ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಗೋಪಿನಾಥಂ ಅರಣ್ಯ ಪ್ರದೇಶದಲ್ಲಿ ಅಪರಿಚಿತರು ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದು ಪೊಲೀಸ್ ಇಲಾಖೆಗೆ ತಿಳಿದುಬಂದಿದೆ.
ಕೇಂದ್ರ ಆಂತರಿಕ ಪಡೆಯ ಮಾಹಿತಿ ಮೇರೆಗೆ ಈ ಪ್ರದೇಶದಲ್ಲಿ ಇದೀಗ ತೀವ್ರ ನಿಗಾವಹಿಸಲಾಗಿದ್ದು, ಜಿಲ್ಲಾ ಪೊಲೀಸರು ತನಿಖಾ ಕಾರ್ಯಾಚರಣೆ ನಡೆಸಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗವಾದ ಗೋಪಿನಾಥಂ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿದೆಯೇ? ನಕ್ಸಲರು ಸ್ಯಾಟಲೈಟ್ ಫೋನ್ ಬಳಸಿರಬಹುದೇ ಎಂಬ ಸಂಶಯ ಮೂಡಿದೆ.
ಮಲೆಮಹದೇಶ್ವರಬೆಟ್ಟ ವ್ಯಾಪ್ತಿಯ ಗೋಪಿನಾಥಂ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ದೃಢಪಟ್ಟಿದೆ. ಈ ಬಗ್ಗೆ ನಮ್ಮ ಇಲಾಖೆ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಪ್ರದೇಶವನ್ನು ಗುರುತಿಸಿದ್ದು ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಎಸ್‌ಪಿ ಆನಂದಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಸ್ಯಾಟಲೈಟ್ ಬಳಕೆಯಾಗಿರುವುದೇನೋ ನಿಜ, ಆದರೆ ಅದನ್ನು ಬಳಸಿರುವುದು ನಕ್ಸಲರೇ ಎಂಬುದನ್ನು ಹೇಳಲಾಗದು. ಗೋಪಿನಾಥಂ ಪಕ್ಕದಲ್ಲೇ ಹೊಗೇನಕಲ್ ಜಲಪಾತ ಇರುವುದರಿಂದ ವಿದೇಶಿ ಪ್ರವಾಸಿಗರು ಜಲಾಶಯಕ್ಕೆ ಬಂದು ಸ್ಯಾಟಲೈಟ್ ಫೋನ್ ಬಳಸಿರಬಹುದು. ವಿದೇಶಗಳಲ್ಲಿ ಸ್ಯಾಟಲೈಟ್ ಫೋನ್ ಬಳಸುವ ಅವಕಾಶ ನಾಗರಿಕರಿಗೂ ಇರುತ್ತದೆ. ಹೀಗಾಗಿ ಅವರು ಫೋನ್ ತಂದು ಇಲ್ಲಿ ಬಳಸಿರುವ ಸಾಧ್ಯತೆಯಿದೆ. ಏನೇ ಇರಲಿ, ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.