Advertisement

ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವವರೆಗೆ ನಾನೇ ಅಭ್ಯರ್ಥಿ ಎಂದ ಸತೀಶ

05:31 PM Oct 06, 2021 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆಯ ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Advertisement

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎರಡು ವಿಧಾನ ಪರಿಷತ್ ಸ್ಥಾನಗಳಿದ್ದು, ಇಬ್ಬರು ಸ್ಪರ್ಧೆ ಮಾಡಿದರೇ ನಮ್ಮಲ್ಲೇ ಪೈಪೋಟಿ ಏರ್ಪಡುತ್ತದೆ. ಹೀಗಾಗಿ, ಒಂದೇ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮದೇ ಆದ ವೋಟ್ ಬ್ಯಾಂಕ್ ಇದೆ. ಈಗಾಗಲೇ ಐದಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ” ಎಂದು ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.

ಕಳೆದ ಬಾರಿ ನಿಮ್ಮ ಪಕ್ಷದವರೇ ನಿಮ್ಮ ಅಭ್ಯರ್ಥಿಯನ್ನು ಸೋಲಿಸಿದ್ದರು” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸೋಲಿಸುವ ಟೀಮ್ ಈಗಾಗಲೇ ನಮ್ಮ ಪಕ್ಷದಿಂದ ಹೊರಹೋಗಿದೆ. ಹೀಗಾಗಿ, ಈಗ ನಾವು ಆತಂಕಪಡುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಪಕ್ಷ ತೊರೆದಿದ್ದ ಅತೃಪ್ತ ಶಾಸಕರ ಬಗ್ಗೆ ವ್ಯಂಗ್ಯವಾಡಿದರು.

ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವವರೆಗೆ ನಾನೇ ಅಭ್ಯರ್ಥಿ: ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವವರೆಗೆ ಕಾಂಗ್ರೆಸ್ ನಿಂದ ನಾನೇ ಅಭ್ಯರ್ಥಿ ಎಂದು ಸತೀಶ ಸ್ಪಷ್ಟಪಡಿಸಿದರು. ಯಮಕನಮರಡಿ ವಿಧಾನಸಭಾ ಚುನಾವಣೆಯಲ್ಲಿ ಪುತ್ರ ರಾಹುಲ್ ಜಾರಕಿಹೊಳಿ, ಅಥವಾ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಮಾಡುವ ವಿಚಾರ ಕ್ಷೇತ್ರದ ಜನರಿಗೆ ಬಿಟ್ಟಿದ್ದು, ಈ ವಿಧಾನಸಭಾ ಚುನಾವಣೆಯಲ್ಲಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ‌ ಹೋಗುವ ವಿಷಯ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

Advertisement

ಪೈಪೋಟಿ ಆರೋಗ್ಯಕರವಾಗಿರಬೇಕು: ವಿರೋಧಿಗಳು ಯಾವಾಗಲು ಇರಬೇಕು. ಅಂದಾಗ ನಾವು ಎಚ್ಚರಿಕೆಯಿಂದ ಇರುತ್ತೇವೆ. ಆದರೆ, ಹೇಳಿಕೆಗಳು ಸರಿಯಾದ ಧಾಟಿಯಲ್ಲಿ ಇರಬೇಕು. ಜನ ಒಪ್ಪುವ ರೀತಿಯಲ್ಲಿರಬೇಕು. ಮೈಕ್ ಇದೆ ಎಂದು ಕೊಲ್ಲಾಪುರ, ಪಂಡರಾಪುರ, ವಿಜಯಪುರ ಸುತ್ತಿ ಬೆಳಗಾವಿಯಲ್ಲಿ ಬಂದು ಹೇಳಿಕೆ ನೀಡುವುದಲ್ಲ. ಪೈಪೋಟಿ ಆರೋಗ್ಯಕರವಾಗಿರಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ಅವರಿಗೆ ಸತೀಶ ಟಾಂಗ್ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳಾಗಿದ್ದಾರೆ. ಹೀಗಾಗಿ, ಚುನಾವಣೆಗೂ ಮೊದಲೇ ತಮ್ಮ ಚಡ್ಡಿಯನ್ನು ಗಟ್ಟಿ ಉಳಿಸಿಕೊಳ್ಳುವುದಕ್ಕಾಗಿ ಈಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೇ ಅದು ಹರಿದುಹೋಗುತ್ತದೆ. ಹೀಗಾಗಿ, 2 ವರ್ಷಕ್ಕಿಂತ ಮೊದಲೇ ತಯಾರಿಯಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಜನರೇ ತಕ್ಕ ಪಾಠ ಕಲಿಸಲಿದ್ದಾರೆ: ಉತ್ತರ ಪ್ರದೇಶದಲ್ಲಿ ಕೊಲೆ ಪ್ರಕರಣಗಳು ಹೊಸತಲ್ಲ. ಅಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಖಾನಾಪುರದಲ್ಲಿ ಇತ್ತೀಚೆಗೆ ಕೊಲೆಯಾಗಿರುವ ಅರ್ಬಾಜ್ ಪ್ರಕರಣದ ಕುರಿತು ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಲಾಗುವುದು. ಸತ್ಯಾಸತ್ಯತೆ ಪೊಲೀಸರು ಬಯಲಿಗೆ ತರಬೇಕು. ಈ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರ ಈ ಬಗ್ಗೆ ಗಮನಹರಿಸಲಾಗುವುದು ಎಂದರು.

ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ., ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮನ್ನವರ, ಮನಸೂರ ಸಯ್ಯದ್ ಸೇರಿ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next