Advertisement

ಮುಂದಿನ ಇಲೆಕ್ಷ್ಯನ್ಯಾಗ ಟ್ಯಾಕ್ಟರ್‌ ಸಿಂಬಾಲ್‌ ಬಂದ್ರೂ ಬರಬೌದು…!

10:44 AM Mar 06, 2022 | Team Udayavani |

ಮನ್ಯಾಗ ಇದ್ದಾಗ ಒಂದು ಸಣ್ಣ ಕೆಲಸಾನೂ ಮಾಡೂದಿಲ್ಲ ಅಂತ ಯಜಮಾನ್ತಿ ಬೆಳಿಗ್ಗಿಂದನ ಮಂತ್ರಾ ಶುರುವಚ್ಕೊಂಡ್ಲು, ನಾನು ಸುಮ್ನ ವಾದಾ ಮಾಡಿ ಯಾಕ್‌ ಯುದ್ದಾ ಮಾಡೋದು ಅಂತ ಸುಮ್ನಾದೆ. ಆದ್ರ, ಅಕಿ ರಷ್ಯಾದಂಗ ಯುದ್ದಾ ಮಾಡಬೇಕು ಅಂತ ಸಿದ್ದಾಗೇ ನಿಂತಗಿತ್ತು.

Advertisement

ನಾನೂ ಏನರ ಆಗ್ಲಿ ಅಂತ ಯಾ ಕೆಲಸಾ ಯಾರ್‌ ಮಾಡಬೇಕು ಅನ್ನೂದ ಡಿಸೈಡ್‌ ಆಗೇಬಿಡ್ಲಿ ಅಂತೇಳಿ ನಾನೂ ಅಮೆರಿಕಾನ ನಂಬಿದ ಉಕ್ರೇನ್‌ನಂಗ ಸವಾಲ್‌ ಹಾಕಿ ಕರಸು ಹಿರ್ಯಾರ್ನ ಅಂದೆ, ಅಕಿ ನಮ್ಮಿಬ್ರ ನಡಕ ಡಿಸೈಡ್‌ ಆಗಬೇಕು, ಬ್ಯಾರೇದಾರು ಬಂದ್ರ ಬ್ಯಾರೇನ ಅಕ್ಕೇತಿ ನೋಡು ಅಂತ ಹೆದ್ರಿಕಿ ಹಾಕಿದ್ಲು.

ಉಕ್ರೇನ್‌ ಮ್ಯಾಲ ಯುದ್ದಾ ಸಾರಿರೋ ರಷ್ಯಾದ ನಡವಳಿಕೆ ನೋಡಿದ್ರ ಪುಟಿನ್‌ ಸಾಹೇಬ್ರಿಗೆ ಹಿಟ್ಲರ್‌, ಸ್ಟಾಲಿನ್‌, ಮುಸಲೋನಿನ ಆದರ್ಶ ಆದಂಗ ಕಾಣತೈತಿ. ನಮ್ಮ ದೋಸ್ತ ಅಂದಕೊಂಡಾಂವ ಏಕಾಏಕಿ ರಾಕ್ಷೇಸರಂಗ ನಡಕೊಳ್ಳಾಕತ್ರ ಅವನ್ನ ಒಪ್ಕೊಂಡು ಬೆಂಬಲಾ ಕೊಡಬೇಕೊ, ಏನ್‌ ಸರಿ ಇಲ್ಲಾ ಅಂತ ದೋಸ್ತಿ ಬಿಡಬೇಕೊ ಗೊತ್ತಾಗದಂತಾ ಪರಿಸ್ಥಿತಿ.

