Advertisement

ಕಾಡ್ಗಿಚ್ಚು ತಡೆಗೆ ಉಪಗ್ರಹ ನೆರವು

12:50 PM Jan 24, 2020 | Suhan S |

ಹಾಸನ: ಬೇಸಿಗೆ ಬಂತೆಂದರೆ ಕಾಡ್ಗಿಚ್ಚಿನ ಆತಂಕ ಕಾಡುತ್ತದೆ. ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಪ್ರತಿವರ್ಷ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಕಾಡ್ಗಿಚ್ಚು ಹಬ್ಬುವುದು ನಿಲ್ಲುವುದಿಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಕಾಡ್ಗಿಚ್ಚು ತಡೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಫಾರೆಸ್ಟ್‌ ಸರ್ವೆ ಆಫ್ ಇಂಡಿಯಾ ( ಎಫ್ಎಸ್‌ಐ) ಉಪಗ್ರಹಗಳಿಂದ ಮಾಹಿತಿ ಪಡೆದು ಕಾಡ್ಗಿಚ್ಚು ತಡೆಗೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

Advertisement

ಸಂಭವನೀಯ ಕಾಡ್ಗಿಚ್ಚು ಪ್ರದೇಶಗಳಲ್ಲಿ ಪ್ರತಿದಿನವೂ ಉಪಗ್ರಹಗಳಿಂದ ಕಾಡಿಗೆ ಬೆಂಕಿ ಬಿದ್ದರೆ ಮಾಹಿತಿ ಪಡೆಯಲಾಗುತ್ತಿದೆ. ಕಾಡ್ಗಿಚ್ಚು ಕಾಣಿಸಿಕೊಂಡ ಚಿತ್ರಗಳನ್ನು ತಕ್ಷಣ ಉಪಗ್ರಹಗಳ ಮೂಲಕ ಪಡೆಯುವ ಎಫ್ಎಸ್‌ಐ ಸಂಬಂಧಪಟ್ಟ ಅರಣ್ಯ ವಲಯಕ್ಕೆ ರವಾನಿಸುತ್ತದೆ. ಅರಣ್ಯ ಸಿಬ್ಬಂದಿ ತಕ್ಷಣವೇ ಕಾಡ್ಗಿಚ್ಚು ಶಮನಕ್ಕೆ ಕ್ರಮ ಕೈಗೊಳ್ಳುತ್ತಾರೆ. ಇದು ಇತ್ತೀಚಿನ ದಿನಗಳಲ್ಲಿ ಕಾಡ್ಗಿಚ್ಚು ಶಮನಕ್ಕೆ ಅರಣ್ಯ ಇಲಾಖೆ ಕಂಡುಕೊಂಡಿರುವ ತಾಂತ್ರಿಕ ಬೆಳವಣಿಗೆ. ಫೈರ್‌ಲೈನ್‌ಗಳ ನಿರ್ಮಾಣ: ಸಾಂಪ್ರದಾಯಿಕವಾಗಿ ಕಾಡ್ಗಿಚ್ಚು ತಡೆಗೆ ಅಗ್ನಿ ನಿವಾರಣಾ ಮಾರ್ಗ (ಫೈರ್‌ ಲೈನ್‌)ಗಳ ನಿರ್ಮಾಣ, ಕಾವಲುಗಾರರ ನೇಮಕ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸಗಳನ್ನೂ ಅರಣ್ಯ ಇಲಾಖೆ ಮಾಡುತ್ತಾ ಬಂದಿದೆ.

ಅಗ್ನಿಮಾರ್ಗ ನಿರ್ಮಾಣ ಅಂದರೆ ಮಳೆಗಾಲದಲ್ಲಿ ಅರಣ್ಯದಂಚಿನಲ್ಲಿ ಬೆಳೆಯುವ ಹುಲ್ಲು, ಗಿಡಗಂಟಿಗಳು ಬೇಸಿಗೆಯಲ್ಲಿ ಒಣಗಿರುತ್ತವೆ. ಅವುಗಳಿಗೆ ಯಾವುದಾದರೂ ಸಂದರ್ಭದಲ್ಲಿ ಬೆಂಕಿ ಕಿಡಿ ತಗುಲಿದರೂ ಕಾಡಿಗೆ ಬೆಂಕಿ ಆವರಿಸುತ್ತದೆ. ಹಾಗಾಗಿ ಅರಣ್ಯದಂಚಿನಲ್ಲಿ ಬೆಳೆದಿರುವ ಹುಲ್ಲು, ಗಿಡಗಂಟಿಗಳು ಹಾಗೂ ಮರದಿಂದ ಉದುರಿದ ಎಲೆಗಳನ್ನು ಅರಣ್ಯ ಸಿಬ್ಬಂದಿಯೇ ಸುಟ್ಟು ಹಾಕಿ ಅರಣ್ಯದತ್ತ ಬೆಂಕಿ ಹರಡದಂತೆ ತಡೆಯುವ ಕ್ರಮಗಳು ಅಗ್ನಿ ನಿವಾರಣಾಮಾರ್ಗ (ಫೈರ್‌ಲೈನ್‌) ನಿರ್ಮಾಣ. ಪ್ರತಿ ವರ್ಷವೂ ಇಂತಹ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಳ್ಳುತ್ತಿದೆ.

