ಬೆಳಗಾವಿ: ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಎಷ್ಟು ಗುಂಪುಗಳಿವೆ ಎಂಬುದನ್ನು ಮೊದಲು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ ಜಾರಕಿಹೊಳಿ ಲೆಕ್ಕಹಾಕಲಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ನಮ್ಮ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಸತೀಶ ಅವರು ಮೊದಲು ಕಾಂಗ್ರೆಸ್‌ನಲ್ಲಿನ ಸಮಸ್ಯೆ ಬಗೆಹರಿಸಲಿ ಎಂದರು.
ಜಗದೀಶ ಶೆಟ್ಟರ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್‌ದಿಂದ ಬಂದವರ ಗುಂಪು ಪ್ರಯತ್ನಿಸುತ್ತಿದೆ ಮತ್ತು ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಲು ಮೂಲ ಬಿಜೆಪಿಗರು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸತೀಶ ಜಾರಕಿಹೊಳಿ ಹೇಳಿಕೆಗೆ ಇದೆಲ್ಲ ಶೇಖ್ ಮಹಮ್ಮದರ ಲೆಕ್ಕ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಭೋಜನಕೂಟ ಜನತಾದಳದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮೇಲಾಗಿ ಬೆಳಗಾವಿ ಜಿಲ್ಲೆಗೂ ಮತ್ತು ಭೋಜನಕೂಟಕ್ಕೂ ಬಹಳ ಅವಿನಾಭಾವ ಸಂಬಂಧವಿದೆ ಎಂದು ಹಾಸ್ಯಚಟಾಕಿ ಹಾರಿಸಿದ ಬೊಮ್ಮಾಯಿ, ಉಮೇಶ ಕತ್ತಿ ಅವರ ಬೆಂಗಳೂರಿನ ನಿವಾಸದಲ್ಲಿ ಉತ್ತರ ಕರ್ನಾಟಕ ಶಾಸಕರ ರೊಟ್ಟಿ ಊಟದ ಕುರಿತು ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಬೆಳಗಾವಿ ಜಿಲ್ಲೆಯ ರಾಜಕಾರಣದ ಬೆಳವಣಿಗೆಯನ್ನು ವಿದ್ಯಾರ್ಥಿಯಾಗಿ ಕಲಿಯಲು ಪ್ರಯತ್ನಿಸುತ್ತೇನೆ ಎಂದರು.
ಸದ್ಯ ವಲಸಿಗರಿಗೆ ಪಾಸ್ ಇಲ್ಲ
ಕೋವಿಡ್-19 ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೂ.15ರವರೆಗೆ ಅಂತಾರಾಜ್ಯ ವಲಸಿಗರಿಗೆ ಪಾಸ್ ನೀಡುವುದಿಲ್ಲ ಎಂದು ಸಚಿವ ಬೊಮ್ಮಾಯಿ ಸ್ಪಷ್ಟಪಡಿಸಿದರು. ನಿಪ್ಪಾಣಿ ಗಡಿ ಭಾಗದಲ್ಲಿ ಮಹಾರಾಷ್ಟ್ರದಿಂದ ಅನೇಕ ಜನರು ಕಳ್ಳದಾರಿಯಿಂದ ರಾಜ್ಯ ಪ್ರವೇಶ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಗಡಿ ಭಾಗದಲ್ಲಿ ಹೆಚ್ಚಿನ ಚೆಕ್‌ಪೋಸ್ಟ್ ನಿರ್ಮಾಣ ಮಾಡಲು ಸೂಚನೆ ನೀಡಲಾಗಿದೆ. ಮುಂದೆ ಕ್ವಾರಂಟೈನ್ ಸೌಲಭ್ಯ ನೋಡಿಕೊಂಡು ವಲಸಿಗರಿಗೆ ಪಾಸ್ ವಿತರಿಸಲಾಗುವುದು ಎಂದು ಹೇಳಿದರು.