ಬೆಂಗಳೂರು: ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಚಿಕ್ಕಮಗಳೂರಿನಿಂದ ಅಪರಿಚಿತ ವ್ಯಕ್ತಿಗಳು ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಮಾಡಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಗಾಗಿ ದೆಹಲಿಯ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ರಾಜ್ಯಕ್ಕೆ ಧಾವಿಸಿದ್ದಾರೆ.ಹೈಅಲರ್ಟ್
ಈಗಾಗಲೇ ಬೆಂಗಳೂರಿನ ಎನ್‌ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದರೂ ದೆಹಲಿ ಎನ್‌ಐಎಯ ಡಿವೈಎಸ್ಪಿ ದರ್ಜೆಯ ಇಬ್ಬರು ಅಧಿಕಾರಿಗಳ ನೇತೃತ್ವದ ತಂಡ ಭಾನುವಾರವೇ ಮಂಗಳೂರಿಗೆ ಬಂದಿರುವುದು ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಸ್ಯಾಟಲೈಟ್ ಕರೆ ಮಾಡಿರುವ ಸ್ಥಳದಲ್ಲಿ ತನಿಖೆ ಆರಂಭಿಸಿದೆ. ಮತ್ತೂಂದೆಡೆ ಶಂಕಿತ ವ್ಯಕ್ತಿಗಳು ಬೆಂಗಳೂರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಬೆಂಗಳೂರು ವಿಭಾಗದ ಎನ್‌ಐಎ ಅಧಿಕಾರಿಗಳು ನಗರದಲ್ಲಿಯೂ ತನಿಖೆ ಚುರುಕುಗೊಳಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳು ಗಡಿಭಾಗದಿಂದಲೇ ಸ್ಯಾಟಲೈಟ್ ಕರೆ ಮಾಡಿರುವುದರಿಂದ ಅವರ ಸುಳಿವು ಪತ್ತೆಯಾಗುತ್ತಿಲ್ಲ. ಒಬ್ಬನೇ ವ್ಯಕ್ತಿ ಎರಡು ಕಡೆಗಳಲ್ಲಿ ಕರೆ ಮಾಡಿದ್ದಾನೆಯೇ ಅಥವಾ ಪ್ರತ್ಯೇಕ ವ್ಯಕ್ತಿಗಳು ಮಾಡಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟತೆ ಸಿಗದಿರುವುದರಿಂದ ಎನ್‌ಐಎ ಅಧಿಕಾರಿಗಳು, ಕೇಂದ್ರ ಗುಪ್ತಚರ ದಳ, ರಾ ಅಧಿಕಾರಿಗಳ ಜತೆ ತನಿಖೆ ಆರಂಭಿಸಿದ್ದಾರೆ. ಚಿಕ್ಕಮಗಳೂರಿನ ಪ್ರಕರಣವನ್ನು ರಾಜ್ಯದ ಪೊಲೀಸ್ ಅಧಿಕಾರಿಗಳೇ ತನಿಖೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಸ್ಥಳೀಯರ ಜತೆ ನಿರಂತರ ಸಂಪರ್ಕದಲ್ಲಿರುವ ವ್ಯಕ್ತಿಯೇ ಕರೆ ಮಾಡಿರುವ ಸಾಧ್ಯತೆಯಿದೆ. ಏಕೆಂದರೆ, ನಿರ್ದಿಷ್ಟ ಗ್ರಾಮದ ಗಡಿ ಭಾಗದಲ್ಲಿ ನೆಟ್ವರ್ಕ್ ಸಿಗುವ ಜಾಗದಿಂದಲೇ ಕರೆ ಮಾಡಿರುವುದು ಅದನ್ನು ಇನ್ನಷ್ಟು ಪುಷ್ಟೀಕರಿಸಿದೆ. ಹೀಗಾಗಿ ಆ ಸ್ಥಳೀಯ ವ್ಯಕ್ತಿ ಯಾರೆಂಬ ಬಗ್ಗೆ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಇದರೊಂದಿಗೆ ಕಳೆದ ನಾಲ್ಕೈದು ತಿಂಗಳಿಂದ ಕೇರಳದಿಂದ ಮಂಗಳೂರು, ಬೆಂಗಳೂರು, ಕರಾವಳಿಗೆ ಬಂದಿರುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲೂ ಕಾರ್ಯಾಚರಣೆ: ಬೆಂಗಳೂರು ವಿಭಾಗದ ಎನ್‌ಐಎ ಅಧಿಕಾರಿಗಳು ಸಹ ಕಾರ್ಯಾಚರಣೆಗಿಳಿದಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಸ್ಲೀಪರ್ ಸೆಲ್ಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿಕ್ಕಬಾಣವಾರದಲ್ಲಿ ಬಂಧನಕ್ಕೊಳಗಾದ ಜೆಎಂಬಿ ಉಗ್ರ ಹಬೀಬುರ್ ರೆಹಮಾನ್ ವಿಚಾರಣೆ ಸಂದರ್ಭದಲ್ಲಿ ಆತನ ಇನ್ನಷ್ಟು ಸಹಚರರು ರಾಜ್ಯದಲ್ಲಿ ಇದ್ದಾರೆ ಹಾಗೂ ಕೆಲ ಸ್ಫೋಟ ಮಾಹಿತಿಯನ್ನು ಹೊರ ಹಾಕಿದ್ದ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೈಅಲರ್ಟ್ ಮುಂದುವರಿಕೆ: ರಾಜ್ಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾರ್ವಜನಿಕ ಸ್ಥಳಗಳು, ಮಾಲ್, ರೈಲು, ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲಿ ಸೋಮವಾರವೂ ಭದ್ರತೆ ಮುಂದುವರಿದಿದೆ. ಹಾಗೆಯೇ ಇತರೆ ಜಿಲ್ಲೆಗಳಲ್ಲಿಯೂ ಭ ದ್ರತೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
-ಮೋಹನ್ ಭದ್ರಾವತಿ