Advertisement

ಕೂಲ್ಡ್ರಿಂಗ್ಸ್ ಬಾಟಲ್ಯಾಗ ಸೆರೆ ಹಾಕ್ಕೊಂಡು ಕುಡದಂಗ!

12:28 PM Dec 26, 2021 | Team Udayavani |

ಬೆಳಗಾವಿ ಅಧಿವೇಶನ ಹೆಂಗೂ ಮುಗಿತಂತೇಳಿ ಸರ್ಕಾರದಾರು ಪಾರ್ಟಿ ಕೊಟ್ಟಿದ್ರು, ಪಾರ್ಟಿ ಅಂದ ಮ್ಯಾಲ ತೀರ್ಥ ಇಲ್ಲದ ಹೆಂಗಕ್ಕೇತಿ? ಒಂದಿಟರ ತೊಗೊಲಿಲ್ಲ ಅಂದ್ರ ಗುಡಿಗಿ ಹೋಗಿ ಪ್ರಸಾದ ಇಲ್ಲದ ಬಂದಂಗ ಅಕ್ಕೆತಿ.

Advertisement

ಬಾಜು ಕುಂತ ಗೆಳ್ಯಾ ಯಜಮಾನ್ತಿನ ತವರಿಗೆ ಕಳಿಸಿ, ನೀ ಒಂದು ಸ್ವಲ್ಪ ತೊಗೊ ಅಂದಾ. ನಾ ಕಂಪನಿ ಕೊಡ್ತೇನಿ ಅಂತೇಳಿ ಕೂಲ್‌ ಡ್ರಿಂಕ್ಸ್‌ ಬಾಟಲಿ ಓಪನ್‌ ಮಾಡಿ ಗ್ಲಾಸ್‌ಗೆ ಹಾಕ್ಕೊಂಡೆ. ಹೆಂಡ್ತಿಗಿ ಎಷ್ಟು ಹೆದರತಾನಲೇ ಇಂವಾ ಅಂತ ಹೇಳಿ, ತಾನೊಬ್ನ ದೊಡ್ಡ ಗಂಡಸು ಅನ್ನಾರಂಗ ಬಾಟಲಿ ಬೂಚ್‌ ಓಪನ್‌ ಮಾಡಿದಾ. ಹೆಂಡ್ತಿಗಿ ಹೆದರದಿರೊ ಗಂಡ್ಸು ಯಾರಿದಾರ್‌ ಹೇಳ್ರಿ ಅಂದ್ನಿ. ಅಷ್ಟೊತ್ತಿಗೆ ಅವಂಗ ಅವನ ಹೆಂಡ್ತಿ ಫೋನ್‌ ಮಾಡಿ ಎಲ್ಯದಿ ಅಂತ ಫೋನ್ಯಾಗ ವರ್ಚ್ಯುವಲ್‌ ವಿಚಾರಣೆ ಶುರುವಾತು.

ಅವನೂ ಧೈರ್ಯ ಮಾಡಿ ನಮ್ಮ ಎಂಎಲೆಗೋಳು ಟಿವ್ಯಾಗ ಬರು ಸಲುವಾಗಿ ಗದ್ಲಾ ಮಾಡಿದಂಗ ವಿಡಿಯೋ ಕಾಲ್‌ನ್ಯಾಗ ತಾ ಎಷ್ಟು ಪ್ರಾಮಾಣಿಕ ಅನ್ನೋದ್ನ ತೋರಾಸಾಕ ನಮ್ಮ ಟೇಬಲ್‌ ಮ್ಯಾಲ್‌ ಏನೇನೈತಿ ಅಂತೇಳಿ, ಎಣ್ಣಿ ಬಾಟ್ಲಿ ಒಂದ್‌ ಬಿಟ್ಟು ಕೂಲ್ಡಿಂಕ್ಸ್‌, ನೀರಿನ ಬಾಟಲಿ ತೋರಿಸಿ, ತಾ ಏನೂ ಕುಡ್ಯಾತಿಲ್ಲ ಅಂತೇಳಿ ಸಾಬೀತು ಮಾಡಿ ಫೋನ್‌ ಕಟ್‌ ಮಾಡಿ, ಮುಗಿತಿನ್ನ ಅರಾಮ್‌ ತೊಗೊಬೌದು ಅಂತೇಳಿ ಬಾಟ್ಲಿ ಎತ್ತಿ ಚೀಯರ್ಸ್ ಅಂದಾ.

