ಅರ್ಜುನ್ ಸರ್ಜಾ ಕುಟುಂಬದಿಂದ ಒಬ್ಬೊಬ್ಬರೇ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಈಗಾಗಲೇ ಚಿರಂಜೀವಿ, ಧ್ರುವ ಸರ್ಜಾ ಚಿತ್ರರಂಗದಲ್ಲಿ ನೆಲೆ ನಿಂತಿರೋದು ಈಗ ಅವರ ಇನ್ನಷ್ಟು ಮಂದಿ ಸಂಬಂಧಿಕರಿಗೆ ಚಿತ್ರರಂಗಕ್ಕೆ ಬರಲು ಪ್ರೇರಣೆಯಾಗಿದೆ ಎಂದರೆ ತಪ್ಪಲ್ಲ. ಈಗ ಅರ್ಜುನ್ ಸರ್ಜಾ ಅವರ ಸಂಬಂಧಿ ಪವನ್ ತೇಜಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಅದು “ಅಥರ್ವ’ ಸಿನಿಮಾ ಮೂಲಕ. ಹೌದು, “ಅಥರ್ವ’ ಎಂಬ ಚಿತ್ರವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ.
ಪವನ್ ತೇಜಾ ಅವರಿಗೂ ಚಿತ್ರರಂಗಕ್ಕೆ ಬರಬೇಕೆಂಬ ಆಸೆ ಇತ್ತಂತೆ. ಅದೊಂದು ದಿನ ಅರ್ಜುನ್ ಸರ್ಜಾ ಅವರ ಬಳಿ ತಮ್ಮ ಆಸೆಯನ್ನು ತೋಡಿಕೊಂಡರಂತೆ. ಆಗ ಅರ್ಜುನ್, ಚಿತ್ರರಂಗಕ್ಕೆ ಬರುವ ಮುನ್ನ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು, ನಿನಗೆ ನಿನ್ನ ಮೇಲೆ ವಿಶ್ವಾಸ ಬಂದ ನಂತರ ಬಾ ಎಂದರಂತೆ. ಅದರಂತೆ ಮೈಸೂರಿನಲ್ಲಿ ಪವನ್ ನಾಟಕ ತಂಡವೊಂದನ್ನು ಸೇರಿಕೊಂಡು ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿ ನಟನೆಯ ಬಗೆಗಿನ ತಮ್ಮ ವಿಶ್ವಾಸ ಹೆಚ್ಚಿಸಿಕೊಂಡರಂತೆ. ಜೊತೆಗೆ 15 ಕೆಜಿ ತೂಕ ಇಳಿಸಿಕೊಂಡು ಫಿಟ್ ಆದರಂತೆ. ಆಗ ಸಿಕ್ಕಿದ ಕಥೆ “ಅಥರ್ವ’. ಪವನ್ ಕೇಳಿದ ಮೂರು ಕಥೆಗಳಲ್ಲಿ “ಅಥರ್ವ’ ತುಂಬಾ ಇಷ್ಟವಾಗಿ ಒಪ್ಪಿಕೊಂಡಿದ್ದಾಗಿ ಹೇಳುತ್ತಾರೆ ಪವನ್. “ಈ ಚಿತ್ರದಲ್ಲಿ ನಾನು ಮೂರು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕ ಅರುಣ್ ಸಿನಿಮಾಕ್ಕೆ ಸಾಕಷ್ಟು ತಯಾರಿಮಾಡಿಕೊಂಡಿದ್ದರು. ಇಲ್ಲಿ ನಾನು ಹೀರೋ ಅನ್ನೋದಕ್ಕಿಂತ ಕಥೆಯೇ ಹೀರೋ ಎನ್ನಬಹುದು. ಎಲ್ಲರಿಗೂ ಇಲ್ಲಿ ಸಮಾನ ಪಾತ್ರವಿದೆ. ಆ ತರಹದ ಒಂದು ಹೊಸ ಬಗೆಯ ಕಥೆಯಿದು’ ಎಂದು ಹೇಳಿಕೊಂಡರು ಪವನ್.
