Advertisement

ಶ್ರೀ ಸಸಿಹಿತ್ಲು  ಭಗವತಿ ತೀಯಾ ಸಂಘ:ವಾರ್ಷಿಕ ಮಹಾಪೂಜೆ, ಧಾರ್ಮಿಕ ಸಭೆ

11:52 AM Apr 20, 2018 | Team Udayavani |

ಮುಂಬಯಿ: ಹಿರಿಯರು ಸಂಘವನ್ನು ಕಟ್ಟಿ ಅದಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಹಿರಿಯರು ಒಳ್ಳೆಯ ಧ್ಯೇಯೋದ್ದೇಶದಿಂದ ಕಟ್ಟಿ ಬೆಳೆಸಿ ರುವ ಸಂಘವನ್ನು ಅಭಿವೃದ್ಧಿಯ ಪಥದತ್ತ ಸಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಮಾಜದ ಯುವ ಪೀಳಿಗೆ ಸಂಘದ ಮುಖಾಂತರ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುತ್ತಿರುವುದು ಅಭಿಮಾನದ ವಿಷಯವಾಗಿದೆ. ಮಹಿಳಾ ಸದಸ್ಯೆಯರೂ ಕೂಡಾ ಸಂಘದ ಏಳ್ಗೆಗಾಗಿ ಶ್ರಮಿಸಿ ವಿಶೇಷ ಕೊಡುಗೆಯನ್ನು ನೀಡುತ್ತಿದ್ದಾರೆ. ಎಲ್ಲರೂ ಒಗ್ಗಟ್ಟು ಮತ್ತು ಒಮ್ಮತದಿಂದ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಶ್ರೀ ಸಸಿಹಿತ್ಲು ಭಗವತೀ ತೀಯಾ ಸಂಘ ಮುಂಬಯಿ ಇದರ ಅಧ್ಯಕ್ಷ ಚಂದ್ರಹಾಸ ಕೆ. ಪಾಲನ್‌ ಇವರು ನುಡಿದರು.

Advertisement

ಎ. 14 ರಂದು ಭಾಂಡೂಪ್‌ ಪಶ್ಚಿಮದ ಸ್ವಾಮಿ ನಿತ್ಯಾ ನಂದ ಮಂದಿರದಲ್ಲಿ ಸಸಿಹಿತ್ಲು ಶ್ರೀ ಭಗವತಿ  ದೇವಸ್ಥಾನದ ವರ್ಷಾವಧಿ ನಡಾವಳಿ ಮಹೋತ್ಸವದ ಅಂಗವಾಗಿ ಶ್ರೀ ಸಸಿಹಿತ್ಲು ಭಗವತೀ ತೀಯಾ ಸಂಘದ ವತಿಯಿಂದ ಜರಗಿದ 63ನೇ ವಾರ್ಷಿಕ ಮಹಾಪೂಜೆಯ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಮುಂಬಯಿಯಲ್ಲೊಂದು ನಮ್ಮ ಸಮಾಜಕ್ಕೆ ತೀಯಾ ಭವನದ ಅಗತ್ಯವಿದೆ. ತೀಯಾ ಸಂಘ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ಇವರ ತೀಯಾ ಭವನದ ಕನಸನ್ನು ನನಸಾಗಿಸಲು ನಾವೆಲ್ಲರೂ ಒಂದಾಗಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಸಮಾರಂಭದಲ್ಲಿ ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ದೇಶಸೇವೆಗೈಯುತ್ತಿರುವ ಸಮಾಜ ಮೇಜರ್‌ ತರುಣ್‌ ದಯಾ ಸಾಲ್ಯಾನ್‌ ಅವರ ಪರವಾಗಿ ಅವರ ಪಾಲಕರಾದ ದಯಾ ಸಾಲ್ಯಾನ್‌ ಮತ್ತು ಶೈಲಜಾ ದಯಾ ಸಾಲ್ಯಾನ್‌ ದಂಪತಿಯನ್ನು ಹಾಗೂ ಸಂಘದ ಹಿರಿಯರು ಮತ್ತು ಮಾಜಿ ಉಪಾಧ್ಯಕ್ಷ ತಿಮ್ಮಪ್ಪ ಆರ್‌. ಸಾಲ್ಯಾನ್‌ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.

ಪುತ್ರ ತರುಣ್‌ ಸಾಲ್ಯಾನ್‌ ಪರವಾಗಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಶೈಲಜಾ ಸಾಲ್ಯಾನ್‌ ಇವರು, ಇಂದು ನನ್ನ ಪುತ್ರನ ಸಾಧನೆಯನ್ನು ಗುರುತಿಸಿ ನೀವೆಲ್ಲಾ ನನ್ನನ್ನು ಸಮ್ಮಾನಿಸಿದ್ದೀರಿ. ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುವ ಮೂಲಕ ಸಂಘವು ಉತ್ತಮ ಕಾರ್ಯವನ್ನು 

ಮಾಡುತ್ತಿದೆ. ಇದರಿಂದ ಸಾಧಕರಿಗೆ ಪ್ರೇರಣೆ ನೀಡಿ ದಂತಾಗುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದರು.

Advertisement

ಇನ್ನೋರ್ವ ಸಮ್ಮಾನಿತರಾದ ಸಂಘದ  ಮಾಜಿ ಉಪಾಧ್ಯಕ್ಷ ತಿಮ್ಮಪ್ಪ ಆರ್‌. ಸಾಲ್ಯಾನ್‌ ಅವರು ಮಾತನಾಡಿ, ಭಗವತಿಯ ನಾಮದಡಿಯ ಈ ಸಂಘದಲ್ಲಿ ಸೇವೆಯನ್ನು ಸಲ್ಲಿಸಲು ಭಾಗ್ಯಬೇಕು. ನಾನು ಈ ಸಂಘಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಸಮ್ಮಾನಿಸಿರುವುದು ಸಂತೋಷ ತಂದಿದೆ. ಸಂಘದ ಹಿರಿಯರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ. ಪ್ರಸ್ತುತ ಚಂದ್ರಹಾಸ್‌ ಕೆ. ಪಾಲನ್‌ ಅವರ ನೇತೃತ್ವದಲ್ಲಿ ಸಂಘವು ಅಭಿವೃದ್ಧಿಯತ್ತ ಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಂಘವು ಇನ್ನಷ್ಟು ಬಲಿಷ್ಠಗೊಂಡು ಸಮಾಜ ಬಾಂಧವರ ಮನೆ-ಮನಗಳನ್ನು ಗೆಲ್ಲುವಂತಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಸಸಿಹಿತ್ಲು ಭಗವತೀ ತೀಯಾ ಸಂಘ ಮುಂಬಯಿ ಗೌರವಾಧ್ಯಕ್ಷ ಲಾಜರ್‌ ಟಿ. ಎಂ. ಕೋಟ್ಯಾನ್‌, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಟಿ. ಬೆಳ್ಚಡ,  ಉಪಾಧ್ಯಕ್ಷ ಆನಂದ ಜೆ. ಬಂಗೇರ, ಗೌರವ ಪ್ರಧಾನ ಕೋಶಾಧಿಕಾರಿ ರಮೇಶ್‌ ಬಿ. ಸಾಲ್ಯಾನ್‌, ಪೂಜಾ ಸಮಿತಿಯ ಅಧ್ಯಕ್ಷ ವಸಂತ ಬಿ. ಕರ್ಕೇರ, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಶ್ರೀ ಭಗವತೀ ಸೇವಾ ಸಂಘದ ಅಧ್ಯಕ್ಷ ರವಿ ಮಂಜೇಶ್ವರ, ವಿದ್ಯಾನಿಧಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಎಸ್‌. ಕೋಟ್ಯಾನ್‌ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಯಕ್ಷಗಾನ ಕಲಾವಿದ ರಾಜಾ ತುಂಬೆ ಕಾರ್ಯಕ್ರಮ ನಿರ್ವಹಿಸಿದರು.

ಉಪಾಧ್ಯಕ್ಷ ಪ್ರವೀಣ್‌ ಕೆ., ಜೊತೆ ಕಾರ್ಯದರ್ಶಿ ಜಯ ಎಂ. ಕೋಟ್ಯಾನ್‌, ಜೊತೆ ಕೋಶಾಧಿಕಾರಿ ಮೃತ್ಯುಂಜಯ ಎಂ. ಬೆಳ್ಚಡ, ಕಾರ್ಯಕಾರಿ ಸಮಿತಿಯ ಸದಸ್ಯರು, ಪೂಜಾ ಸಮಿತಿಯ ಸದಸ್ಯರು, ಶಿಕ್ಷಣ ನಿಧಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಪ್ರಾರಂಭದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಪ್ರಧಾನ ಅರ್ಚಕರಾಗಿ ಸದಾಶಿವ ಡಿ. ಕುಂದರ್‌, ಸಹಾಯಕ ಅರ್ಚಕರಾಗಿ ಶಂಕರ್‌ ಎಸ್‌. ಪಾಲನ್‌, ರಮೇಶ್‌ ಪಿ. ಬಂಗೇರ, ಭಾಸ್ಕರ ಬಿ. ಕೋಟ್ಯಾನ್‌ ಮೊದಲಾದವರು ಸಹಕರಿಸಿದರು. 

ಮಹಾಪೂಜೆಯ ಸಂದರ್ಭದಲ್ಲಿ 100 ಹೆಚ್ಚು ಅಟ್ಟಿಮಲ್ಲಿಗೆ ಹೂ ಭಕ್ತರಿಂದ ಶ್ರೀ ಭಗವತಿಗೆ ಅರ್ಪಿತವಾಗಿರುವುದು ವಿಶೇಷವಾಗಿತ್ತು. ಸಾವಿರಾರು ಮಂದಿ ಭಕ್ತಾದಿಗಳು, ಸಮಾಜ ಬಾಂಧವರು ಮಹಾಪೂಜೆ ಮತ್ತು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿದ್ದರು. 

ಚಿತ್ರ-ವರದಿ : ಸುಭಾಷ್‌  ಶಿರಿಯಾ.

Advertisement

Udayavani is now on Telegram. Click here to join our channel and stay updated with the latest news.

Next