Advertisement

ತಮಿಳುನಾಡು ರಾಜಕೀಯಕ್ಕೆ ಶಶಿಕಲಾ ರಿ ಎಂಟ್ರಿ.? ಮತ್ತೆ ಎಐಎಡಿಎಂಕೆ ಗೆ ಶಶಿಕಲಾ ನೇತೃತ್ವ ?

07:42 PM May 30, 2021 | Team Udayavani |

ಚೆನ್ನೈ :  ಎಐಎಡಿಎಂಕೆಯಿಂದ ಹೊರಗುಳಿದಿದ್ದ ವಿ ಕೆ ಶಶಿಕಲಾ, ರಾಜಕೀಯ ಪುನರಾಗಮನ ಮಾಡುವುದರ ಬಗ್ಗೆ ಸುಳಿವೊಂದು ಸಿಕ್ಕಿದೆ. ಎಐಎಡಿಎಂಕೆ ಪಕ್ಷದ ನಿಯಂತ್ರಣವನ್ನು ಮರಳಿ ಪಡೆಯಲಿದ್ದಾರೆಯೇ ಎಂಬ ವಿಚಾರ ಈಗ ತಮಿಳು ನಾಡಿನ ರಾಜಕೀಯ  ವಲಯದಲ್ಲಿ ಕುತೂಹಲ ಮೂಡಿಸಿದೆ.

Advertisement

ಏಪ್ರಿಲ್ 6 ರ ವಿಧಾನಸಭಾ ಚುನಾವಣೆಗೂ ಮುಂಚೆ ತಾನು ರಾಜಕೀಯದಿಂದ ದೂರವಿರುವುದಾಗಿ ಘೋಷಿಸಿದ್ದ ಶಶಿಕಲಾ, ಪಕ್ಷವು ಆಂತರಿಕವಾಗಿ ಹಾಳಾಗುವುದನ್ನು ನೋಡಲಾಗುವುದಿಲ್ಲ ಎಂದು ಹೇಳಿದ್ದರು. ಇದು, ಎಐಎಡಿಎಂಕೆ ಪಕ್ಷದೊಳಗಿನ ಭಿನ್ನಮತದದ ಬಗ್ಗೆ ಅವರಿಗಿದ್ದ ಅಸಮಾಧಾನವನ್ನು ತೋರಿಸಿತ್ತು. ಪರೋಕ್ಷವಾಗಿ ಕೆ ಪಳನಿಸ್ವಾಮಿ ಮತ್ತು ಓ ಪನ್ನೀರ್ ಸೆಲ್ವಂ ನಡುವಿನ ಭಿನ್ನಾಭಿಪ್ರಾಯಗಳಿಗೆ ಅವರು ಅಸಮಾಧಾನವನ್ನು ವ್ಯಕ್ತ ಪಡಿಸಿದ್ದರು.

ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿಶ್ವಾಸಾರ್ಹ ಆಪ್ತೆ, ಶಶಿಕಲಾ ಅವರು ತಮ್ಮ ಇಬ್ಬರು ಅತ್ಯಾಪ್ತರೊಂದಿಗಗಿನ ಫೋನ್ ಸಂಭಾಷಣೆಯಲ್ಲಿ ಪಕ್ಷದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಲ್ಲದೇ, ಪಕ್ಷಕ್ಕೆ ಮರು ಆಗಮನದ ಬಗ್ಗೆ ವಿಮರ್ಶಿರುವ ಆಡಿಯೋ ಈಗ ಹೊರಬಿದ್ದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಮೇ 31ರಂದು ಉಡುಪಿ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಲಸಿಕೆ ಲಭ್ಯ

ಶಶಿಕಲಾ ತಮ್ಮ ಆಪ್ತರೊಂದಿಗೆ ಮಾತಾಡಿದ್ದಾರೆ ಎಂದು ಹೇಳಲಾಗುತ್ತಿರುವ ಮೊದಲ ಆಡಿಯೋ ಕ್ಲಿಪ್ ನಲ್ಲಿ “ಪಕ್ಷದ ಸ್ಥಿತಿಯನ್ನು ಸುಗಮಗೊಳಿಸಲು ನಾನು ಖಂಡಿತ ಪಕ್ಷಕ್ಕೆ ಬರುತ್ತೇನೆ’ ಎಂದು ಅವರು ಹೇಳಿದ್ದರು. ಮತ್ತೊಂದು ಆಡಿಯೋ ಕ್ಲಿಪ್ ನಲ್ಲಿ, ಎಐಎಡಿಎಂಕೆ ಪಕ್ಷದ  ಬಗ್ಗೆ ಮಾತಾಡಿದ್ದು, ಪಕ್ಷ ಕಟ್ಟುವುದಕ್ಕಾಗಿ ಹಲವು ನಾಯಕರ ಕಠಿಣ ಪರಿಶ್ರಮದ ಇದೆ. “ಈಗ ಪಕ್ಷದಲ್ಲಿ ಭಿನ್ನಮತವಿರುವುದನ್ನು ನೋಡಲು ದುಃಖಕರವಾಗಿದೆ. ಇದನ್ನು ನೋಡಿ ಮೂಕ ಪ್ರೇಕ್ಷಕಳಾಗಿ ಇರಲು ಸಾಧ್ಯವಿಲ್ಲ’ ಎಂದು ತನ್ನ ಆಪ್ತರಲ್ಲಿ ಫೋನ್ ಸಂಭಾಷಣೆಯಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.