ಒಂದು ದೇಶಾ ತಾ ಹೇಳಿದಂಗ ಕೇಳಬೇಕು ಅಂತ ತನ್ನ ಹಿಡಿತದಾಗ ಇಟ್ಕೊಳ್ಳಾಕ ಆ ದೇಶದ ಮ್ಯಾಲ ಯುದ್ದಾ ಸಾರಿರೋ ರಷ್ಯಾದ ನಡವಳಿಕೆ ಶಾಂತಿ ಬಯಸೋ ಇಂಡಿಯಾಕ್‌ ಮನಸಿಲ್ಲ. ಹಂಗಂತ ವಿಶ್ವ ಸಂಸ್ಥೆದಾಗ ರಷ್ಯಾ ವಿರುದ್ಧ ಬಹಿರಂಗವಾಗಿ ನಿಲ್ಲಾಕೂ ಧೈರ್ಯ ಇಲ್ಲ. ಇದೊಂದ್ರಿತಿ ಸಂದಿಗ್ದ ಪರಿಸ್ಥಿತಿ, ಆದ್ರೂ, ಇಂಡಿಯಾ ಸರ್ವಾಧಿಕಾರಿ ನಡವಳಿಕೆಗೆ ನನ್ನ ಸಪೋರ್ಟ್‌ ಇಲ್ಲಾ ಅಂತ ರಷ್ಯಾಕ್‌ ಹೇಳದ ಹೋದ್ರ ನಾಳೆ ಇಂಡಿಯಾದ ಮ್ಯಾಲ ಚೀನಾ ದಾಳಿ ಮಾಡಿದಾಗ ನಮ್ಮ ಜೋಡಿ ಪ್ರಜಾಪ್ರಭುತ್ವ ರಾಷ್ಟ್ರಗೋಳು ನಿಲ್ಲದಂಗ ಆಗು ಪರಿಸ್ಥಿತಿ ಬರಬೌದು, ಈಗಿನ ಯುದ್ದದಾಗ ಚೀನಾನೂ ರಷ್ಯಾಕ ಸಪೋರ್ಟ್‌ ಮಾಡಾಕತ್ತಿರೋದ್ರಿಂದ ಕಮ್ಯುನಿಷ್ಟರ ಕೂಟ ರಚನೆಯಾದ್ರ ಬಾಜುಕ ಇರೋ ನಾವು ಪ್ರಜಾಪ್ರಭುತ್ವ ಉಳಿಸಿಕೊಳ್ಳಾಕ ಒದ್ಯಾಡು ಪರಿಸ್ಥಿತಿ ಬರಬಾರದು.

ಯುದ್ಧ ಘೋಷಣೆ ಆದ ಮೊದ್ಲನೇ ದಿನಾ ಸರ್ಕಾರದಾಗ ಕೇಳಿದ್ರ ಕರ್ನಾಟಕದಾರು ಯಾರೂ ಇದ್ದಂಗಿಲ್ಲಾ, ಯಾರೂ ನಮಗ ದೂರು ಕೊಟ್ಟಿಲ್ಲಾ ಅಂದ್ರು, ಮರನೇ ದಿನಾ ನೋಡಿದ್ರ, ಮೆಡಿಕಲ್‌ ಓದಾಕ್‌ ಹೋಗಿರೋ ಹುಡುಗೂರ್‌ ಅಪ್ಪಾ ಅವ್ವಾಗೋಳು ನಮ್ಮ ಮಕ್ಕಳ್ನ ಕರಸ್ರಿ ಅಂತ ಕಣ್ಣೀರಿಡಾಕತ್ತ ಮ್ಯಾಲ ಗೊತ್ತಾಗಿದ್ದು, ಸಾವಿರಾರು ಹುಡುಗೂರು ಹೋಗಿ ಸಿಕ್ಕೊಂಡಾರು ಅಂತೇಳಿ.