ಈ ಚಿತ್ರವನ್ನು ಅರುಣ್ ನಿರ್ದೇಶಿಸುತ್ತಿದ್ದಾರೆ. ಇವರಿಗಿದು ಮೊದಲ ಸಿನಿಮಾ. ಅಥರ್ವ ಎಂದರೆ ದೇವರ ಹೆಸರು. ಅದನ್ನೇ ಈಗ ಸಿನಿಮಾಕ್ಕೆ ಇಟ್ಟಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ಒಂದು ಹುಟ್ಟು ಹಾಗೂ ಸಾವಿನೊಂದಿಗೆ ಚಿತ್ರ ಆರಂಭವಾಗಿ ಅಂತ್ಯವಾಗುತ್ತದೆಯಂತೆ. ಅದರ ಮಧ್ಯೆ ನಡೆಯುವುದೇ ಕಥೆ. ಯಾರ ಹುಟ್ಟು, ಯಾರ ಸಾವು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು. ಚಿತ್ರದ ನಾಯಕ ಪರರ ಹಿತ ಬಯಸುವ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಎದೆ ಬಗೆದು ರಕ್ತ ಕುಡಿಯೋ ರಾಕ್ಷಸ ಒಂದು ಕಡೆಯಾದರೆ, ಆ ರಾಕ್ಷಸನ ವಿರುದ್ಧ ಹೋರಾಡುವ ಒಬ್ಬ ದಕ್ಷ ಅಧಿಕಾರಿ ಇನ್ನೊಂದು ಕಡೆ … ಇದರ ನಡುವೆ ಕಥೆ ಸಾಗಲಿದೆ ಎಂದು ವಿವರ ಕೊಟ್ಟರು.
ಈ ಚಿತ್ರವನ್ನು ವಿನಯ್ ಕುಮಾರ್ ಹಾಗೂ ರಕ್ಷಯ್ ಎನ್ನುವವರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸನಮ್ ಶೆಟ್ಟಿ ನಾಯಕಿ. ಈಗಾಗಲೇ ತಮಿಳು, ತೆಲುಗಿನಲ್ಲಿ ನಟಿಸಿರುವ ಸನಮ್‌ಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಇಲ್ಲಿ ಅವರು ಜರ್ನಲಿಸಂ ಸ್ಟೂಡೆಂಟ್ ಆಗಿ ನಟಿಸಿದ್ದಾರಂತೆ. ಸಮಾಜದಲ್ಲಿರುವ ಒಂದು ಪಿಡುಗಿನ ಬಗ್ಗೆ ಪ್ರಾಜೆಕ್ಟ್ ಮಾಡುವ ನಾಯಕಿಗೆ ನಾಯಕನ ಮೇಲೆ ಲವ್ ಆಗುತ್ತದೆ. ಕೊನೆಗೆ ತಾನು ಪ್ರಾಜೆಕ್ಟ್ ಮಾಡುತ್ತಿರುವ ಪಿಡುಗನ್ನು ನಾಯಕನ್ನೇ ಪ್ರತಿನಿಧಿಸುತ್ತಾನೆಂದು ಗೊತ್ತಾಗುವ ಮೂಲಕ ನಾಯಕಿಯ ಪಾತ್ರ ಸಾಗುತ್ತದೆಯಂತೆ. ತಾನು ನಟಿಸುತ್ತಿರುವ ಮೊದಲ ಕನ್ನಡ ಸಿನಿಮಾದಲ್ಲೇ ಒಳ್ಳೆಯ ಪಾತ್ರ, ತಂಡ ಸಿಕ್ಕ ಖುಷಿ ಹಂಚಿಕೊಂಡರು ಸನಮ್.
ಚಿತ್ರದಲ್ಲಿ ಯಶವಂತ್ ಶೆಟ್ಟಿ ವಿಲನ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ತಾರಾ, ರಂಗಾಯಣ ರಘು ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಶಿವ ಸೀನ ಛಾಯಾಗ್ರಹಣ, ರಾಘವೇಂದ್ರ ಸಂಗೀತ, ವಿಜೇತ್ ಕೃಷ್ಣ ಹಿನ್ನೆಲೆ ಸಂಗೀತವಿದೆ.