Advertisement

ಕಳೆದ ಜನವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಮತ್ತು ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದೇ ನಿರೀಕ್ಷಿಸಲಾಗಿದ್ದ ವಿ.ಕೆ. ಶಶಿಕಲಾ ನಟರಾಜನ್ ಅವರು ರಾಜಕೀಯ ಜೀವನವನ್ನು ಮಾರ್ಚ್ ನಲ್ಲಿ ತ್ಯಜಿಸಿದ್ದರು. ತಮಿಳುನಾಡು ಚುನಾವಣೆಗೆ ಎರಡು ವಾರ ಬಾಕಿ ಇರುವಾಗಲೇ ಅವರು ಈ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದರು. ಈ ಮೂಲಕ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಅವರ ನಾಯಕತ್ವ, ಸ್ಪರ್ಧೆ ಸೇರಿದಂತೆ ತೀವ್ರ ಕುತೂಹಲ ಮತ್ತು ಚರ್ಚೆಯ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದರು.

ರಾಜಕೀಯದಿಂದ ಹೊರಗುಳಿದೇ ಪಕ್ಷದ ಗೆಲುವಿಗೆ ಪ್ರಾರ್ಥಿಸುತ್ತೇನೆ ಎಂದಿದ್ದರು ಶಶಿಕಲಾ

ಜಯಾ (ಮಾಜಿ ಮುಖ್ಯಮಂತ್ರಿ ಡಿ. ಜಯಲಲಿತಾ) ಬದುಕಿದ್ದಾಗ ನಾನು ಎಂದಿಗೂ ಅಧಿಕಾರ ಅಥವಾ ಸ್ಥಾನಮಾನದ ಹಿಂದೆ ಹೋಗಿರಲಿಲ್ಲ. ಆಕೆ ನಿಧನರಾದ ಬಳಿಕವೂ ಅದನ್ನು ಮಾಡುವುದಿಲ್ಲ. ನಾನು ರಾಜಕಾರಣವನ್ನು ತ್ಯಜಿಸುತ್ತಿದ್ದೇನೆ. ಆದರೆ ಆಕೆಯ ಪಕ್ಷದ ಗೆಲುವಿಗೆ ಪ್ರಾರ್ಥಿಸುತ್ತೇನೆ. ಆಕೆಯ ಪಾರಂಪರ್ಯ ಮುಂದುವರಿಯಲಿ’ ಎಂದು ಹೇಳಿದ್ದರು.

2016ರ ಡಿಸೆಂಬರ್‌ನಲ್ಲಿ ಜಯಲಲಿತಾ ಮೃತಪಟ್ಟ ಬಳಿಕ ಶಶಿಕಲಾ ಪಕ್ಷದ ಮುಖ್ಯಸ್ಥೆಯ ಸ್ಥಾನದಲ್ಲಿ ಕುಳಿತಿದ್ದರು. ಆದರೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರಿಂದ, ತಮ್ಮ ಗೈರಿನಲ್ಲಿ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಮಾಡಿದ್ದರು. ಆದರೆ ಶಶಿಕಲಾ ವಿರುದ್ಧ ಬಂಡಾಯವೆದ್ದಿದ್ದ ಓ. ಪನ್ನೀರ್‌ಸೆಲ್ವಂ ಜತೆ ಇಪಿಎಸ್ ಕೈಜೋಡಿಸಿದ್ದರು. ಇಬ್ಬರೂ ಸೇರಿ ಶಶಿಕಲಾ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು.

ಒಟ್ಟಿನಲ್ಲಿ, ಶಶಿಕಲಾ ಮಾತಾಡಿದ್ದಾರೆ ಎಂದು ಹೇಳಲಾಗುತ್ತಿರುವ ಫೋನ್ ಆಡಿಯೋ ಕ್ಲಿಪಿಂಗ್ಸ್ ಗಳ ಬಗ್ಗೆ ಈಗ ತಮಿಳುನಾಡು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಶಶಿಕಲಾ ರಾಜಕೀಯಕ್ಕೆ ರಿ ಎಂಟ್ರಿ ಕೊಡಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ :  ಕೋವಿಡ್ ಬಂದ ಗರ್ಭಿಣಿ ಹೆರಿಗೆಗೆ ನೆರವಾದ ಸರಕಾರಿ ಆಸ್ಪತ್ರೆ ಸಿಬ್ಬಂದಿ-ಕಾಂಗ್ರೆಸ್ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next