Advertisement

ಹಳ್ಳಿ ದತ್ತು ಪಡೆದ ಸತೀಶ್‌

05:28 PM Jun 17, 2018 | Team Udayavani |

ಸತೀಶ್‌ ನೀನಾಸಂ ಅಭಿನಯದ “ಅಯೋಗ್ಯ’ ಚಿತ್ರವು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ. ಈ ಮಧ್ಯೆ ಸತೀಶ್‌ ಒಂದೊಳ್ಳೆಯ ಕೆಲಸ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹುಲ್ಲೆಗಾಲ ಹಳ್ಳಿಯನ್ನು ಸತೀಶ್‌ ದತ್ತು ಪಡೆದಿದ್ದು, ಅದನ್ನು ಮಾದರಿ ಗ್ರಾಮ ಮಾಡಬೇಕೆಂದು ಹೊರಟಿದ್ದಾರೆ. ಮೊದಲ ಹಂತವಾಗಿ ತಮ್ಮ ತಂಡದವರೊಂದಿಗೆ ಗ್ರಾಮಕ್ಕೆ ಭೇಟಿ ಕೊಟ್ಟು, ಅಲ್ಲಿನ ಕುಂದುಕೊರತೆಗಳನ್ನು ಅವರು ವಿಚಾರಿಸಿದ್ದಾರೆ.

Advertisement

ಈ ಕುರಿತು ಮಾತನಾಡುವ ಅವರು, “ನಾನು “ರಾಕೆಟ್‌’ ಚಿತ್ರದ ಸಂದರ್ಭದಲ್ಲೇ ಅದರಿಂದ ಬಂದ ಹಣವನ್ನು ರೈತರಿಗೆ ಕೊಡುವುದಾಗಿ ಹೇಳಿದ್ದೆ. ಆದರೆ, ನಾನು ನಿರೀಕ್ಷಿಸಿದಷ್ಟು ಚಿತ್ರ ಗೆಲ್ಲಲಿಲ್ಲ. ಹಾಗಾಗಿ ಈಗ ಒಂದು ಗ್ರಾಮವನ್ನು ದತ್ತು ಪಡೆದು ಅದನ್ನು ಮಾದರಿ ಗ್ರಾಮ ಮಾಡಬೇಕೆಂಬುದು ನನ್ನ ಆಸೆ. ಇತ್ತೀಚೆಗೆ ಹೋಗಿ ಆ ಗ್ರಾಮದ ಸಮಸ್ಯೆಗಳೇನೆಂದು ತಿಳಿದುಕೊಂಡು ಬಂದಿದ್ದೀನಿ. ಗ್ರಾಮ ಪಂಚಾಯ್ತಿಯಿಂದ ಅನುಮತಿಯನ್ನೂ ಪಡೆದಿದ್ದೀನಿ.

ಇನ್ನು ಒಂದೆರೆಡು ತಿಂಗಳಲ್ಲಿ ಅಲ್ಲಿ ಮೂರು ದಿನಗಳ ಕ್ಯಾಂಪ್‌ ಮಾಡಿ, ಆ ಹಳ್ಳಿಗೆ ಏನೇನು ಸರ್ಕಾರದಿಂದ ಬರಬೇಕೋ, ಅದೆಲ್ಲವನ್ನೂ ಕೊಡಿಸುವ ಪ್ರಯತ್ನ ಮಾಡುತ್ತಿದ್ದೀನಿ’ ಎನ್ನುತ್ತಾರೆ ಸತೀಶ್‌. ಒಂದು ಗ್ರಾಮವನ್ನು ದತ್ತು ಪಡೆದು ಅದನ್ನು ಅಭಿವೃದ್ಧಿಪಡಿಸಬೇಕು ಎಂದು ಸತೀಶ್‌ ಒಂದಿಷ್ಟು ಹಳ್ಳಿಗಳಿಗೆ ಹೋಗಿ ಬಂದರಂತೆ. ಆ ಪೈಕಿ ಅವರ ಗಮನಸೆಳೆದಿದ್ದು ಈ ಹುಲ್ಲೆಗಾಲ. “ಆ ಹಳ್ಳಿಯ ಹೊರಗೆ 50 ಮೆನಗಳಿವೆ. ಅಲ್ಲೆಲ್ಲಾ ವಯಸ್ಸಾದವರೇ ಹೆಚ್ಚಿದ್ದಾರೆ.

ವರ ಮಕ್ಕಳೆಲ್ಲಾ ಬೆಂಗಳೂರು ಮುಂತಾದ ಕಡೆಗೆ ಕೆಲಸಕ್ಕೆ ಇದ್ದಾರೆ. ಲೆಕ್ಕದ ಪ್ರಕಾರ ಆ ಹಳ್ಳಿಯ ಒಂದೂವರೆ ಸಾವಿರ ಓಟುಗಳಿವೆ. ಆದರೆ, ಅಲ್ಲಿ ವೋಟ್‌ ಹಾಕುವವರ ಸಂಖ್ಯೆ ಕೇವಲ 500. ಯುವಕರೆಲ್ಲಾ ಆ ಹಳ್ಳಿ ಬಿಟ್ಟು ಈಗ ಪಟ್ಟಣ ಸೇರಿದ್ದಾರೆ. ಇನ್ನು ಆ ಹಳ್ಳಿಗೆ ಸರ್ಕಾರದ ಯಾವುದೇ ವ್ಯವಸ್ಥೆಗಳೂ ಸರಿಯಾಗಿ ತಲುಪುತ್ತಿಲ್ಲ. ಹಾಗಾಗಿ ಆ ಹಳ್ಳಿಗೆ ವ್ಯವಸ್ಥೆಗಳು ತಲುಪಬೇಕು ಎಂದು ಈ ಹೆಜ್ಜೆ ಇಟ್ಟಿದ್ದೇನೆ’ ಎನ್ನುತ್ತಾರೆ ಸತೀಶ್‌.

ಈ ಕೆಲಸಕ್ಕಾಗಿ ಅವರು ಒಂದು ತಂಡವನ್ನು ಕಟ್ಟಿಕೊಂಡಿದ್ದಾರೆ. ಈಗಾಗಲೇ 40-50 ಯುವಕರು ಆ ತಂಡದಲ್ಲಿದ್ದಾರಂತೆ. ಈ ತಂಡಕ್ಕೆ ಇನ್ನಷ್ಟು ಜನರ ಅವಶ್ಯಕತೆ ಇದ್ದು, ಅವರನ್ನೆಲ್ಲಾ ಸದ್ಯದಲ್ಲೇ ಆಯ್ಕೆ ಮಾಡಿಕೊಳ್ಳುತ್ತಾರಂತೆ. ನಂತರ ಅವರನ್ನೆಲ್ಲಾ ಕಟ್ಟಿಕೊಂಡು, ಆ ಗ್ರಾಮದಲ್ಲಿ ಮೂರು ದಿನಗಳ ಕ್ಯಾಂಪ್‌ ಮಾಡುತ್ತಾರಂತೆ. “ಹಳ್ಳಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಒಂದು ಶಾಲೆಯಿದೆ. ಆದರೆ, ಮಕ್ಕಳಿಗೆ ಸೂಕ್ತವಾದ ಯೂನಿಫಾರ್ಮ್, ಪುಸ್ತಕಗಳು ಇಲ್ಲ.

Advertisement

ಇನ್ನು ಆರೋಗ್ಯ ತಪಾಸಣೆ ಮಾಡಿಸಬೇಕಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಇವೆಲ್ಲವನ್ನೂ ಪಕ್ಕಾ ತಿಳಿದುಕೊಂಡು, ಆ ನಿಟ್ಟಿನಲ್ಲಿ ಏನು ಸಹಾಯ ಮಾಡಬೇಕೋ ಅದನ್ನು ಹಂತಹಂತವಾಗಿ ಮಾಡುತ್ತೇನೆ’ ಎಂಬುದು ಸತೀಶ್‌ ಹೇಳಿಕೆ. ಇದು ತಮ್ಮ ಮೊದಲ ಹೆಜ್ಜೆ ಎನ್ನುವ ಅವರು, ಮುಂದಿನ ವರ್ಷ ಉತ್ತರ ಕರ್ನಾಟಕದಲ್ಲಿ ಇನ್ನೊಂದು ಹಳ್ಳಿಯನ್ನು ದತ್ತು ಪಡೆದು, ಅದನ್ನು ಅಭಿವೃದ್ಧಿಪಡಿಸುವುದಕ್ಕೆ ಯೋಚಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next