ಮಲ್ಪೆ: ಹಾಂಗ್‌ಕಾಂಗ್‌ನಲ್ಲಿ ಕಾಥಿ ಟ್ರಾವೆಲ್ ಎಚ್.ಕೆ. ಲಿಮಿಟೆಡ್ ನಿರ್ದೇಶಕ, ಉಪ್ಪೂರು ಹಡ್ಲುತೋಟದ ಉದ್ಯಮಿ ರೋನಾಲ್ಡ್ ರಾಜೇಶ್ ಲೂಯಿಸ್ ಅವರು ಉಪ್ಪೂರು ಕ್ಷೇತ್ರಪಾಲ ಪರಿವಾರ ದೈವಸ್ಥಾನದ ಅಭಿವೃದ್ಧಿ ಚಟುವಟಿಕೆಗಳಿಗೆ ಹಾಗೂ ಇಂದಿರಾ ಪೂಜಾರಿ ಅವರ ಮಗಳ ಮಂಗಳ ಕಾರ್ಯಕ್ಕೆ ಆರ್ಥಿಕ ನೆರವನ್ನು ನೀಡಿದ್ದು ಬುಧವಾರ ಅದನ್ನು ಫಲಾನುಭವಿಗೆ ಹಸ್ತಾಂತರಿಸಿದರು.
ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ರಘುನಾಥ್ ಕೋಟ್ಯಾನ್ ಅವರು ಮಾತನಾಡಿ, ರಾಜೇಶ್ ಲೂಯಿಸ್ ಅವರು ಈಗಾಗಲೇ ಅಶಕ್ತರಿಗೆ ಮನೆ ನಿರ್ಮಾಣ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು, ಶೈಕ್ಷಣಿಕ ಸಹಾಯ, ಈ ರೀತಿಯ ಸೇವಾ ಗುಣಗಳೊಂದಿಗೆ ನಿರಂತರವಾಗಿ ಗುರುತಿಸಿಕೊಂಡಿದ್ದಾರೆ.
ಐಶಾರಾಮಿ ಜೀವನಕ್ಕಿಂತ ಪರೋಪಕಾರದಿಂದ ಜೀವನದಿಂದ ಸಿಗುವ ಸಂತೃಪ್ತಿ ಹೆಚ್ಚು. ಈ ನಿಟ್ಟಿನಲ್ಲಿ ತನ್ನಿಂದ ಸಾಧ್ಯವಾದಷ್ಟು ಇನ್ನೊಬ್ಬರ ಸಂಕಷ್ಟಗಳಿಗೆ ಸೌಹಾರ್ದಯುತವಾಗಿ ಸ್ಪಂದಿಸಬೇಕೆನ್ನುವುದು ದಾನಿ ರಾಜೇಶ್ ಅವರ ನಿಲುವು. ಇಂತಹ ಪರೋಪಕಾರ ಗುಣ ಎಲ್ಲರನ್ನೂ ಮೂಡಿದರೆ ಸ್ವಾಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಕ್ಷೇತ್ರಪಾಲ ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಜಯಕರ್ ಯು., ಉಪ್ಪೂರು ಯುವಜನ ಮಂಡಲ ಅಧ್ಯಕ್ಷ ಉಮೇಶ್ ಜತ್ತನ್, ಗೌರವಾಧ್ಯಕ್ಷ ಅಶೋಕ್ ಅಮೀನ್, ಮಾಜಿ ಅಧ್ಯಕ್ಷರಾದ ವಸಂತ ಪೂಜಾರಿ, ಹರೀಶ್ ಜತ್ತನ್, ಹಿರಿಯರಾದ ಮಂಜುನಾಥ ಕೋಟ್ಯಾನ್ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.