ಗೋಕಾಕ: ಕರ್ನಾಟಕದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಎಂಇಎಸ್‌ನ ಮುಖಂಡ, ಡಿಸಿಸಿ ಬ್ಯಾಂಕ್ ಅಭ್ಯರ್ಥಿಗೆ ಬಿಜೆಪಿಯವರು ಬೆಂಬಲ ನೀಡುವ ಮುನ್ನ 10 ಬಾರಿ ಯೋಚನೆ ಮಾಡಲಿ ಎಂದು ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಬುಧವಾರ ನಗರದ ತಮ್ಮ ಹಿಲ್‌ಗಾರ್ಡನ್ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವ
ದಿನದಂದು ಕರಾಳ ದಿನಾಚರಣೆಯಲ್ಲಿ ಭಾಗಿಯಾಗುವ ವಿರೋಧಿ ಗಳಿಗೆ ಒಂದು ರಾಜಕೀಯ ಪಕ್ಷ ಆಹ್ವಾನ ನೀಡಲು
ಮುಂದಾಗಿದೆ. ಹಲವು ವರ್ಷಗಳಿಂದ ಕರ್ನಾಟಕದ ರಾಜ್ಯದಲ್ಲಿದ್ದು, ಕನ್ನಡ ಭಾಷೆ, ಕನ್ನಡಿಗರನ್ನು ವಿರೋಧಿಸುತ್ತಿರುವ
ಎಂಇಎಸ್ ನಾಯಕರಿಗೆ ಒಂದು ರಾಷ್ಟ್ರೀಯ ಪಕ್ಷ ಆಹ್ವಾನ ನೀಡುವ ಮುನ್ನ ಪರ-ವಿರೋಧ ಬಗ್ಗೆ ಚರ್ಚಿಸಲಿ ಎಂದು ಸಲಹೆ
ನೀಡಿದರು.
ಹಿಂದೆ ನಡೆದ ಘಟನೆಗಳನ್ನು ಜಿಲ್ಲೆಯ ಮಂತ್ರಿಗಳು ಮೆಲಕು ಹಾಕಲಿ. ಬೆಂಬಲ ನೀಡುವುದು ಆ ಪಕ್ಷದ ನಿರ್ಧಾರ. ಆದರೂ ಕೂಡ ಎಂಇಎಸ್‌ನವರು ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎನ್ನುವುದನ್ನು ಮರೆಯದಿರಿ ಎಂದರು.
ಇದನ್ನೂ ಓದಿ:ರಾಯಚೂರು ನಗರಸಭೆಯ ಅನರ್ಹ ಸದಸ್ಯೆ ವಿರುದ್ಧ ಕ್ರಿಮಿನಲ್ ಕೇಸ್
ನೇಕಾರರಿಂದ ಸೀರೆ ಖರೀದಿ ಮಾಡುವುದಾಗಿ ಹೇಳಿದ ಸರ್ಕಾರ ಈಗ ಈ ನಿರ್ಧಾರದಿಂದ ಹಿಂದೆ ಸರಿದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಈ ರೀತಿ ಮಾಡುತ್ತಿರುವುದು ಹೊಸದೇನಲ್ಲ. ಮುಂಚಿನಿಂದಲೂ ಜನರಿಗೆ ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮಾರುಕಟ್ಟೆ ನೀಡುವುದಾಗಿ ಭರವಸೆ ನೀಡಿ ನೇಕಾರರನ್ನು ದಾರಿ ತಪ್ಪಿಸಿದೆ. ತುಂಬಾ
ಆಸೆಯಿಂದ ಹೆಚ್ಚಿನ ಸೀರೆ ನೇಯ್ದಿದ್ದಾರೆ. ಇದೀಗ ಸರ್ಕಾರದ ಖಜಾನೆ ಖಾಲಿಯಾಗಿದೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ನೇಕಾರರಿಗೆ ದೊಡ್ಡ ಹೊಡೆತ ಬಿದ್ದಿದೆ. ಅವರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುವುದಾಗಿ
ತಿಳಿಸಿದರು.