ಅಲ್ವಾರ್ : ರಾಜಸ್ಥಾನದ ಅಲ್ವಾರ್‌ನಲ್ಲಿರುವ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುಮಾರು 72 ಗಂಟೆಗಳ ಕಾಲ ಉರಿಯುತ್ತಿದ್ದ ಬೆಂಕಿಯನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಬಹುಪಾಲು ನಿಯಂತ್ರಣಕ್ಕೆ ತರಲಾಗಿದೆ, ಆದರೆ ಭಾರಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎನ್ನುವುದು ಇದುವರೆಗೆ ಬಹಿರಂಗವಾಗಿಲ್ಲ.
ಸಕಾಲಿಕ ಉಪಗ್ರಹ ಎಚ್ಚರಿಕೆಗಳು ಮತ್ತು ನೈಜ-ಸಮಯದ ಮೊಬೈಲ್ ಅಪ್ಲಿಕೇಶನ್-ಆಧಾರಿತ ಅಗ್ನಿಶಾಮಕ ಪ್ರತಿಕ್ರಿಯೆ ವ್ಯವಸ್ಥೆಯ ಲಭ್ಯತೆಯ ಹೊರತಾಗಿಯೂ ಸುಮಾರು 1000 ಹೆಕ್ಟೇರ್ ಅರಣ್ಯವನ್ನು ಬೆಂಕಿ ವ್ಯಾಪಿಸಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ.
ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದ 10 ಚದರ ಕಿಲೋಮೀಟರ್‌ನಲ್ಲಿ ಹರಡಿರುವ ಕಾಳ್ಗಿಚ್ಚು ನಿಯಂತ್ರಿಸಲು 200 ಕ್ಕೂ ಹೆಚ್ಚು ಜನರು ಮತ್ತು ಎರಡು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳನ್ನು ನೀರನ್ನು ಸಿಂಪಡಿಸಲು ಸೇವೆಗೆ ಬಳಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ST-17 ಎಂಬ ಹೆಸರಿನ ಹೆಣ್ಣು ಹುಲಿ ತನ್ನ ಎರಡು ಮರಿಗಳೊಂದಿಗೆ ವಾಸಿಸುತ್ತಿದೆ ಎಂದು ಅಧಿಕಾರಿ ಹೇಳಿದ್ದು, ಬೆಂಕಿ ಕಂಡು ಬಂದಾಗ ದೊಡ್ಡ ಪ್ರಾಣಿಗಳು ಸುರಕ್ಷಿತ ಸ್ಥಳವನ್ನು ಹುಡುಕುವ ಪ್ರವೃತ್ತಿಯನ್ನು ಹೊಂದಿರುವುದು ಕಂಡುಬಂದಿದೆ. ಹುಲಿ ತನ್ನ ಮರಿಗಳೊಂದಿಗೆ ಮಾರ್ಚ್ 26 ರಂದು ಈ ಪ್ರದೇಶದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದೆ. ಇನ್ನೂ ಎರಡು ಹುಲಿಗಳು ST-20 ಮತ್ತು ST-14 ರೋಡ್ಕೆಲಾ ಅರಣ್ಯ ಬ್ಲಾಕ್‌ನಲ್ಲಿವೆ ಎಂದು ನಂಬಲಾಗಿದೆ, ಅಲ್ಲಿಯೂ ಬೆಂಕಿ ಹರಡಿದೆ. ಹುಲಿಗೆ ಆಹಾರವಾಗುವ ಕೆಲ ಪ್ರಾಣಿಗಳು ಬೆಂಕಿಯಲ್ಲಿ ಸಾವನ್ನಪ್ಪಿರುವ ಎಲ್ಲಾ ಸಾಧ್ಯತೆಗಳಿವೆ. ಆ ಬಗ್ಗೆ ಅಧಿಕಾರಿಗಳು ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಒಟ್ಟು 27 ಹುಲಿಗಳು ಗಣತಿಗೆ ಸಿಕ್ಕಿವೆ.