Advertisement

Sathyasai village; ಆರತಿ ಹಿರೇಮಠ ಸೇರಿ 7 ಸಾಧಕಿಯರಿಗೆ ಸತ್ಯಸಾಯಿ ಮಾನವ ಅಭ್ಯುದಯ ಪ್ರಶಸ್ತಿ

11:30 PM Nov 23, 2023 | Team Udayavani |

ಚಿಕ್ಕಬಳ್ಳಾಪುರ: ಕರ್ನಾಟಕದ ಖ್ಯಾತ ಕಸೂತಿ ಕಲೆಯಲ್ಲಿ ಪ್ರಾವೀಣ್ಯತೆಯನ್ನು ಮೆರೆದಿರುವ ಆರತಿ ಹಿರೇಮಠ ಸೇರಿ 7 ಮಂದಿ ಸಾಧಕಿಯರಿಗೆ ಗುರುವಾರ ಸತ್ಯಸಾಯಿ ಗ್ರಾಮದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರ 98ನೇ ವರ್ಧಂತಿಯಲ್ಲಿ ಜಾರ್ಖಂಡ್ ರಾಜ್ಯಪಾಲರಾದ ಸಿ.ಪಿ.ರಾಧಕೃಷ್ಣ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ಪುರಸ್ಕಾರ ಪ್ರದಾನ ಮಾಡಿದರು.

Advertisement

ಸತ್ಯಸಾಯಿ ಗ್ರಾಮದ ಪ್ರೇಮಾಮೃತಂ ಸಭಾಂಗಣದಲ್ಲಿ ಸಂಜೆ ನಡೆದ ವರ್ಣರಂಜಿತ ವೇದಿಕೆಯಲ್ಲಿ ಸದ್ಗುರು ಮಧಸೂಧನ್ ಸಾಯಿ ಅವರ ದಿವ್ಯ ಸಾನಿಧ್ಯದ ನಡುವೆ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳ ಮಹಿಳಾ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪುರಸ್ಕಾರ ಪ್ರಧಾನ ಸಮಾರಂಭದ ವೇದಿಕೆಯಲ್ಲಿ ಭಾರತೀಯ ಕ್ರಿಕೆಟ್ ಜಗತ್ತಿನ ದಂತಕಥೆ ಪದ್ಮಭೂಷಣ ಡಾಕ್ಟರ್ ಸುನಿಲ್ ಗವಾರ್ಸ್ಕ, ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಸಿ ಶ್ರೀನಿವಾಸ್, ಸರೋದ್ ವಾದಕ ಪದ್ಮವಿಭೂಷಣ ಪಂಡಿತ್ ಅಮ್ಜದ್ ಅಲಿ ಖಾನ್, ಆದಿತ್ಯ ಬಿರ್ಲಾ ಪ್ರತಿಷ್ಠಾನದ ಸಿಇಓ ಬಾಲ ಸುಬ್ರಮಣ್ಯಂ ಉಪಸ್ಥಿತರಿದ್ದರು.

ಸಾಧಕಿಯರ ವಿವರ
ಶಿಕ್ಷಣ ಕ್ಷೇತ್ರ
ತನ್ನ ಏಳನೆಯ ವಯಸ್ಸಿನಲ್ಲಿಯೇ ಅಂಧತ್ವಕ್ಕೆ ಒಳಗಾದರೂ ಮಾನವೀಯ ಸ್ಪಂದನೆಯಿಂದ ಅಂಧರ ಬಾಳಿನಲ್ಲಿ ಬೆಳಕಾಗಿ ಅಸಂಖ್ಯಾತ ಹೆಣ್ಣು ಮಕ್ಕಳ ಬಾಳಿನಲ್ಲಿ ಭರವಸೆಯನ್ನು ಮೂಡಿಸಿ ಸ್ವಾವಲಂಬನೆಯ ಬದುಕಿಗೆ ಕಾರಣಕರ್ತರಾದ ಗುಜರಾತಿನ ಶ್ರೀಮತಿ ಮುಕ್ತಾ ಬೇನ್ ಶಿಕ್ಷಣ ಕ್ಷೇತ್ರದಲ್ಲಿನ ವಿಶಿಷ್ಟ ಸಾಧನೆಗಾಗಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ಪುರಸ್ಕಾರವನ್ನು ಅರ್ಹವಾಗಿಯೇ ಪಡೆದುಕೊಂಡರು.