ತಾತ್ಕಾಲಿಕ ಕಾವಲುಗಾರರ ನೇಮಕ: ಕಾಡ್ಗಿಚ್ಚು ಹರಡದಂತೆ ತಡೆಯುವ ಹಾಗೂ ಕಾಡ್ಗಿಚ್ಚು ಕಾಣಿಸಿಕೊಂಡರೆ ತಕ್ಷಣ ಬೆಂಕಿ ನಂದಿಸುವ ಕಾರ್ಯಾಚರಣೆಗಾಗಿ ಪ್ರತಿ ವರ್ಷ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ತಾತ್ಕಾಲಿಕವಾಗಿಕಾವಲುಗಾರರನ್ನು ನೇಮಿಸಿಕೊಳ್ಳಲಾಗುತ್ತದೆ. ತಾತ್ಕಾಲಿಕ ಕಾವಲುಗಾರರು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಕಾಡ್ಗಿಚ್ಚು ತಡೆಗೆ ಸಹಕಾರ ನೀಡಲಿದ್ದಾರೆ.

ಅರಣ್ಯ ಕಾವಲುಗಾರರಿಗೆ ತರಬೇತಿ: ಕಾಡ್ಗಿಚ್ಚು ಹರಡಿದ ನಂತರ ನಂದಿಸುವ ಕೆಲಸಕ್ಕಿಂತ ಕಾಡ್ಗಿಚ್ಚು ಸಂಭವಿಸದಂತೆ ನೋಡಿಕೊಳ್ಳುವುದು ಬಹು ಮುಖ್ಯ. ಆ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನೂ ಅರಣ್ಯ ಇಲಾಖೆ ಕೈಗೊಳ್ಳುತ್ತದೆ. ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸಹಯೋಗದೊಂದಿಗೆ ಕಾಡ್ಗಿಚ್ಚು ನಂದಿಸುವತರಬೇತಿಯನ್ನು ಕಾವಲುಗಾರರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ನೀಡುವುದು. ಬೀದಿ ನಾಟಕಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುವುದು ಮತ್ತಿತರ ಕಾರ್ಯಕ್ರಮಗಳನ್ನೂ ಕೈಗೊಳ್ಳುತ್ತಿದೆ. ಅದಕ್ಕಾಗಿ ಪ್ರತಿ ಅರಣ್ಯ ವಿಭಾಗಕ್ಕೂ ವಿಶೇಷ ಅನುದಾನ ನೀಡುತ್ತದೆ. ಹೀಗೆ ಹಲವು ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡರೂ ಪ್ರತಿವರ್ಷ ಕಾಡ್ಗಿಚ್ಚು ಹರಡಿ ನೂರಾರು ಹೆಕ್ಟೇರ್‌ ಅರಣ್ಯ ನಾಶವಾಗುತ್ತದೆ.

Advertisement

ಜನರ ನಿರ್ಲಕ್ಷ್ಯದಿಂದ ಕಾಡಿಗೆ ಬೆಂಕಿ: ನೈಸರ್ಗಿಕವಾಗಿ ಹರಡುವ ಕಾಡ್ಗಿಚ್ಚು ಒಂದೆಡೆಯಾದರೆ, ಮಾನವರ ನಿರ್ಲಕ್ಷ್ಯದಿಂದಲೂ ಕಾಡಿಗೆ ಬೆಂಕಿ ಆವರಿಸಿ ಅಮೂಲ್ಯ ವನ ಸಂಪತ್ತು ನಾಶವಾಗುತ್ತದೆ. ಬೇಸಿಗೆಯ ದಿನಗಳಲ್ಲಿ ಸಾರ್ವಜನಿಕರು, ವಿಶೇಷವಾಗಿ ಅರಣ್ಯದಂಚಿನ ಜನರು ಬೀಡಿ, ಸಿಗರೇಟು ಸೇದಿ ಬಿಸಾಡುವುದು, ಹಬ್ಬ, ಹರಿದಿನಗಳಲ್ಲಿ ಅರಣ್ಯದಂಚಿನ ದೇವಾಲಯಗಳ ಬಳಿ ದೀಪ, ಕರ್ಪೂರ ಮತ್ತಿತರ ಅಗ್ನಿಕಾರಕ ವಸ್ತುಗಳನ್ನು ಬಳಸುವಾಗ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ.

ಆತಂಕಪಡುವ ಅಗತ್ಯವಿಲ್ಲ : ಪ್ರತಿ ವರ್ಷದಂತೆ ಈ ವರ್ಷವೂ ಕಾಡ್ಗಿಚ್ಚು ತಡೆಗೆ ಎಲ್ಲ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಾಸನ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ತಿಳಿಸಿದ್ದಾರೆ. ಈಗಾಗಲೇ ಅಗ್ನಿಮಾರ್ಗ ನಿರ್ಮಾಣ, ತಾತ್ಕಾಲಿಕ ಕಾವಲುಗಾರರ ನೇಮಕ ಮಾಡಿಕೊಳ್ಳಲಾಗಿದೆ. ಅಗ್ನಿಶಾಮಕ ಇಲಾಖೆ ಸಹಕಾರದೊಂದಿಗೆ ಅಗ್ನಿ ನಂದಿಸುವ ತರಬೇತಿ ಕಾರ್ಯಕ್ರಮಗಳು, ಜನರಲ್ಲಿ ಜಾಗೃತಿ ಮೂಡಿಸಲು ಬೀದಿನಾಟಕ ಪ್ರದರ್ಶನ ನಡೆಯುತ್ತಿದೆ. ಕಾಡ್ಗಿಚ್ಚು ತಡೆಗೆ ಫಾರೆಸ್ಟ್‌ ಸರ್ವೆ ಆಫ್ ಇಂಡಿಯಾ ( ಎಫ್ ಎಸ್‌ಐ) ಉಪಗ್ರಹಗಳ ನೆರವನ್ನೂ ಪಡೆಯಲಾಗುತ್ತಿದೆ. ಹಾಗಾಗಿ ಅರಣ್ಯಕ್ಕೆ ಕಾಡ್ಗಿಚ್ಚು ಹಬ್ಬದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

 

-ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next