Advertisement

ಯುದ್ದದಾಗ ನಮ್ಮ ರಾಜ್ಯದ ನವೀನ್‌ ಅನ್ನೋ ಹುಡುಗಾ ಗುಂಡಿಗಿ ಬಲಿಯಾಗ್ಯಾನು ಅನ್ನೋದು ಕೇಳಿದಾಗ, ಜನರಿಗೆ ರಷ್ಯಾದ ಮ್ಯಾಲ ಸಿಟ್ಟು ಬರೂದ್ಕಿಂತ, ನಮ್ಮ ದೇಶದ ಮೆಡಿಕಲ್‌ ಎಜುಕೇಶನ್‌ ಮಾಫಿಯಾದಿಂದ ಆಂವ ಬಲಿಯಾದ ಅನ್ನೋ ಮಾತು ಕೇಳಿ ಬಂದು. ನೂರಾ ನಲವತ್ತು ಕೋಟಿ ಜನಸಂಖ್ಯೆ ಇರೋ ನಮ್ಮ ದೇಶದಾಗ ವರ್ಷಕ್ಕ ಒಂದ್‌ ಲಕ್ಷಾ ಎಂಬತ್‌ ಸಾವಿರ್‌ ಡಾಕ್ಟರ್‌ ಸೀಟ್‌ ಇಟ್ಟಾರಂತ, ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾಡ್ಕೊಳ್ಳಾತೇವಿ, ಅಂತಾದ್ರಾಗ ಹುಡುಗುರು ಕಲಿತೇವಿ ಅಂದ್ರೂ ಕಲ್ಯಾಕ ನೆಟ್ಟಗ ಸಾಲಿ ಕಟ್ಟಿಸಿ ಕೊಟ್ಟಿಲ್ಲ ಅಂದ್ರ, ನಮ್ನ ನಾವ ಯಾವ್‌ ನಾಲಿಗಿಂದ ವಿಶ್ವ ಗುರು ಅಂದ್ಕೊಳ್ಳುದು?

ಸರ್ಕಾರದಿಂದ ಮೆಡಿಕಲ್‌ ಕಾಲೇಜ್‌ ಜಾಸ್ತಿ ಮಾಡಿ, ಜಾಸ್ತಿ ಹುಡುಗೂರು ಡಾಕ್ಟರ್‌ ಆದ್ರ ಕಡಿಮಿ ಕರ್ಚಿನ್ಯಾಗ ಗುಳಿಗಿ ಎಣ್ಣಿ ಕೊಡ್ತಾರು. ಮೆರಿಟ್‌ ಮ್ಯಾಲ್‌ ಡಾಕ್ಟರ್‌ ಆದಾಂವ ಮಾಡೋ ಸೂಜಿಗೂ, ಕೊಡೊ ಗುಳಗಿಗೂ ಕಡಿಮಿ ರೊಕ್ಕಾ ತೊಗೊತಾನು. ಕೊಟ್ಯಾಂತರ ರೂಪಾಯಿ ಡೋನೇಷನ್‌ ಕೊಟ್ಟಾಂವೇನು ಕ್ಲಿನಿಕ್‌ ತಕ್ಕೊಂಡು ಸೇವಾ ಮಾಡಾಕ್‌ ಕುಂದ್ರತಾನಾ? ಅವರಪ್ಪ ಗಳಸಿದ್ದ ದುಡ್ಡಿನ್ಯಾಗ ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌ ತಕ್ಕೊಂಡು, ಎಲ್ಲಾದ್ಕೂ ರೇಟ್‌ ಫಿಕ್ಸ್‌ ಮಾಡಿ ಫ್ಯಾಕ್ಟರಿ ನಡಸಿದಂಗ ನಡಸ್ತಾನು. ಬಡೂರು, ಹಳ್ಳಿ ಹುಡುಗೂರು ಡಾಕ್ಟರಕಿ ಕಲತು ಅಂದ್ರ, ಊರಾಗನ ಸಣ್‌ ಕಿರಾಣಿ ಅಂಗಡಿ ಇಟ್ಕೊಂಡಂಗ ದವಾಖಾನಿ ತಕ್ಕೊಂಡು ನೆಗಡಿ, ಜ್ವರಾ ಅಂತ ಆಸರಿಕಿ ಬ್ಯಾಸರಿಕಿ ಆದಾರಿಗೆ ಕಡಿಮಿ ಕರ್ಚಿನ್ಯಾಗ ಅರಾಮ್‌ ಮಾಡಿ, ಬಡೂರ ಜೀವಾ ಉಳಸ್ತಾರು.

