ಕುಂದಾಪುರ: ರೈತರಿಗೆ ಬರ ಪರಿಹಾರವಾಗಿ ನಮ್ಮ ಪಾಲು ತಲಾ 2 ಸಾವಿರ ರೂ. ಕೊಟ್ಟಿದ್ದೇವೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ಇನ್ನೂ ಬರ ಪರಿಹಾರ ಬಂದಿಲ್ಲ. ಅದನ್ನು ಶೀಘ್ರ ಕೊಡಲಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದರು.
ಅವರು ರವಿವಾರ ಕುಂದಾಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಜಿಎಸ್‌ಟಿ ಅನುದಾನ ಕೊಟ್ಟಿದ್ದಾರೋ ? ಅಥವಾ ಇಲ್ಲವೋ ? ಅನ್ನುವುದನ್ನು ನಾವು ಹೇಳುತ್ತಿಲ್ಲ. ಕಾಗದ ಪತ್ರಗಳೇ ಹೇಳುತ್ತವೆ ಎನ್ನುವುದಾಗಿ ಕೇಂದ್ರದ ಜಿಎಸ್ಟಿ ಬರಬೇಕಾದುದು ಕೊಟ್ಟಿದ್ದೇವೆ ಅನ್ನುವ ಕೇಂದ್ರ ಸಚಿವರ ಮಾತಿಗೆ ತಿರುಗೇಟು ನೀಡಿದರು.
ಗಂಭೀರವಾಗಿ ಪರಿಗಣಿಸಬೇಕಿಲ್ಲ: ಜಾತಿ ಸಮಾವೇಶದಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರು ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿರುವು ದಾಗಿದೆ. ಇದು ಸ್ವಾಭಾವಿಕ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು.
ಗುತ್ತಿಗೆದಾರರಿಗೆ ಆತಂಕ ಅನಗತ್ಯ: ಗುತ್ತಿಗೆದಾರರು ಅಭದ್ರತೆಯಿಂದ ಇದ್ದಾರೆ ಅನ್ನುವುದು ಸುಳ್ಳು. ಕೆಲಸ ಮಾಡಿದ್ದಕ್ಕೆ ಬಿಲ್ ಪಾವತಿ ಮಾಡುತ್ತಿದ್ದೇವೆ. ಹೆಚ್ಚುವರಿ ಯಾಗಿದ್ದಕ್ಕೆ ಕೊಡುತ್ತಿಲ್ಲ. ಯಾವುದೇ ರೀತಿಯ ಅಭದ್ರತೆ, ಆತಂಕ ಬೇಡ. ಎಂದು ಸಚಿವರು ಸ್ಪಷ್ಟಪಡಿಸಿದರು. ಕುಂದಾಪುರದ ಪ್ರವಾಸಿ ಮಂದಿರ ಹಳೆಯದಾಗಿದ್ದು, ಹೊಸ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಬಹಳಷ್ಟು ಪ್ರಕ್ರಿಯೆಗಳಿವೆ. ಇದು 5 ವರ್ಷದ ಯೋಜನೆಯಾಗಿದೆ. ಇದಕ್ಕೆ ಶಾಸಕರು, ಸಚಿವರೆಲ್ಲ ಸಹಮತ ಬೇಕಾಗಿದೆ. ಬೇರೆ ಬೇರೆ ಇಲಾಖೆಯವರೆಲ್ಲ ಚರ್ಚಿಸಿ ಸಮಗ್ರ ಯೋಜನೆ ಸಿದ್ಧಪಡಿಸಲಾಗುವುದು. ಗಂಗೊಳ್ಳಿ – ಕೋಡಿ ಸೇತುವೆ ಬಗ್ಗೆ ವೀಕ್ಷಿಸಿದ್ದು, ಚರ್ಚೆ ಮಾಡುತ್ತೇವೆ.
ರಿಂಗ್ ರೋಡ್ ಬಗ್ಗೆ ಕೇಂದ್ರ ಸಚಿವ ಗಡ್ಕರಿ ಜತೆ ಗೋವಾದಲ್ಲಿ ಚರ್ಚಿಸಲಾಗಿದೆ ಎಂದರು.