ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ನಂತರ ಸರಕಾರದಲ್ಲಿ ಭಿನ್ನಮತ ಸ್ಫೋಟಗೊಳ್ಳುವದು ಖಚಿತ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲೇ 17 ಜನ ಶಾಸಕರ ಹಂಗಿನಲ್ಲಿದ್ದಾರೆ. ಅವರನ್ನು ಸಮಾಧಾನಪಡಿಸುವದು ಮುಖ್ಯಮಂತ್ರಿಗಳ ಮೊದಲ ಆದ್ಯತೆ. ಹೀಗಾಗಿ ಮೂಲ ಬಿಜೆಪಿ ಶಾಸಕರು ಸಚಿವರಾಗುವ ಕನಸು ತಕ್ಷಣ ನನಸಾಗುವುದಿಲ್ಲ ಎಂದರು.
ಸಂಪುಟ ವಿಸ್ತರಣೆ ಅಂದುಕೊಂಡಷ್ಟು ಸರಳವಾಗಿಲ್ಲ. ಮೂಲ ಬಿಜೆಪಿ ಶಾಸಕರು ತಮ್ಮ ಹಕ್ಕು ಪ್ರತಿಪಾದನೆ ಮಾಡುತ್ತಾರೆ. ಆಗ ತಾನಾಗಿಯೇ ಭಿನ್ನಮತ ಹೊರಗಡೆ ಬರುತ್ತದೆ. ಆಪರೇಶನ್ ಕಮಲ ಮಾಡಿದ್ದೇ ಒಂದು ತಪ್ಪು ಸಂದೇಶ ರವಾನೆ ಮಾಡಿದೆ. ಮುಖ್ಯಮಂತ್ರಿಗಳು ಆಪರೇಶನ್ ಕಮಲ ಮಾಡಿದ 17 ಜನ ಶಾಸಕರನ್ನು ತೃಪ್ತಿಪಡಿಸಬೇಕು. ಆಪರೇಶನ್ ಕಮಲ ಮಾಡಿದ ಮೇಲೆ ಎಲ್ಲವನ್ನೂ ಸರಿದೂಗಿಸಲು ಸಾಧ್ಯವಿಲ್ಲ. ಹೀಗಾಗಿ ಮೂಲ ಬಿಜೆಪಿ ಶಾಸಕರಿಗೆ ನಿರಾಸೆ ಅನಿವಾರ್ಯ ಎಂದರು.
ರಮೇಶ ಜಾರಕಿಹೊಳಿ ಒಬ್ಬ ಟ್ರಬಲ್ ಮೇಕರ್. ಇಂಥವನನ್ನು ಮುಖ್ಯಮಂತ್ರಿಗಳು ಹೇಗೆ ಸಹಿಸಿಕೊಳ್ಳುತ್ತಾರೆ ಕಾದು ನೋಡಬೇಕು. ರಮೇಶ್ ನೀರಾವರಿ ಖಾತೆ ಕೇಳಿರುವದು ಅಭಿವೃದ್ಧಿಯ ಉದ್ದೇಶದಿಂದ ಅಲ್ಲ. ಇದರ ಹಿಂದೆ ಸ್ವ ಹಿತಾಸಕ್ತಿ ಇದೆ. ಈ ಖಾತೆ ಕೊಡದಿದ್ದರೆ ಮತ್ತೆ ಸಮಸ್ಯೆ ಆರಂಭ ಮಾಡುತ್ತಾನೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಸಚಿವ ಸ್ಥಾನ ಸಿಗದಿದ್ದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುವೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಒಂದು ಪಕ್ಷಕ್ಕೆ ಹೋದ ಮೇಲೆ ಅಲ್ಲಿನ ಸಿದ್ದಾಂತ ಒಪ್ಪಿಕೊಳ್ಳಬೇಕು. ಕಸವನ್ನೂ ಗುಡಿಸಬೇಕಾಗುತ್ತದೆ ಎಂದು ವ್ಯಂಗವಾಡಿದರು