ಯಾಕೋ ನೀನೂ ಹೆದ್ರಿದೆಲ್ಲಾ ಅಂದೆ, ಅದ್ಕ ಆಂವ ಹೆದರಲೇಬೇಕು. ಹೆದರ್ಲಿ ಅಂತಾನೇ ಮದುವೆ ಮಾಡಿದ್ದು, ಇದು ಹೆಂಡ್ತಿ ಕೋಟೆ ಅಂತ ಕೆಂಪೇಗೌಡ ಸಿನೆಮಾದಾಗ ಆರ್ಮುಗಮ್‌ ಸ್ಟೈಲ್‌ ನ್ಯಾಗ ಡೈಲಾಗ್‌ ಹೊಡದಾ. ಮನಷ್ಯಾಗ ಯಾರದರ ಹೆದರಿಕಿ ಇರಲಿಲ್ಲ ಅಂದ್ರ ಇಡೀ ಜೀವನಾನ ಬೆಳಗಾವಿ ಅಧಿವೇಶನ ನಡದಂಗ ನಡಿತೈತಿ. ಯಾಕಂದ್ರ ಭಾಳ ಮಂದಿ ನಮ್‌ ಎಂಎಲ್ಲೆಗೋಳಿಗೆ ಅಧಿವೇಶನದಾಗ ತಮ್ಮ ಕ್ಷೇತ್ರದ್ದ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು ಅನಸೋದ ಇಲ್ಲ. ಕುಡುದು ಬಂದ್ರ ಮನ್ಯಾಗ ಹೆಂಡ್ತಿ ಉಪಾಸ ಮಲಗಸ್ತಾಳು ಅನ್ನೊ ಹೆದರಿಕಿ ಇರಲಿಲ್ಲಾ ಅಂದ್ರ, ಕುಡುಕ್‌ ಗಂಡಾ ಕುಡುದ್‌ ಬಂದು ಸುಮ್ನ ಮಲಗೋದು ಬಿಟ್ಟು ಹೆಂಡ್ತಿಗಿ ನಾಲ್ಕ್ ಹೊಡದು ಮಲಕೋತಾನು. ಈಗ ಉತ್ತರ ಕರ್ನಾಟಕದ ಪರಿಸ್ಥಿತಿನೂ ಹಂಗ ಆಗೇತಿ ಅನಸ್ತೈತಿ. ನಮ್‌ ಬಹುತೇಕ ಶಾಸಕರೂ ಹಂಗ ಅದಾರು. ಅವರು ಅಧಿವೇಶನಕ್ಕ ಹೋದ್ರೂ ನಡಿತೈತಿ, ಹೋಗದಿದ್ರೂ ನಡಿತೈತಿ, ನಮ್ನ ಕೇಳಾಕ್‌ ಯಾರದಾರು? ಇಲೆಕ್ಷನ್‌ ಬಂದಾಗ ಹೆಂಗೂ ರೊಕ್ಕಾ ಕೊಟ್ಟು ಗೆದ್ದ ಗೆಲ್ತೇನಿ ಅನ್ನೋ ಭಂಡ ಧೈರ್ಯದಾಗ ಅಧಿವೇಶನದ ಕಡೆನ ಹಾಯೂದಿಲ್ಲ.

ಸದನಕ್ಕ ಬಂದಾರೂ ಸಣ್‌ ಹುಡುಗೂರು ಪೇಪರ್‌ ಮೆಂಟ್‌ ಸಲುವಾಗಿ ಕಚ್ಚಾಡಿದಂಗ ಕಚ್ಚಾಡ್ಕೋಂತ ನಿಂತ್ರ ಬೆಳಗಾವ್ಯಾಗ ಅಧಿವೇಶನ ನಡದ್ರೂ ಏನು ಉಪಯೋಗ ಬಂತು. ಇರು ಹತ್ತು ದಿನದಾಗ ಯಾಡ್‌ ದಿನಾ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಾಕ್‌ ಕೊಡ್ತೇವಿ ಅಂತೇಳಿ, ಅದ್ರಾಗ ಮತಾಂತರ ಮಾಡೂದ್ನ ತಡ್ಯು ಗದ್ಲಾ, ಸರ್ಕಾರ ಮಾಡಿರೋ ಸಾಲಾ ತೀರಸಾಕ್‌ ಜನರ್‌ ಮ್ಯಾಲ್‌ ಮತ್ಯಾವ ಟ್ಯಾಕ್ಸ್‌ ಹಾಕೋನು ಅನ್ನೂದ್ನ ಇಡೀ ದಿನಾ ಚರ್ಚೆ ಮಾಡಿ ಯಾಡ್‌ ವಾರದ ಜಾತ್ರಿ ಮುಗಿಸಿ ಹೋದ್ರ ಉತ್ತರ ಕರ್ನಾಟಕ ಅಭಿವೃದ್ಧಿ ಆಗು ಅಂದ್ರ ಹೆಂಗ್‌ ಅಕ್ಕೇತಿ?

Advertisement

ಎಪ್ಪತ್ತು ವರ್ಷದಿಂದ ಕೃಷ್ಣಾ ನದಿ ನೀರು ಹರಸ್ತೇವಿ ಅಂತ ಎಲ್ಲಾರೂ ಹೇಳಕೋಂತನ ಬಂದಾರು, ಇವರು ಅಧಿಕಾರಕ್ಕ ಬಂದಾಗ ನಿಮ್‌ ಕಾಲದಾಗ ಏನ್‌ ಮಾಡಿದ್ರಿ ಅನ್ನೋದು, ಅವರು ಅಧಿಕಾರಕ್ಕ ಬಂದಾಗ ನಮ್ಮ ಕಾಲದಾಗ ಇಷ್ಟು ಖರ್ಚು ಮಾಡಿದ್ವಿ ಅಂತ ಬರೇ ಖರ್ಚು ಮಾಡಿದ್ದ ಅಂಕಿ ಅಂಶದ ಲಿಸ್ಟ್‌ ಕೊಡೋದು ಬಿಟ್ಟು, ಎಷ್ಟು ಜನ ರೈತರ ಹೊಲಕ್ಕ ನೀರು ಹರಿಸೇವಿ ಅಂತ ಯಾರೂ ಹೇಳೂದಿಲ್ಲ. ಯಾಕಂದ್ರ ಯಾರಿಗೂ ಯೋಜನೆ ಪೂರ್ಣ ಗೊಳಿಸುದೂ ಬೇಕಾಗಿಲ್ಲ. ಇದೊಂದ್‌ ರೀತಿ ಹುಣಸಿಗಿಡದ ಗದ್ಲ ಕೋರ್ಟಿಗಿ ಹೋದಂಗ. ಒಂದು ದೊಡ್ಡ ನೀರಾವರಿ ಯೋಜನೆ ಅಂದ್ರ ಬಹುತೇಕ ರಾಜಕಾರಣಿಗೋಳಿಗೆ ಹನ್ಯಾಡ್‌ ತಿಂಗ್ಳು ಹೈಣಾ ಕೊಡು ಎಮ್ಮಿ ಇದ್ದಂಗ, ಅಧಿಕಾರಕ್ಕ ಬಂದಾಗೊಮ್ಮಿ ಅಂದಾಜು ಖರ್ಚಿನ ಪರಿಷ್ಕರಣೆ ಮಾಡಿ ತಮ್‌ ಪಾಲು ಎಷ್ಟಂತ ತಕ್ಕೊಂಡು ಹೋಗೋದು ನೋಡ್ತಾರು ಬಿಟ್ರ, ಅವರೆಲ್ಲಿ ರೈತನ ಹೊಲಕ್ಕ ನೀರು ಹರಸ್ತಾರು.