Advertisement

ಗ್ರಾಮ ನೈರ್ಮಲ್ಯ
ಉತ್ತರ ಪ್ರದೇಶದ ಕುಗ್ರಾಮ ಒಂದರಲ್ಲಿ ಹದಗೆಡುತ್ತಿರುವ ಆರೋಗ್ಯ ಮತ್ತು ನೈರ್ಮಲ್ಯ ಪರಿಸ್ಥಿತಿಯನ್ನು ಮನಗಂಡು ಸ್ವಯಂ ಪ್ರೇರಿತರಾಗಿ 4,000 ಕ್ಕಿಂತಲೂ ಅಧಿಕ ಶೌಚಾಲಯಗಳನ್ನು ಉಚಿತವಾಗಿಯೇ ನಿರ್ಮಿಸಿ ಗ್ರಾಮದ ನೈರ್ಮಲ್ಯ ಮತ್ತು ಆರೋಗ್ಯ ರಕ್ಷಣೆಗೆ ವಿಶೇಷ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಾದ ಅಭ್ಯುದಯ ಪುರಸ್ಕಾರವನ್ನು ಕಾನ್ಪುರದ ಕಲಾವತಿ ದೇವಿಯವರು ಗಿಟ್ಟಿಸಿಕೊಂಡರು.

ಪರಿಸರ
ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಗ್ರಾಮವೊಂದರಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಜನರ ಬವಣೆಯನ್ನು ನೀಗಿಸುವುದರ ಜೊತೆಗೆ 12,000 ಕ್ಕಿಂತಲೂ ಅಧಿಕ ಮರ ಗಿಡಗಳನ್ನು ನೆಟ್ಟು ಪರಿಸರ ಕಾಳಜಿಯನ್ನು ಮೆರೆದ ಹಿನ್ನೆಲೆಯಲ್ಲಿ ಶ್ರೀಮತಿ ರೇಣುಕಾ ಮನೋಹರ ಕೋಟಂಕರ್ ಅವರು ಪರಿಸರ ಕಾಳಜಿಗಿರುವ ಪುರಸ್ಕಾರವನ್ನು ಪಡೆದರು.

ಮಹಿಳಾ ಸಬಲೀಕರಣ
ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಕ್ಕೆ ಮೀಸಲಾದ ಪುರಸ್ಕಾರವನ್ನು ಮಧ್ಯ ಪ್ರದೇಶದ ಕುಮಾರಿ ಭಾಗ್ಯಶ್ರೀ ಮನೋಹರ್ ಅವರು ಪಡೆದರು. ಸಮಾಜದ ತಳಮಟ್ಟದಿಂದ ಬಂದ 24ರ ಹರಯದ ಈ ಯುವತಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಬಾಲ್ಯ ವಿವಾಹದ ವಿರುದ್ಧ ಸಾರಿದ ಸಮರ ಆ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರೇರೇಪಿಸಿದ ಹಿನ್ನೆಲೆಯಲ್ಲಿ ಈ ಪುರಸ್ಕಾರದ ಗೌರವಕ್ಕೆ ಭಾಜನರಾಗಿದ್ದಾರೆ.