ಎಜುಕೇಶನ್‌ ಇನ್‌ಸ್ಟಿಟ್ಯೂಶನ್‌ ನಡಸಾರ್ನೂ ಸರ್ಕಾರದಾಗ ಇರೂದ್ರಿಂದ ಅವರು ಅಷ್ಟು ಸುಲಭವಾಗಿ ಈ ವ್ಯವಸ್ಥೆ ಬದಲಾಯಿಸೂದಿಲ್ಲ ಅನಸ್ತೈತಿ. ಯಾಕಂದ್ರ ಯುದ್ದದಾಗ ಸಿಕ್ಕೊಂಡಾರ್ನ, ಸತ್ತಾವ್ನ ಹೆಣಾ ತರೂದ್ರಾಗ ಹೆಂಗ್‌ ರಾಜಕೀ ಲಾಭಾ ಮಾಡ್ಕೊಬೇಕು ಅನ್ನೋ ಲೆಕ್ಕಾಚಾರ ನಡದಿರಬೇಕಾದ್ರ, ವ್ಯವಸ್ಥೆ ಸುಧಾರಣೆ ಮಾಡಾಕ್‌ ಎಲ್ಲಿ ಯೋಚನೆ ಮಾಡ್ತಾರು ?

ಕೇಂದ್ರ ಸರ್ಕಾರ ವರ್ಷಕ್ಕ ಒಂದ್‌ ಬಜೆಟ್‌ನ್ಯಾಗ ಯಾಡ್‌ ಏಮ್ಸ್‌ ಶುರು ಮಾಡ್ತೇವಿ ಅಂತ ಹೇಳಿದ್ರ ಇಷ್ಟೊತ್ತಿಗೆ ದೇಶದಾಗ ನೂರಾ ಐವತ್ತು ಏಮ್ಸ್‌ ಇರತಿದ್ದು, ರಾಜ್ಯ ಸರ್ಕಾರಗೋಳು ಹಂಗ ಮಾಡಿದ್ರ ಒದೊಂದು ರಾಜ್ಯದಾಗ ನೂರಾ ಐವತ್ತು ಸರ್ಕಾರಿ ಮೆಡಿಕಲ್‌ ಕಾಲೇಜು ಶುರು ಅಕ್ಕಿದ್ದು, ದೇಶದ ಆದರ್ಶ ಅಂತ ಬಿಂಬಿಸ್ತಿರೋ ಯೋಗಿ ರಾಜ್ಯದಾಗ ಈಗ ಹದಿನಾರು ಸರ್ಕಾರಿ ಮೆಡಿಕಲ್‌ ಕಾಲೇಜು ಶುರುವಾಗ್ಯಾವಂತ. ಅಭಿವೃದ್ಧಿ ಪರಿಕಲ್ಪನೆ ಏನ್‌ ಅನ್ನೋದ ತಿಳಿದಂಗ ಆಗೇತಿ.