ಮೊದಲು ಪರ್ಸೆಂಟೇಜ್‌ ಕಡಿಮಿ ಇತ್ತಂತ ಕಾಣತೈತಿ. ಹಿಂಗಾಗಿ ಕಾಂಟ್ರ್ಯಾಕ್ಟರ್ಸನೂ ಅವರು ಕೇಳಿದಷ್ಟು ಕೊಟ್ಟು, ಅವರದೂ ಜೀವನ ನಡಸ್ಕೊಂಡು ಹೊಂಟಿದ್ರು ಅಂತ ಕಾಣತೈತಿ. ಅಧಿಕಾರಿಗೋಳು, ಮಿನಿಸ್ಟರ್ಸು ಸೇರಿ ಒಮ್ಮೆಲೆ ಫಾರ್ಟಿ ಫ‌ರ್ಸೆಂಟ್‌ ಕೇಳಿ ಬಿಟ್ರ ಅವರಾದ್ರು ಎಲ್ಲಿಂದ ತಂದು ಕೊಡೋದು ಅಂತೇಳಿ ಮೋದಿ ಸಾಹೇಬ್ರಿಗಿ ಪತ್ರಾ ಬರದ್ರು, ಅವರು ನೋಡಿದ್ರ, ರಾಜಕಾರಣಿ ಗೋಳ್ನ, ಭ್ರಷ್ಟ ಅಧಿಕಾರಿಗೋಳ್ನ ಮಟ್ಟಾ ಹಾಕಾಕ್‌ ಏನರ ಮಾಡ್ತಾರು ಅಂದ್ರ ಮತದಾರರ್ನ ಕಟ್ಟಿ ಹಾಕಾಕ್‌ ಆಧಾರ್‌ ಲಿಂಕ್‌ ಮಾಡಿ ಅಕ್ರಮ ಮತದಾರರ್ನ ತಡ್ಯಾಕನ ಓಡ್ಯಾಡಾಕತ್ತಾರು.

ಇದನ್ನೂ ಓದಿ:ಜ್ಞಾನಪೀಠ ಪುರಸ್ಕೃತರು ಕಲಿತ ಶಾಲೆಗಳಿಗೆ ಇನ್ನೂ ಕೈಗೂಡದ ಅಭಿವೃದ್ಧಿ ಭಾಗ್ಯ

ಚುನಾವಣೆ ಸುಧಾರಣೆ ಮಾಡಾಕ ಭಾಳ ಅದಾವು. ಅದೆಲ್ಲಾ ಬಿಟ್ಟು ಜನರ್ನ ನಿಯಂತ್ರಣ ಮಾಡೂದ್ಕನ ಜಾಸ್ತಿ ತಲಿ ಕೆಡಸ್ಕೊಳ್ಳಾ ತಾರು. ಕ್ರಿಮಿನಲ್‌ ಗೋಳ್ನ, ಅಕ್ರಮ ಮಾಡಾರ್ನ, ಭ್ರಷ್ಟಾಚಾರ ಮಾಡಾರ್ನ ಎಲೆಕ್ಷನ್‌ ನಿಲ್ಲೂದ್ನ ತಡ್ಯಾಕ್‌ ಎಲೆಕ್ಷನ್‌ ಸುಧಾರಣೆ ಮಾಡುದು ಬಿಟ್ಟು, ಓಟ್‌ ಹಾಕಾರ್ನ ತಡ್ಯಾಕ್‌ ಏನ ಬೇಕೋ ಅದ್ನ ಮಾಡಿದ್ರ ದೇಶ ಹೆಂಗ್‌ ಉದ್ದಾರ ಅಕ್ಕೆತಿ? ಒಬ್ಬ ವ್ಯಕ್ತಿ ಯಾಡ್‌ ಕಡೆ ಇಲೆಕ್ಷನ್‌ ನಿಲ್ಲಾಕ್‌ ಯಾವುದು ಅಡ್ಡಿ ಇಲ್ಲ. ಆದ್ರ ಒಬ್ಬ ವ್ಯಕ್ತಿ ಯಾಡ್‌ ಕಡೆ ಓಟರ್‌ ಐಡಿ ಇದ್ರ ಅಪರಾಧ ಅಂತ? ಇದ್ನ ಪ್ರಜಾಪ್ರಭುತ್ವ ಅನ್ನಬೇಕೊ, ಬರೇ ಪ್ರಭುತ್ವ ಅನಬೇಕೋ ಗೊತ್ತಿಲ್ಲ.

