Advertisement

ಕೋವಿಡ್ ಮಹಿಳಾ ವಾರಿಯರ್ಸ್‌ಗೆ ಗಿಫ್ಟ್: ದೀಪಾವಳಿಗೆ ಜೋಡಿ ಸೀರೆ

01:27 AM Sep 10, 2020 | mahesh |

ಬೆಂಗಳೂರು: ಕೋವಿಡ್ ಸಂಕಷ್ಟದ ಕಾಲದಲ್ಲಿ ಜೀವವನ್ನು ಮುಡುಪಾಗಿಟ್ಟು ಸೇವೆ ಸಲ್ಲಿಸಿದ ಮಹಿಳಾ ಕೊರೊನಾ ಯೋಧರಿಗೆ ಎರಡು ಸೀರೆಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಲು ಸರಕಾರ ನಿರ್ಧರಿಸಿದೆ. ಈ ಮೂಲಕ ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಸಹಾಯಹಸ್ತ ಚಾಚುವುದೂ ಸರಕಾರದ ಉದ್ದೇಶ.

Advertisement

ಕೈಮಗ್ಗ ಮತ್ತು ಜವುಳಿ ಇಲಾಖೆ ರಾಜ್ಯದಲ್ಲಿ ಕೋವಿಡ್ ಸಂದರ್ಭ ಸಂಕಷ್ಟಕ್ಕೆ ಸಿಲುಕಿರುವ ಕೈಮಗ್ಗ ನೇಕಾ ರರು ಹಾಗೂ ಪವರ್‌ಲೂಮ್‌ ನೇಕಾರ ರಿಗೆ ನೆರವು ನೀಡಲು ತೀರ್ಮಾನಿಸಿದ್ದು, ಲಾಕ್‌ಡೌನ್‌ ಸಂದರ್ಭ ನೇಯ್ದ ಸೀರೆ ಗಳನ್ನು ಖರೀದಿಸಿ ವಿವಿಧ ಇಲಾಖೆಗಳ ಮಹಿಳಾ ಕೊರೊನಾ ಯೋಧರಿಗೆ ಉಚಿತವಾಗಿ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

6 ಲಕ್ಷ ಸೀರೆ ಖರೀದಿ
ರಾಜ್ಯದಲ್ಲಿ 54 ಸಾವಿರ ಕೈಮಗ್ಗ ನೇಕಾರರು ಹಾಗೂ 1.25 ಲಕ್ಷ ಪವರ್‌ಲೂಮ್ಸ್‌ ನೇಕಾರರು ನೇಕಾರಿಕೆಯಲ್ಲಿ ತೊಡಗಿಕೊಂಡಿದ್ದು, ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನೇಕಾರರು ಪರಿಹಾರ ನೀಡಬೇಕೆಂಬ ಮನವಿಯನ್ನೂ ಮಾಡಿಕೊಂಡಿದ್ದರು. ಸ್ಪಂದಿಸಲು ಮುಂದಾಗಿರುವ ಕೈಮಗ್ಗ ಮತ್ತು ಜವುಳಿ ಇಲಾಖೆ 500ರಿಂದ 600 ರೂ. ಬೆಲೆಯ 6 ಲಕ್ಷ ಸೀರೆಗಳನ್ನು ಖರೀದಿಸಲು ನಿರ್ಧರಿಸಿದೆ. ಈ ಕುರಿತು ಜವುಳಿ ಸಚಿವ ಶ್ರೀಮಂತ ಪಾಟೀಲ್‌ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದು, ಯೋಜನೆ ಜಾರಿಗೆ 35 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಇಲಾಖೆ ಅಂದಾಜಿಸಿದೆ. ಜಾರಿ ಕುರಿತಂತೆ ಹಣಕಾಸು ಇಲಾಖೆಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದ್ದು, ಹಣಕಾಸು ಇಲಾಖೆಯ ಅನುಮತಿ ದೊರೆತ ತತ್‌ಕ್ಷಣ ಸೀರೆ ಖರೀದಿಸಲು ಇಲಾಖೆ ನಿರ್ಧರಿಸಿದೆ.

ಫ‌ಲಾನುಭವಿಗಳು  ಯಾರು?
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಯರು, ಮಹಿಳಾ ಪೊಲೀಸ್‌ ಸಿಬಂದಿ, ಮಹಿಳಾ ವೈದ್ಯರು ಮತ್ತು ದಾದಿಯರು, ಮಹಿಳಾ ಪೌರ ಕಾರ್ಮಿಕರು ಸೇರಿ ಸುಮಾರು ಮೂರು ಲಕ್ಷ ಮಂದಿ ಈ ಸೌಲಭ್ಯ ಪಡೆಯಲು ಅರ್ಹರು.

ಗುರುತಿನ ಚೀಟಿ ವಿತರಣೆಗೆ ನಿರ್ಧಾರ
ರಾಜ್ಯದಲ್ಲಿ ಕೃಷಿ ಅನಂತರ ಅತಿ ಹೆಚ್ಚು ಜನರು ತೊಡಗಿಕೊಂಡಿರುವ ಉದ್ಯೋಗ ನೇಕಾರಿಕೆಯಾಗಿದ್ದು, ಈ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಯಾವುದೇ ನಿರ್ದಿಷ್ಟ ಆಯ್ಕೆ ಮಾನದಂಡವಿಲ್ಲ. ಹೀಗಾಗಿ ಅನೇಕರು ನೇಕಾರಿಕೆಯಲ್ಲಿ ತೊಡಗಿಕೊಂಡಿದ್ದರೂ ಯಾವುದೇ ಸೂಕ್ತ ದಾಖಲೆ ಇಲ್ಲದಿರುವುದರಿಂದ ಸರಕಾರದ ಸಹಾಯಧನ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಎಲ್ಲ ನೇಕಾರರಿಗೂ ಗುರುತಿನ ಚೀಟಿ ನೀಡಲು ಇಲಾಖೆ ನಿರ್ಧರಿಸಿದೆ.

Advertisement

ಅಲ್ಲದೇ ರೈತರಿಗೆ ನೀಡುವ ಕೃಷಿ ಪಂಡಿತ ಪ್ರಶಸ್ತಿ ಮಾದರಿಯಲ್ಲಿ ನೇಕಾರರಿಗೂ ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಲು ಇಲಾಖೆ ನಿರ್ಧರಿಸಿದೆ. ಆತ್ಮಹತ್ಯೆಮಾಡಿಕೊಂಡ ರೈತರಿಗೆ 2 ಲಕ್ಷ ರೂ. ಪರಿಹಾರ, ಜವುಳಿ ಉದ್ಯಮ ಕಾರ್ಮಿಕರಿಗೆ ಒಂದು ಬಾರಿ 2 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ವಿಮಾ ಯೋಜನೆ ಜಾರಿಗೊಳಿಸಲು ಜವುಳಿ ಇಲಾಖೆ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next