ರಾಜ್ಯದಾಗ ಬೊಮ್ಮಾಯಿ ಸಾಹೇಬ್ರು ಬಜೆಟ್‌ ಮಂಡನೆ ಮಾಡ್ಯಾರು, ಮೂರು ವರ್ಷದಿಂದ ಹೇಳಿರೋ ಮೆಡಿಕಲ್‌ ಕಾಲೇಜ್‌ಗೋಳ್ನ ನಾವೂ ಕಟ್ಟಾಕತ್ತೇವಿ ಅಂತ ಹೇಳ್ತಾರು. ಒಂದು ತಿಂಗಳು ಅಧಿವೇಶನ ನಡ್ಯಾ ಕತ್ತೇತಿ, ಈ ಅಧಿವೇಶನದಾಗಾದ್ರೂ, ಇಂಥಾ ಡೊನೇಶನ್‌ ಹಾವಳಿ ತಪ್ಪಿಸಿ ಬಡೂರಿಗೂ ಮೆಡಿಕಲ್‌ ಸೀಟು ಸಿಗುವಂತಾ ವ್ಯವಸ್ಥೆ ಜಾರಿ ಮಾಡಾಕ್‌ ಎಲ್ಲಾರೂ ಸೇರಿ ಏನರ ಯೋಚನೆ ಮಾಡಿದ್ರ ಚೊಲೊ ಅನಸ್ತೇತಿ. ಯಾಕಂದ್ರ ಕಾಂಗ್ರೆಸ್‌ನ್ಯಾರಿಗೆ ಈಗ ರಾಜ್ಯದಾಗ ನೀರಾವರಿ ಮಾಡಬೇಕಂತ ಜೋಶ್‌ ಬಂದಂಗ ಕಾಣತೈತಿ. ರಷ್ಯಾ ಉಕ್ರೇನ್‌ ಯುದ್ದದ ಗದ್ಲದಾಗ ಟ್ರಾಫಿಕ್ ಜಾಮ್‌ ಮಾಡಿಯಾದ್ರೂ ಸುದ್ದಿ ಮಾಡೋಣು ಅಂತ ಹೆಂಗೂ ಮೇಕೆದಾಟು ಯಾತ್ರೆ ಮುಗಿಸಿದ್ರು, ಆ ಪಾದಯಾತ್ರೆಯಿಂದ ನೀರು ಬರತಾವೊ ಬಿಡ್ತಾವೊ ಗೊತ್ತಿಲ್ಲ. ಆದ್ರ, ಡಿಕೆ ಹಿಂಬಾಲಕರು, ಸಿದ್ದರಾಮಯ್ಯ ಹಿಂಬಾಲಕರು ಯಾರ್‌ ಯಾರು ಅನ್ನೋದು ಕ್ಲೀಯರ್‌ ಆದಂಗಾತು. ಕಾಂಗ್ರೆಸ್‌ನ್ಯಾರು ಮುಂದಿನ ಸಾರಿ ನಾವ ಅಧಿಕಾರಕ್ಕ ಬರತೇವಿ ಅಂದ್ಕೊಳ್ಳಾತಾರು. ಆದ್ರ, ಸಿದ್ರಾಮಯ್ಯ, ಡಿ.ಕೆ.ಶಿ ಗುದ್ಯಾಡ್ಕೊಂಡು ಯಾವಗ ರಷ್ಯಾ ಉಕ್ರೇನ್‌ನಂಗ ಯುದ್ದಾ ಮಾಡ್ಕೊತಾರೋ ಅನ್ನೋದ ಆ ಪಾರ್ಟಿ ಲೀಡರ್‌ ಗೋಳಿಗೂ ಕಾರ್ಯಕರ್ತರಿಗೂ ಹೆದರಿಕಿ ಶುರುವಾಗೇತಿ. ಇವರಿಬ್ರೂ ಪಾದಯಾತ್ರೆ ಮಾಡದಿದ್ರೂ ಚಿಂತಿಲ್ಲ. ಇಬ್ರೂ ಗುದ್ಯಾಡ್ಕೊಳ್ಳದಿದ್ರ ಸಾಕು ಅಂತ ಒಳಗೊಳಗ ದೇವರ ಹಂತೇಕ ಬೇಡ್ಕೊಳ್ಳಾತಾರಂತ.