ಜನರಿಗೆ ಓಟ್‌ ಹಾಕಾಕ್‌ ಒಂದು ಅಧಿಕಾರ ಐತಿ ಬಿಟ್ರ, ಆ ಮ್ಯಾಲ ಜನರು ಅಧಿಕಾರಸ್ಥರ ಗುಲಾಮರಂಗ ಅವರ ಮನಿ ಬಾಗಲ ಕಾಕೋಂತ ನಿಲ್ಲುದು ತಪ್ಪುದಿಲ್ಲ. ಅಧಿಕಾರದಾಗ ಇರಾರಿಗೆ ವ್ಯವಸ್ಥೆ ಸುಧಾರಣೆ ಅಂದ್ರ ಜನರ್ನ ನಿಯಂತ್ರಿಸಾಕ ಒಂದು ಹೊಸಾ ಕಾನೂನು ತರೂದು ಬಿಟ್ರ ಬ್ಯಾರೇನು ಇಲ್ಲ. ಯಾಕಂದ್ರ ಅಧಿಕಾರದಾಗ ಇರಾರಿಗೆ ಗಂಡ್‌ ಕುಡುದು ಬಂದಾಗ ಉಪಾಸ ಮಲಗೂಸು ಹೆಂಡ್ತಿ ಇಲ್ಲ ಅನ್ನೋ ಭಂಡ ಧೈರ್ಯ ಇದ್ದಂಗೈತಿ.

ಆಳಾರಿಗೆ ತಾವು ಜನರ ಪರ ಮಾತಾಡ್ಲಿಲ್ಲ ಅಂದ್ರ ಮುಂದಿನ ಸಾರಿ ಸೋಲಿಸ್ತಾರು ಅನ್ನೋ ಹೆದರಿಕಿ ಇದ್ರ ಜಕ್ಕಸ್ತ ಬ್ಯಾರೆ ಕೆಲಸಾ ಬಿಟ್ಟು ಅಧಿವೇಶನದಾಗ ಕುಂತು ಜನರ ಕಲ್ಯಾಣದ ಬಗ್ಗೆ ಚರ್ಚೆ ಮಾಡ್ತಿದ್ರು. ಕೆಲವ್ರು ಜನರಿಗೆ ಹೆದರಿ ಗೆಳಾÂ ಹೆಂಡ್ತಿಗಿ ಕೂಲ್ಡಿ$›ಂಕ್ಸ ಬಾಟಲಿ ತೋರಿಸಿ ಸಮಾಧಾನ ಮಾಡಿದಂಗ, ಅಧಿವೇಶನದಾಗ ಪ್ರಶ್ನೆ ಕೇಳಾಕ ಗದ್ಲಾ ಮಾಡಿ, ಟಿವ್ಯಾಗ, ಪೇಪರಿನ್ಯಾಗ ಮುಖಾ ತೋರಿಸಿ ಮುಂದಿನ ಇಲೆಕ್ಷ್ಯನ್ಯಾಗ ಗೆಲ್ಲಬೌದು ಅಂತ ಸಮಾಧಾನ ಮಾಡ್ಕೊಂಡು ಹೋಗಾರದಾರು.

ಆದ್ರ ಆತ್ಮಸಾಕ್ಷಿ ಅನ್ನೋದು ಒಂದು ಇರತೈತಿ. ಮನ್ಯಾಗ ಯಜಮಾನ್ತಿ ಕೇಳತಾಳ್ಳೋ ಬಿಡ್ತಾಳು, ಸೆರೆ ಕುಡಿಬಾರ್ದು ಅನ್ನೊ ಮನಸ್ತಿತಿ ಇರಬೇಕಲ್ಲಾ? ಓಟ್‌ ಹಾಕಿರೋ ಜನರು ಕೇಳ್ತಾರೋ ಬಿಡ್ತಾರು, ಎಂಎಲ್ಲೆ, ಮಂತ್ರಿ, ಮುಖ್ಯಮಂತ್ರಿ ಆದ ಮ್ಯಾಲ ರಾಜ್ಯದ್‌ ಅಭಿವೃದ್ಧಿ ಮಾಡೋದು ತಮ್ಮ ಜವಾಬ್ದಾರಿ ಅಂದ್ಕೊಂಡ್ರ ಮಾತ್ರ ರಾಜ್ಯ, ಉತ್ತರ ಕರ್ನಾಟಕ ಅಭಿವೃದ್ಧಿ ಅಕ್ಕೇತಿ, ಬಿಟ್ರ. ಕೂಲ್ಡಿಂಕ್ಸ್‌ ಬಾಟಲ್ಯಾಗ ಸೆರೆ ಹಾಕ್ಕೊಂಡು ಕುಡದಂಗ ಅಕ್ಕೇತಿ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next