ಧಾರ್ಮಿಕ ಸಾಮಾರಸ್ಯ
ಪ್ರಸ್ತುತ ಪ್ರಕ್ಷುಬ್ದಗೊಂಡ ವಾತಾವರಣದ ಹಿನ್ನೆಲೆಯ ಹೊರತಾಗಿಯೂ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಸಾಧಿಸುವ ಅದ್ಭುತ ಕಾರ್ಯಕ್ಕೆ ಕೈ ಹಾಕಿ ಅದರ ಮೂಲಕ ಸಮನ್ವಯ ಸಾಧಿಸಿದ ಅದರಲ್ಲೂ ಪ್ರಮುಖವಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ಭಾವೈಕ್ಯತೆಯ ಕೊಂಡಿಯಾಗಿ ಧರ್ಮ ಸಮನ್ವಯ ಸಾಧಿಸಿದ ಉತ್ತರ ಪ್ರದೇಶದ ದಿಟ್ಟ ಮಹಿಳೆ ಮಾಹಿ ತಿಲಕ್ ಸಿದ್ದಿಕಿ, ಭಾರತದ ರಾಮಾಯಣವನ್ನು ಉರ್ದು ಭಾಷೆಗೆ ಭಾಷಾಂತರ ಮಾಡಿದ್ದು ಮಾತ್ರವಲ್ಲದೆ ಮಾನವೀಯತೆಗಾಗಿ ಸರ್ವಧರ್ಮಗಳಲ್ಲಿರುವ ಏಕತೆಯ ಸಾರವನ್ನು ಮನ ಮುಟ್ಟಿಸುವಲ್ಲಿ ಈ ಮಹಿಳೆ ಯಶ ಸಾಧಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಇವರ ಸೇವೆಯು ಶ್ಲಾಘನೀಯವಾಗಿದ್ದು ಅರ್ಹವಾಗಿಯೇ ಅಭ್ಯುದಯ ಪುರಸ್ಕಾರವನ್ನು ಪಡೆದಿದ್ದಾರೆ.

ಕಸೂತಿ ಕಲೆ
ಕನ್ನಡ ನೆಲದ ಮಹಿಳಾ ಸಾಧಕಿ ಶ್ರೀಮತಿ ಆರತಿ ಹಿರೇಮಠ. ಈಕೆಯು ಕಸೂತಿ ಕಲೆಯಲ್ಲಿ ಪ್ರಾವೀಣ್ಯತೆಯನ್ನು ಮೆರೆದಿದ್ದು, ಇದುವರೆಗೆ 850 ಮಂದಿ ಗ್ರಾಮೀಣ ಮಹಿಳೆಯರಿಗೆ ಕಸೂತಿ ಕಲೆಯ ತರಬೇತಿಯನ್ನು ನೀಡಿದ್ದಾರೆ. ಇದರ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆಯ ಬದುಕಿಗೆ ಪ್ರೇರಣೆಯನ್ನು ನೀಡಿ ಯಶಸ್ಸನ್ನು ಕಂಡಿರುವುದಲ್ಲದೆ, ಸೀರೆ ಬ್ಯಾಗು ಮುಂತಾದ ವಸ್ತುಗಳನ್ನು ತಯಾರಿಸುವ ಬಗ್ಗೆಯು ತರಬೇತಿ ನೀಡಿ ಅದಕ್ಕೆ ಮಾರುಕಟ್ಟೆಯನ್ನು ಒದಗಿಸುವ ಉದ್ಯಮಪತಿಯ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ. ಈ ವಿಶಿಷ್ಟ ಸಾಧನೆಗಾಗಿ ಸಂಗೀತ ಮತ್ತು ಲಲಿತ ಕಲಾ ಕ್ಷೇತ್ರಕ್ಕೆ ಇರುವ ಪುರಸ್ಕಾರವನ್ನು ಪಡೆದಿರುತ್ತಾರೆ.

ಕ್ರೀಡೆ
ಬುಡಕಟ್ಟು ಜನಾಂಗದ ಮಕ್ಕಳೇ ಅತಿಯಾಗಿ ವಾಸವಿರುವ ಹಾಗೂ ಅತ್ಯಂತ ಬಡ ಕುಟುಂಬಕ್ಕೆ ಸೇರಿದ ಮಕ್ಕಳಿಗೆ ಫುಟ್ಬಾಲ್ ತರಬೇತಿಯನ್ನು ನೀಡಿ, ವಿವಿಧ ಪಂದ್ಯಾವಳಿಗಳನ್ನು ಏರ್ಪಡಿಸುವುದರ ಮೂಲಕ ಸಾಮಾಜಿಕ ಬದಲಾವಣೆಗಾಗಿ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಕ್ರೀಡೆ ಮತ್ತು ಯೋಗ ಕ್ಷೇತ್ರಕ್ಕಿರುವ ಮಾನವ ಅಭ್ಯುದಯ ಪುರಸ್ಕಾರವನ್ನು ಮಧ್ಯಪ್ರದೇಶದ ಶ್ರೀಮತಿ ಪ್ರಿಯಾ ನಾಡಕರ್ಣಿಯವರಿಗೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next