿಗೊಂಡ ಹಿಂಡಿನಲ್ಲಿದ್ದ ಕೆಲವು ಆನೆಗಳು ಗ್ರಾಮಸ್ಥರನ್ನು ಅಟ್ಟಾಡಿಸಿಕೊಂಡು ಹೋಗಿವೆ.

ಭಯಭೀತರಾದ ಗ್ರಾಮಸ್ಥರು ಎದ್ದನೋ ಬಿದ್ದನೋ ಎನ್ನುವಂತೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ಕೊನೆಗೆ ಕಾಫಿ ತೋಟದಿಂದ ಹೊರಬಂದ ಕಾಡಾನೆಗಳ ಹಿಂಡು ಕಾರ್ಗೊಡು ಬಳಿ ಶನಿವಾರಸಂತೆ ಮುಖ್ಯರಸ್ತೆಯನ್ನು ದಾಟಿಕೊಂಡು ಕಾರ್ಗೊಡು ಮೀಸಲು ಅರಣ್ಯದೊಳಗೆ ಹೋಗಿವೆ. ಸುಮಾರು 4 ಕಿ.ಮೀ. ದೂರದ ತನಕ ಕಾಡಾನೆಗಳನ್ನು ಓಡಿಸಿಕೊಂಡು ಹೋದ ಗ್ರಾಮಸ್ಥರು ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿ ಯಾದರು. ಕಾರ್ಯಾಚರಣೆಯಲ್ಲಿ ಹಿತ್ಲುಕೇರಿ ಗ್ರಾಮದ ಸುಮಾರು 50ಕ್ಕಿಂತ ಹೆಚ್ಚಿನ ಗ್ರಾಮಸ್ಥರು ಪಾಲ್ಗೊಂಡಿದ್ದರು ಇದೇ 6 ಕಾಡಾನೆಗಳ  ಹಿಂಡು ಶನಿವಾರ ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಚೌಡನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿವೆ. ಚೌಡನಹಳ್ಳಿ ಗ್ರಾಮದ ಖತೀಜ ಬಾಬು ಎಂಬುವರು ಬೆಳಗ್ಗೆ 7 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂದೆ ನಾಯಿಗಳು ಬೊಗಳುತ್ತಿರುವುದನ್ನು ಗಮನಿಸಿ ಹೊರಬಂದಾಗ ಮನೆಯ ಮುಂದೆ ಕಾಡಾನೆಗಳು ಇರುವುದನ್ನು ತಿಳಿದು ಗಾಬರಿಯಿಂದ ಮನೆಯೊಳಗೆ ಓಡಿಹೋಗಿ ಬಾಗಿಲನ್ನು ಹಾಕಿಕೊಂಡಿದ್ದಾರೆ. 

ಈ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಆನೆಯೊಂದು ಖತೀಜ ಬಾಬು ಅವರ ಮನೆಯ ಗೋಡೆಗೆ ಅಪ್ಪಳಿಸಿದೆ. ಇದರಿಂದ ಅವರ ವಾಸದ ಮನೆಯ ಗೋಡೆ ಬಿರುಕುಗೊಂಡಿದೆ. ಅಕ್ಕಪಕ್ಕದ ಮನೆಯವರು ಕೂಗಿಕೊಂಡಾಗ ಕಾಡಾನೆಗಳ ಹಿಂಡು ನಿಡ್ತ, ಹಿತ್ಲುಕೇರಿ ಗ್ರಾಮಗಳತ್ತ ನುಸುಳಿದವು ಎಂದು ಗ್ರಾಮಸ್ಥರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next