Advertisement

ಸರಸ + ವಿರಸ = ಪಾದರಸ

11:20 AM Aug 12, 2018 | |

ಪರಮ ನೀಚ ಅವನು. ಯಾರಿಗೋ ಕೆಲಸ ಕೊಡಿಸುತ್ತೀನಿ ಅಂತ ಅವರಿಂದ ದುಡ್ಡು ಪಡೆದು ಕುಡಿದು ಮಜಾ ಮಾಡುತ್ತಾನೆ. ತನ್ನ ಬೆಸ್ಟ್‌ ಫ್ರೆಂಡ್‌ ಒಬ್ಬ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದಾನೆ ಎಂದು ಗೊತ್ತಿದ್ದರೂ, ಆ ಹುಡುಗಿಯನ್ನೇ ಪಟಾಯಿಸಿ ತನ್ನ ಸ್ನೇಹಿತನಿಗೇ ಮೋಸ ಮಾಡುತ್ತಾನೆ. ಒಂದು ಲಕ್ಷ ದುಡ್ಡು ಸಿಗುತ್ತದೆ ಎಂಬ ಕಾರಣಕ್ಕೆ ತನ್ನ ಸ್ನೇಹಿತನ ಮಗನನ್ನೇ ಮಾರಾಟ ಮಾಡಿಬಿಡುತ್ತಾನೆ. ಅವನ ಈ ನೀಚ ಬುದ್ಧಿಯ ಬಗ್ಗೆ ಗೊತ್ತಾಗಿ ಅವನನ್ನು ಇಷ್ಟಪಟ್ಟ ಹುಡುಗಿ ದೂರವಾಗುತ್ತಾಳೆ.

Advertisement

ಪೊಲೀಸ್‌ ಅಧಿಕಾರಿಯೊಬ್ಬ ಅವನನ್ನು ಹೊಡೆದು ಸಾಯಿಸಬೇಕು ಎಂದು ಸಿಟ್ಟಾಗುತ್ತಾನೆ. ಅಷ್ಟೇ ಅಲ್ಲ, ಮಗು ಕಳೆದುಕೊಂಡಿರುವ ಅವನ ಸ್ನೇಹಿತ ಪೊಲೀಸರಿಗೇ ದೂರು ಕೊಡುವುದಕ್ಕೆ ಮುಂದಾಗುತ್ತಾನೆ. ಇಷ್ಟೆಲ್ಲಾ ಅವನು ಮಾಡುವುದಾದರೂ ಯಾಕೆ? ಈ ಪ್ರಶ್ನೆಗಳಿಗೆ ಉತ್ತರ “ಪಾದರಸ’ದಲ್ಲಿದೆ. “ಪಾದರಸ” ಚಿತ್ರವು ಪಾದರಸದಂತಹ ವ್ಯಕ್ತಿತ್ವದ ಪಾದರಸ ಎಂಬ ಯುವಕನ ಸಿನಿಮಾ. ಕುಡಿತ ಬಿಟ್ಟರೆ, ಆತ ಒಂದು ನಿಮಿಷ ಕುಳಿತಲ್ಲ ಕೂರುವುದಿಲ್ಲ, ನಿಂತಲ್ಲಿ ನಿಲ್ಲುವುದಿಲ್ಲ.

ಅವನ ಮನಸ್ಸು, ಯೋಚನೆ ಇನ್ನೂ ಅತ್ತತ್ತ. ಇಂಥವನೊಬ್ಬ ಮಾಡಬಾರದ್ದನ್ನು ಮಾಡಿ, ಸಮಾಜದ ದೃಷ್ಟಿಯಲ್ಲಿ, ಪ್ರೇಕ್ಷಕನ ದೃಷ್ಟಿಯಲ್ಲಿ ಪರಮನೀಚನೆನೆಸಿಕೊಳ್ಳುತ್ತಾನೆ. ಆದರೆ, ಅವನು ನಿಜಕ್ಕೂ ಇರುವುದೇ ಹಾಗಾ? ಅಥವಾ ಯಾವುದಾದರೂ ಕಾರಣಕ್ಕೆ ಹಾಗೆಲ್ಲಾ ಆಡುತ್ತಿರುತ್ತಾನಾ? ಹಾಗೆಲ್ಲಾ ಮಾಡಿದರೂ ಕಾರಣವೇನು? ಈ ಪ್ರಶ್ನೆಗಳನ್ನು ಕೇಳುವುದೂ ಸರಿಯಲ್ಲ, ಉತ್ತರ ಹೇಳುವುದೂ ಸರಿಯಲ್ಲ.

