ಮಂಗಳೂರು: ಪಿವಿಎಸ್ ಸಮೂಹ ಸಂಸ್ಥೆಯ ನಿರ್ಮಾಣ ಸಂಸ್ಥೆ ಪಿವಿಎಸ್ ಇನ್ಪ್ರಾ ವತಿಯಿಂದ ಪಿವಿಎಸ್ ಜಂಕ್ಷನ್ ಬಳಿ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣ “ಸರೋಜಿನಿ ಮಧುಸೂದನ ಕುಶೆ ಸದನ’ವು ಬುಧವಾರ ಉದ್ಘಾಟನೆಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, ತಾನು ಬದುಕುವ ಜತೆಗೆ ಇತರರು ಕೂಡ ನೆಮ್ಮದಿಯಿಂದ ಬದುಕಬೇಕು ಎಂದು ಬಯಸುವುದು ನೈಜ ಬದುಕಿನ ಕಲ್ಪನೆ ಎಂದು ಹೇಳಿದರು.
ಋಗ್ವೇದದಲ್ಲಿ ಹೇಳಿದ ಮಾತಿನಂತೆ ಹರಿಯುವ ನದಿಯಲ್ಲಿ ಎಲೆಯೂ ತೇಲುತ್ತದೆ, ದೋಣಿಯೂ ತೇಲುತ್ತದೆ. ಆದರೆ ಎಲೆಯಲ್ಲಿ ಒಂದು ಪುಟ್ಟ ಹಕ್ಕಿ ಕುಳಿತರೂ ಅದು ಮುಳುಗುತ್ತದೆ. ಆದರೆ ದೋಣಿ ತಾನು ದಡ ಸೇರುವುದರೊಂದಿಗೆ ತನ್ನೊಂದಿಗೆ ಬಂದ ಇತರರನ್ನೂ ದಡ ಸೇರಿಸುತ್ತದೆ. ಅದೇ ರೀತಿ ಪಿವಿಎಸ್ ಸಂಸ್ಥೆ ಕೂಡ ಹಲವು ಜನರಿಗೆ ಉದ್ಯೋಗಾವಕಾಶ, ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಪಿವಿಎಸ್ ಸಮೂಹ ಸಂಸ್ಥೆಯ ಚೇರ್‌ವೆುನ್ ಮತ್ತು ಆಡಳಿತ ನಿರ್ದೇಶಕಿ ಸರೋಜಿನಿ ಮಧುಸೂಧನ ಕುಶೆ ನೂತನ ಕಟ್ಟಡ ಉದ್ಘಾಟಿಸಿದರು. ಮುಖ್ಯಅತಿಥಿ ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಮಹಾ ಪ್ರಬಂಧಕ ಜಿ.ಎಸ್.ಹುಳಿಕಟ್ಟಿ ಮಾತನಾಡಿ, ಒಂದು ಸಂಸ್ಥೆ ಬೆಳೆಯುವುದೆಂದರೆ ಉತ್ತಮ ಲಾಭ ಗಳಿಸುವುದು ಎಂದರ್ಥವಲ್ಲ. ಆ ಸಂಸ್ಥೆಯ ಮೂಲಕ ಎಷ್ಟು ಜನರು ಬದುಕು ಕಟ್ಟಿ ಕೊಂಡಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಿವಿಎಸ್ ಸಂಸ್ಥೆ ಸಾವಿರಾರು ಜನರಿಗೆ ಬದುಕು ಕಟ್ಟಲು ನೆರವಾಗಿದೆ ಎಂದು ಶ್ಲಾಘಿಸಿದರು. ಗೋವಾ ಸರಕಾರದ ಮಾಜಿ ಸಚಿವ ಸುರೇಂದ್ರ ವಿ.ಸಿರ್‌ಸಾಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೋವಾ ಮಾಪುಸಾದ ಧ್ಯಾನ್ ಪ್ರಸಾರಕ್ ಮಂಡಲ್‌ನ ಅಧ್ಯಕ್ಷ ಶ್ರೀಕೃಷ್ಣ ಟಿ.ಪೋಕಳೆ, ಕೆನರಾ ವಾಣಿಜ್ಯ –
ಕೈಗಾರಿಕಾ ಸಂಸ್ಥೆ ಅಧ್ಯಕ್ಷೆ ವತಿಕಾ ಪೈ ಹಾಗೂ ಕುಂದಾಪುರ ವಡೇರ ಹೋಬಳಿಯ ಪಿವಿಎಸ್ ಸರೋಜಿನಿ
ಮಧುಸೂದನ ಕುಶೆ ಸರಕಾರಿ ಹಿರಿಯ ಶಾಲೆಯ ಸಂಸ್ಥಾಪಕ ಮುಖ್ಯೋಪಾಧ್ಯಾಯ ಎ.ಚಂದ್ರಶೇಖರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎ.ಕೆ.ಉಪಾಧ್ಯಾಯ ಪ್ರಸ್ತಾವನೆಗೈದರು. ಪಿವಿಎಸ್ ಸಂಸ್ಥೆಯ ಮುಖೇಶ್ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.