ಪುತ್ತೂರು: ತುಳುವ ರಾಜ್ಯದ ಬೇಡಿಕೆಯೊಂದಿಗೆ ಸಸಂತ್ರ ತುಳುನಾಡು ಪಕ್ಷ ಅಸ್ತಿತ್ವಕ್ಕೆ ಬಂದಿದೆ. ಕರಾವಳಿ ಜಿಲ್ಲೆಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದು, ಪುತ್ತೂರಿನಿಂದ ಪಡು ಮಲೆಯ ಉಳ್ಳಾಲ ಧರ್ಮನಗರ ನಿವಾಸಿ ವಿದ್ಯಾಶ್ರೀ ಎಸ್. ಚುನಾವಣೆ ಎದುರಿಸಲಿದ್ದಾರೆ ಎಂದು ಪಕ್ಷದ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್. ಅವರು ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ತುಳು ಭಾಷೆಗೆ ಸ್ಥಾನಮಾನ ನೀಡಲು ವಿಫಲವಾಗಿವೆ. ಎತ್ತಿನಹೊಳೆ ಯೋಜನೆಗೆ ಅದೇ ಪಕ್ಷಗಳು ಅನುಮೋದನೆ ನೀಡಿ ಪ್ರತಿಭಟನೆ ನಾಟಕ ವಾಡುತ್ತಿವೆ. ರಾಷ್ಟ್ರೀಯ ಪಕ್ಷಗಳು ತುಳುನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಶ್ರೀಮಂತ ತುಳುನಾಡಿನ ಸಂಪನ್ಮೂಲವನ್ನು ತುಳುನಾಡಿನ ಪ್ರಗತಿಗೆ ವಿನಿಯೋಗಿಸುವಲ್ಲಿ ಜನಪ್ರತಿನಿ ಧಿಗಳು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐದಾರು ವರ್ಷಗಳ ಹಿಂದೆಯೇ ಪಕ್ಷ ಸ್ಥಾಪನೆಯ ಆಲೋಚನೆ ಇತ್ತು. ಇದೀಗ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು, ಚುನಾವಣೆ ಎದುರಿಸಲಿದ್ದೇವೆ ಎಂದರು.
ಈಗಾಗಲೇ ಕಾರ್ಕಳದಿಂದ ಸುಮಂತ್ ಕೆ. ಪೂಜಾರಿ ಕಣಕ್ಕೆ ಧುಮುಕಲಿದ್ದಾರೆ. ಮುಂದೆ ಬೆಳ್ತಂಗಡಿ, ಸುರತ್ಕಲ್ ಸಹಿತ ದ.ಕ., ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗುವುದು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ಇದು ಸಾಧ್ಯವೇ ಆಗದಿದ್ದರೆ ತುಳು ರಾಜ್ಯ ಆಗಬೇಕು. ಸ್ಥಾನಮಾನವನ್ನು ನಾವೇ ಪಡೆದುಕೊಳ್ಳುತ್ತೇವೆ. ತುಳು ನಾಡಿನಲ್ಲಿ ಬ್ಯಾಂಕ್, ಕಚೇರಿ, ಕೆಎಸ್‌ಆರ್‌ಟಿಸಿ, ರೈಲ್ವೇ ಸಹಿತ ವಿವಿಧ ಹುದ್ದೆಗಳಿಗೆ ಹಿಂದಿ, ಮಲಯಾಳ, ತಮಿಳು ಭಾಷಿಗರನ್ನು ನೇಮಿಸಲಾಗಿದೆ. ತುಳುನಾಡಿನ ಜನರು ಅವಕಾಶ ವಂಚಿತರಾಗಿದ್ದು, ಅವರು ವಿದೇಶಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ ಎಂದು ದಿನೇಶ್ ರೈ ಕಡಬ ಅವರು ಹೇಳಿದರು.
ಸಸಂತ್ರ ತುಳುನಾಡು ಪಕ್ಷದ ಅಭ್ಯರ್ಥಿ ವಿದ್ಯಾಶ್ರೀ ಎಸ್., ಜೈ ತುಳುನಾಡು ಸಂಘಟನೆಯ ಯತೀಶ್ ಕುಮಾರ್ ಮುಂಡೋಡಿ, ರಾಜೇಶ್ ಕುಲಾಲ್, ವಿದ್ಯಾಶ್ರೀ ಅವರ ಪತಿ ಜಿ. ಸುಧಾಕರ್ ಉಳ್ಳಾಲ್ ಉಪಸ್ಥಿತರಿದ್ದರು.
ಅಭ್ಯರ್ಥಿಯ ಪರಿಚಯ
ಪಡುಮಲೆ ಲಕ್ಷ್ಮೀನಾರಾಯಣ ರೈ – ಯಶೋದಾ ದಂಪತಿ ಪುತ್ರಿ ವಿದ್ಯಾಶ್ರೀ ಎಸ್. ಪತಿ ಸುಧಾಕರ್. ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತುಳುಲಿಪಿ ಕಲಿಸಿದ ಪ್ರಥಮ ತುಳುಲಿಪಿ ಶಿಕ್ಷಕಿ ಇವರು. ಪಡುಮಲೆ ಹಿ.ಪ್ರಾ. ಶಾಲೆಯಲ್ಲಿ ಪ್ರಾ. ವಿದ್ಯಾಭ್ಯಾಸ, ಕುಂಬ್ರ ಸ.ಪ.ಪೂ. ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಬಳಿಕ ಮಲ್ಟಿಮೀಡಿಯಾ ಟೆಕ್ನಾಲಜೀಸ್‌ನಲ್ಲಿ ಬಿ.ಎಸ್ಸಿ. ಮಾಡಿ ತುಳುಲಿಪಿ ಅಭ್ಯಾಸ ಮಾಡಿದ್ದಾರೆ ಎಂದು ಶೈಲೇಶ್ ತಿಳಿಸಿದರು.