Advertisement

ಏಕತೆ ಅನಾವರಣ: ಪ್ರಧಾನಿ ನರೇಂದ್ರಮೋದಿ ಅವರಿಂದ ಏಕತಾಪ್ರತಿಮೆ ಉದ್ಘಾಟನೆ

05:25 AM Nov 01, 2018 | Team Udayavani |

ಕೇವಡಿಯಾ/ಹೊಸದಿಲ್ಲಿ: ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಾತಂತ್ರ್ಯ ಹೋರಾಟಗಾರ, ದೇಶದ ಮೊದಲ ಗೃಹ ಸಚಿವ ಹಾಗೂ 550 ಪ್ರಾಂತ್ಯಗಳನ್ನು ಒಂದು ಮಾಡಿದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 182 ಮೀಟರ್‌ ಎತ್ತರದ ‘ಏಕತಾ ಪ್ರತಿಮೆ’ಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.

Advertisement

ನರ್ಮದಾ ಜಿಲ್ಲೆಯ ಕೇವಡಿಯಾದಲ್ಲಿ ಬುಧವಾರ ಬೆಳಗ್ಗೆ ನಡೆದ ಪಟೇಲ್‌ ಅವರ 143ನೇ ಜನ್ಮದಿನಾಚರಣೆ ಹಾಗೂ ‘ಸಾಧು ಬೆಟ್ಟ’ದಲ್ಲಿ ನಿರ್ಮಾಣಗೊಂಡಿರುವ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಈ ಪ್ರತಿಮೆ ನಿರ್ಮಾಣಕ್ಕೆ ಅಪಸ್ವರ ಎತ್ತಿದವರಿಗೂ ಅಲ್ಲೇ ಸೂಕ್ತ ಉತ್ತರ ಕೊಟ್ಟ ಮೋದಿ ಅವರು, ದೇಶ ಒಂದು ಮಾಡಿದ ಉಕ್ಕಿನ ಮನುಷ್ಯನಿಗೆ ಈಗ ನಿಜವಾದ ಗೌರವ ದಕ್ಕಿದೆ ಎಂದರು. ಮೋದಿ ಅವರು 2013ರಲ್ಲಿ ಗುಜರಾತ್‌ ಸಿಎಂ ಆಗಿದ್ದ ವೇಳೆ ಈ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.


‘ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಯಾಗಿರುವ ಇದು, ಇಡೀ ಪ್ರಪಂಚಕ್ಕೆ, ನಮ್ಮ ಮುಂದಿನ ಪೀಳಿಗೆಗೆ ಪಟೇಲ್‌ ಅವರ ಧೈರ್ಯದ ಬಗ್ಗೆ ಹೇಳುತ್ತದೆ’ ಎಂದರು. ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರಕಾರವು ರಾಷ್ಟ್ರೀಯ ನಾಯಕರ ಬಗ್ಗೆ ಹಲವಾರು ಸ್ಮಾರಕಗಳನ್ನು ನಿರ್ಮಿಸಿದೆ. ಪಟೇಲ್‌ ಅವರ ದೊಡ್ಡ ಪ್ರತಿಮೆ, ದಿಲ್ಲಿಯಲ್ಲಿ ಸರ್ದಾರ್‌ ಅವರ ವಸ್ತು ಸಂಗ್ರಹಾಲಯ, ಭೀಮ್‌ರಾವ್‌ ಅಂಬೇಡ್ಕರ್‌ ಅವರ ಪಂಚತೀರ್ಥ ಮತ್ತು ಗುಜರಾತ್‌ ನೆಲದ ಮಣ್ಣಿನ ಮಗ ಶ್ಯಾಮ್‌ಜಿ ಕೃಷ್ಣ ವರ್ಮಾ ಅವರ ಸ್ಮಾರಕವನ್ನೂ ನಿರ್ಮಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಮುಂಬಯಿಯಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಮತ್ತು ನೇತಾಜಿ ಅವರ ಸ್ಮಾರಕವೂ ತಲೆ ಎತ್ತಲಿದೆ ಎಂದರು.


ಶಿವಾಜಿ ಪ್ರತಿಮೆ ಇದಕ್ಕಿಂತಲೂ ಎತ್ತರ

ಏಕತಾ ಪ್ರತಿಮೆ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಎನಿಸಿಕೊಂಡಿದೆ. ಆದರೆ ಮುಂಬಯಿಯಲ್ಲಿ ನಿರ್ಮಾಣ ಮಾಡಲು ಯೋಜಿಸಿರುವ ಛತ್ರಪತಿ ಶಿವಾಜಿ ಪ್ರತಿಮೆ ಇದಕ್ಕಿಂತಲೂ ಹೆಚ್ಚು ಎತ್ತರದಲ್ಲಿ ಇರಲಿದೆ. ಪಟೇಲ್‌ ಪ್ರತಿಮೆಯ ಎತ್ತರ 182 ಮೀಟರ್‌(597 ಅಡಿ)ಗಳಾಗಿದ್ದರೆ, ಛತ್ರಪತಿ ಶಿವಾಜಿ ಅವರದ್ದು 210 ಮೀಟರ್‌(688 ಅಡಿ) ಇರ ಲಿದೆ. ಈ ಮೂಲಕ ಜಗತ್ತಿನ ಎರಡು ಎತ್ತರದ ಪ್ರತಿಮೆಗಳು ಭಾರತದಲ್ಲೇ ನಿರ್ಮಾಣವಾದಂತಾಗಲಿವೆ.

ವಿಪಕ್ಷಗಳಿಗೆ ತರಾಟೆ
ಸಮಾರಂಭದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೂ ಎದಿರೇಟು ಕೊಟ್ಟ ಅವರು, ‘ಅಂದು ಪಟೇಲ್‌ ಅವರು ಇಡೀ ದೇಶವನ್ನು ಒಂದು ಮಾಡದಿದ್ದರೆ, ಇಂದು ‘ಶಿವಭಕ್ತ’ನೆನಿಸಿಕೊಂಡವರು ಸೋಮನಾಥಪುರಕ್ಕೆ ಆರಾಮವಾಗಿ ತೆರಳಿ ಸೋಮನಾಥನ ದರ್ಶನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಗಿರ್‌ ಅರಣ್ಯದಲ್ಲಿನ ಸಿಂಹ, ಹೈದರಾಬಾದ್‌ನ ಚಾರ್‌ಮಿನಾರ್‌ ನೋಡಲೂ ವೀಸಾ ಪಡೆಯಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು’ ಎಂದರು.

Advertisement

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರಂಥ ರಾಷ್ಟ್ರೀಯ ನಾಯಕರನ್ನು ನೆನೆದರೆ ನಮ್ಮ ಬಗ್ಗೆಯೇ ಟೀಕೆ ಮಾಡುತ್ತಾರೆ. ನಾವು ಯಾವುದೋ ಒಂದು ಅಪರಾಧ ಮಾಡಿದಂತೆ ವರ್ತಿಸುತ್ತಿದ್ದಾರೆ ಎಂದೂ ಮೋದಿ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next