ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ನನ್ನ ಮಧ್ಯೆ ಯಾವುದೇ ಮುನಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಅವರು ನನ್ನನ್ನು ಭೇಟಿ ಮಾಡಿದ್ದರು. ಶಾಸಕರ ಜತೆ ಪ್ರವಾಸ ಹೋಗುವ ಕುರಿತು ನನ್ನೊಂದಿಗೆ ಚರ್ಚೆ ಮಾಡಿಲ್ಲ.
ಭೇಟಿಯಾದಾಗಲೂ ಪ್ರವಾಸದ ಕುರಿತು ಮಾತನಾಡಿಲ್ಲ. 136 ಶಾಸಕರೆಲ್ಲರೂ ನಮ್ಮವರೇ. ಬಿಜೆಪಿಯವರಿಗೆ ಒಂದು ನ್ಯೂಸ್ ಬೇಕು ಅಂತ ಇಂಥ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ಸತೀಶ ಜಾರಕಿಹೊಳಿ ಬೆಂಗಳೂರಿನಲ್ಲಿದ್ದಾರೆ. ಲಕ್ಷ್ಮೀ ಖಾಸಗಿ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿದ್ದಾರೆ. ನಾನು ಬೆಳಗಾವಿಗೆ ಭೇಟಿ ನೀಡಿದ್ದು ಪೂರ್ವನಿಯೋಜಿತ ಕಾರ್ಯಕ್ರಮ ಅಲ್ಲ. ಮಂಗಳವಾರ ರಾತ್ರಿಯೇ ಬೆಳಗಾವಿಗೆ ಬರಲು ನಿರ್ಧರಿಸಿದ್ದೇನೆ.
ಹೀಗಾಗಿ ನಾನು ಬರುವುದರ ಬಗ್ಗೆ ಯಾರಿಗೂ ಮಾಹಿತಿ ಕೊಟ್ಟಿಲ್ಲ. ಶಾಸಕರು, ಸಚಿವರು ಗೈರು ಉಳಿದಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಬೆಳಗಾವಿಯಿಂದಲೇ ಬಂಡಾಯ ಆರಂಭ ಶುರುವಾಗುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆ ನಿರಾಧಾರ. ವಿಧಾನಸೌಧದಲ್ಲಿ ಜೆ.ಎಚ್ ಪಟೇಲರ ಭಾಷಣ ಕೇಳಿದ್ದೀರಾ? ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಪಟೇಲರು ಮಾಡಿದ ಭಾಷಣದ ಡಾಕ್ಯುಮೆಂಟ್ ತೆಗೆದು ಓದಲಿ. ನನ್ನನ್ನು ಕೇಡಿ ಅಂತ ಟೀಕಿಸುವ ಸಿ.ಟಿ. ರವಿಗೆ ಲೂಟಿ ರವಿ ಅಂತ ಹೆಸರು ಕೊಟ್ಟಿದ್ದು ಬಿಜೆಪಿಯವರೇ. ಯಾರು ಏನು ಹೇಳಿದ್ದಾರೆ
ಎಂಬುದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಇನ್ನೂ ಸಮಯವಿದೆ. ಮುಂದೆ ಎಲ್ಲದರ ಬಗ್ಗೆಯೂ ಮಾತನಾಡುತ್ತೇನೆ. ಗುತ್ತಿಗೆದಾರರ ಬಳಿ ಅಕ್ರಮ ಹಣ ಪ್ರಕರಣದಲ್ಲಿ ನಾನು ಎರಡನೇ ಬಾರಿ ತಿಹಾರ್ ಜೈಲಿಗೆ ಹೋಗುತ್ತೇನೆ ಎನ್ನುವ ಕಟೀಲ್, ಎಚ್.ಡಿ.ಕುಮಾರಸ್ವಾಮಿ ಜಡ್ಜ್ ಅಲ್ಲ ಎಂದರು.