ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರ ಈ ವಾರ ತೆರೆಗೆ ಅಪ್ಪಳಿಸುತ್ತಿದೆ. ಎರಡು ದಿನದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರದ ಕುರಿತು ಹೇಳಿಕೊಳ್ಳಲೆಂದೇ ಚಿತ್ರತಂಡ ಪತ್ರಕರ್ತರ ಮುಂದೆ ಆಗಮಿಸಿತ್ತು. ಚಿತ್ರವನ್ನು ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶಿಸಿದ್ದಾರೆ. ಚಿತ್ರದ ಕಥೆ ರಚನೆಯ ಹಿಂದೆ ಜನಾರ್ದನ್ ಚಿಕ್ಕಣ್ಣ, ಹರಿಕೃಷ್ಣ ಇದ್ದರೆ, ನಿರ್ಮಾಣವನ್ನು ಪ್ರಶಾಂತ್ ರೆಡ್ಡಿ, ದೇವರಾಜ್ ರಾಮಣ್ಣ, ಜನಾರ್ದನ್ ಚಿಕ್ಕಣ್ಣ ಮಾಡಿದ್ದಾರೆ.
ಕಥೆ ಬಗ್ಗೆ ಹೇಳುವುದಾದರೆ, ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಅವಕಾಶ ಬಂದೇ ಬರುತ್ತೆ. ಬಂದಾಗ ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಿ ಎಂಬುದು ಕಥೆ. ಚಿತ್ರದ ಹೀರೋಗೂ ಅಂಥದ್ದೊಂದು ಅವಕಾಶ ಬರುತ್ತೆ. ಅದನ್ನು ಅವನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ ಎಂಬುದು ಕಥೆ. ನಾಯಕ ಹಾಗೂ ನಾಯಕಿ ಒಂದು ಸ್ಥಳಕ್ಕೆ ಹೋದಾಗ, ಸಮಸ್ಯೆಗೆ ಸಿಲುಕುತ್ತಾರೆ. ಅದರಿಂದ ಅವರು ಹೇಗೆ ಹೊರ ಬರುತ್ತಾರೆ ಅನ್ನೋದೇ ಸಸ್ಪೆನ್ಸ್ ಎಂಬುದು ಚಿತ್ರತಂಡದ ಮಾತು.
ಚಿತ್ರದಲ್ಲಿ ರಿಷಿ ಎಂಬಿಎ ಪದವೀಧರರಾಗಿ ನಟಿಸಿದ್ದಾರೆ. ಅಪ್ಪ ಮಾಡಿದ ಸಾಲ ತೀರಿಸಲು ಬಂಪರ್ ಆಫರ್‌ವೊಂದು ಸಿಗುತ್ತದೆ. ಅದರ ಹಿಂದೆ ಹೋದಾಗ, ಅಲ್ಲೊಂದಷ್ಟು ಘಟನೆಗಳು ಸಂಭವಿಸುತ್ತವೆ. ಆ ಘಟನೆಯಿಂದ ಹೇಗೆ ಹೊರ ಬರುತ್ತಾನೆ ಅನ್ನೋದು ಕಥಾಹಂದರ. ಚಿತ್ರಕ್ಕೆ ಧನ್ಯಾ ಬಾಲಕೃಷ್ಣ ನಾಯಕಿ. ಈ ಹಿಂದೆ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ವಿಘ್ನೇಶ್‌ರಾಜ್ ಛಾಯಾಗ್ರಹಣವಿದೆ.
ಶಾಂತಕುಮಾರ್ ಸಂಕಲನ ಮಾಡಿದರೆ, ಶ್ರೀಧರ್-ಅಜರ್ ನೃತ್ಯ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ದತ್ತಣ್ಣ ನಾಯಕನ ತಂದೆ ಪಾತ್ರ ಮಾಡಿದರೆ, ಶಾಲಿನಿ ನಾಯಕಿಯ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಮಿತ್ರ ಅವರಿಲ್ಲಿ ಆಟೋ ಚಾಲಕ ಪಾತ್ರ ಮಾಡಿದ್ದು, ರಂಗಾಯಣ ರಘು ಫೈನಾನ್ಸಿಯರ್ ಪಾತ್ರ ನಿರ್ವಹಿಸಿದ್ದಾರೆ. ಸಿದ್ದುಮೂಲಿಮನೆ, ಆಶಿಕಿ, ಆನಂದ್ ಇತರರು ನಟಿಸಿದ್ದಾರೆ. ನಾಗೇಂದ್ರಪ್ರಸಾದ್, ಅಲೋಕ್, ಅನೂಪ್ ಗೀತೆ ರಚಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತವಿದೆ. ಈಗಾಗಲೇ ಪುನೀತ್ ರಾಜ್‌ಕುಮಾರ್ ಹಾಡಿರುವ ಹಾಡೊಂದು ಜೋರು ಸದ್ದು ಮಾಡಿದ್ದು, ಟ್ರೇಲರ್‌ಗೂ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಜಯಣ್ಣ ಹಾಗು ಭೋಗೇಂದ್ರ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಕರ್ನಾಟಕ ಸೇರಿದಂತೆ ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಕಡೆಗಳಲ್ಲೂ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗಲಿದೆ.