ಬೆಳಗಾವಿ: ವಿರೋಧ ಪಕ್ಷದವರ ಒತ್ತಡದಿಂದ ಮತ್ತು ಜನರಿಗೆ ಪ್ಯಾಕೇಜ್ ಕೊಟ್ಟಿದ್ದೇವೆ ಎಂದು ಬಿಂಬಿಸಿಕೊಳ್ಳುವುದಕ್ಕಾಗಿ ಮಾತ್ರ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಘೋಷಣೆ ಮಾಡಿರುವ ಕೋವಿಡ್ ಪ್ಯಾಕೇಜ್ ನಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳು ಇಲ್ಲ. ಕೇವಲ ಕಾಟಾಚಾರಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದು ಟೀಕಿಸಿದರು.
ತಮಿಳುನಾಡಿನಲ್ಲಿ ಅಲ್ಲಿನ ಸರಕಾರ ಪ್ರತಿಯೊಬ್ಬರಿಗೂ 4,000 ರೂ. ನೆರವಿನ ಘೋಷಣೆ ಮಾಡಿದೆ. ಆಂಧ್ರಪ್ರದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ನಮ್ಮಲ್ಲಿ ಅಂತಹ ಯಾವುದೇ ಯೋಜನೆಗಳನ್ನು ಪ್ರಕಟ ಮಾಡಿಲ್ಲ. ಅವುಗಳನ್ನು ಮರೆಮಾಚಿಸುವ ಪ್ರಯತ್ನವಾಗಿ ಈ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಸತೀಶ ಜಾರಕಿಹೊಳಿ ವಾಗ್ಧಾಳಿ ನಡೆಸಿದರು.
ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ನೀಡುವುದರಿಂದ ಪ್ರತಿ ಎಕರೆಗೆ ಸುಮಾರು 3,000 ದಿಂದ 4,000 ರೂ. ಮಾತ್ರ ಸಿಗುತ್ತದೆ. ಇದು ಅವರ ಒಂದು ದಿನದ ದುಡಿಮೆಯಾಗಿದೆ ಎಂದರು. ಈ ಪರಿಹಾರವನ್ನು ಪಡೆಯಲು ಸಹ ಬಹಳ ಕಷ್ಟಪಡಬೇಕು ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 10 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಅಂದರೆ ಒಂದು ಕೋಟಿ ಜನರಿಗೆ ತಲಾ 10 ಸಾವಿರ ರೂ. ಪರಿಹಾರ ಧನ ನೀಡಿದಂತಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಕೇವಲ 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.