ಹೋದ ವಾರದ ಅಧಿವೇಶನದಾಗ ಎಂಎಲ್‌ಎಗೋಳ ಪಗಾರ ಹೆಚ್ಚಿಗಿ ಮಾಡ್ಕೊಳ್ಳು ಸಲುವಾಗಿ ಸರ್ಕಾರದ ಜೋಡಿನ ಒಳ ಒಪ್ಪಂದ ಮಾಡ್ಕೊಂಡು ರಾಷ್ಟ್ರಧ್ವಜದ ಹೆಸರಿನ ಮ್ಯಾಲ ರಾತ್ರಿ ವಿಧಾನಸೌಧದಾಗ ಮಲಗಿದ್ದ ಕಾಂಗ್ರೆಸ್‌ನ್ಯಾರು ಈ ಅಧಿವೇಶನದಾಗಾದ್ರೂ, ಸ್ವಲ್ಪ ಜನರ ಸಮಸ್ಯೆ ಬಗ್ಗೆ ಮಾತ್ಯಾಡಲಿ. ಯಾಕಂದ್ರ ರಷ್ಯಾ ಉಕ್ರೇನ್‌ ಯುದ್ದದಾಗ ಸಿಕ್ಕೊಂಡು ರಾಜ್ಯಕ್ಕ ಬಂದಿರೋ ಹುಡುಗೂರು ವಾಪಸ್‌ ಉಕ್ರೇನಿಗಿ ಹೋದ್ರ ಕಷ್ಟ ಕಾಲದಾಗ ಅವರ ದೇಶಕ್ಕ ಸಪೋರ್ಟ್‌ ಮಾಡದಿರೋ ಇಂಡಿಯಾದಾರಿಗೆ ಹೂಮಾಲಿ ಹಾಕಿ ಸ್ವಾಗತಾ ಮಾಡ್ತಾರು ಅಂತೇನು ಅನ್ಸುದಿಲ್ಲ.

ಅಧಿವೇಶನದಾಗಾದ್ರೂ, ಸುಮ್ನ ದೇಶ ಭಕ್ತಿ, ರಾಷ್ಟ್ರಧ್ವಜ ಅಂತೇಳಿ, ನಾಟಕಾ ಮಾಡೂ ಬದ್ಲೂ, ಮುಂದ ಎದುರಾಗೋ ಸಮಸ್ಯೆಗೆ ಚರ್ಚೆ ಮಾಡಿ ಪರಿಹಾರ ಕಂಡ್ಕೊಳ್ಳೂದು ಚೊಲೊ ಅನಸ್ತೇತಿ. ಯಾಕಂದ್ರ ಇನ್ನೊಂದು ವರ್ಷದಾಗ ಎಲೆಕ್ಷ್ಯನ್‌ ಬರೂದೈತಿ, ಯಾರ್‌ ಏನ್‌ ನಾಟಕಾ ಮಾಡ್ತಾರು ಅನ್ನೋದ್ನ ಜನರು ನೋಡಾಕತ್ತಾರು. ಇವರ ಗದ್ದಲದಾಗ ಯಡಿಯೂರಪ್ಪ ಸಾಹೇಬ್ರು ಬರ್ಥ್ ಡೇ ಹೆಸರಿನ್ಯಾಗ ರೈತರಿಗೆ ಟ್ಯಾಕ್ಟರ್‌ ಸುಮ್ನ ಕೊಟ್ಟಿಲ್ಲ. ಯಾಡೂ ರಾಷ್ಟ್ರೀ ಪಕ್ಷದಾರು ಸ್ವಲ್ಪ ಕಾವೇರಿ ಕಡೇನು ಗಮನ ಕೊಡುದು ಚೊಲೊ ಅನಸ್ತೇತಿ. ಮುಂದಿನ ಇಲೆಕ್ಷ್ಯನ್ಯಾಗ ಟ್ಯಾಕ್ಟರ್‌ ಸಿಂಬಾಲ್‌ ಬಂದ್ರೂ ಬರಬೌದು. ಯುದ್ದಾ ಮಾಡೋದ್ರಿಂದ ಸಾವು, ವಿನಾಶ, ವಿಧವೆಯರು, ಅನಾಥ ಮಕ್ಕಳ್ನ ಬಿಟ್ರ ಬ್ಯಾರೇನು ಸಿಗೂದಿಲ್ಲ. ಅದ್ಕ ನಾವು ಯಜಮಾನ್ತಿ ಜೋಡಿ ಯುದ್ಧಾ ಮಾಡ್ದ ನಡುಮನಿ ಒಪ್ಪಂದ ಮಾಡ್ಕೊಂಡು ನೆಮ್ಮದಿಯಾಗಿ ಅದೇನಿ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next