ಬಹುಶಃ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌, ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಿಟ್ಟರೆ, ಚಿತ್ರದಲ್ಲಿ ವಿಶೇಷವೇನಿಲ್ಲ. ಇದುವರೆಗೂ ಮಾಡದಂತಹ ಒಂದು ವಿಭಿನ್ನ ಪಾತ್ರದಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ. ಅದು ಅವರಿಗೆ ಸ್ವಲ್ಪ ಹೆಚ್ಚಾದಂತೆ ಕಾಣುತ್ತದೆ. ಆದರೂ ವಿಜಯ್‌ ತಮ್ಮ ಶಕ್ತಿಮೀರಿ, ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕೆ ಒದ್ದಾಡಿದ್ದಾರೆ. ಇದೊಂದು ಅಂಶ ಬಿಟ್ಟರೆ, ಚಿತ್ರದಲ್ಲಿ ಹೊಸತನವಾಗಲೀ, ವಿಶೇಷತೆಗಳಾಗಲೀ ಕಡಿಮೆಯೇ.

ಅದರ ಜೊತೆಗೆ ವಿಪರೀತ ಫ್ಲಾಶ್‌ಬ್ಯಾಕ್‌ಗಳು, ಬೋರ್‌ ಹೊಡೆಸುವ ದೃಶ್ಯಗಳು, ಅತಿರೇಕ ಎನಿಸುವ ಮಾತುಗಳು ಇವೆಲ್ಲವೂ ಪ್ರೇಕ್ಷಕರನ್ನು ಸಾಕಷ್ಟು ಕಾಡುತ್ತದೆ. ಅದರಲ್ಲೂ ಚಿತ್ರದಲ್ಲಿ ಒಂದು ಕ್ಷಣ ಮೌನವೆನ್ನುವುದಿಲ್ಲ. ಇಡೀ ಚಿತ್ರದಲ್ಲಿ ಎಲ್ಲಾ ಪಾತ್ರಗಳಿಂದ ಮಾತಾಡಿಸಿಯೇ ಆಡಿಸುತ್ತಾರೆ ನಿರ್ದೇಶಕರು. ಇದರಿಂದ ಸುಸ್ತಾಗುವುದು ಪಾತ್ರಧಾರಿಗಳಲ್ಲ, ಪ್ರೇಕ್ಷಕರು. ಇನ್ನು ಚಿತ್ರದಲ್ಲಿರುವ ಒಳ್ಳೆಯ ಅಂಶಗಳ ಬಗ್ಗೆ ಹೇಳುವುದಾದರೆ, ಎ.ಟಿ. ರವೀಶ್‌ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳು ಚೆನ್ನಾಗಿವೆ.

Advertisement

ಚಿತ್ರ: ಪಾದರಸ
ನಿರ್ದೇಶನ: ಹೃಷಿಕೇಶ್‌ ಜಂಬಗಿ
ನಿರ್ಮಾಣ: ಹಾರ್ಟ್‌ ಆ್ಯಂಡ್‌ ಸೋಲ್‌ ಮೀಡಿಯಾ ಸರ್ವೀಸಸ್‌
ತಾರಾಗಣ: ಸಂಚಾರಿ ವಿಜಯ್‌, ವೈಷ್ಣವಿ ಮೆನನ್‌, ನಿರಂಜನ್‌ ದೇಶಪಾಂಡೆ, ಗುರುದತ್‌, ಜೈಜಗದೀಶ್‌, ಶೋಭರಾಜ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next