ಕಲಬುರಗಿ: ಕೊರೊನಾ ಹಿನ್ನೆಲೆಯಲ್ಲಿ ಇಲ್ಲಿನ ಐತಿಹಾಸಿಕ, ಮಹಾದಾಸೋಹಿ ಶರಣಬಸವೇಶ್ವರರ 199ನೇ ಜಾತ್ರಾ ಮಹೋತ್ಸವದ ಉಚ್ಛಾಯ ಕಾರ್ಯಕ್ರಮ ಗುರುವಾರ ಸರಳ ಹಾಗೂ ಸಾಂಕೇತಿಕವಾಗಿ ಜರುಗಿತು.
ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಎಂಟನೇ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಸಾನ್ನಿಧ್ಯ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ರಾದ ಪೂಜ್ಯ ಮಾತೋಶ್ರೀ ಡಾ| ದಾಕ್ಷಾಯಿಣಿ ಅವ್ವ ಸಮ್ಮುಖದಲ್ಲಿ ಶರಣಬಸವೇಶ್ವರ 199ನೇ ಯಾತ್ರಾ ಮಹೋತ್ಸವ, ಉಚ್ಚಾಯಿ ಕಾರ್ಯಕ್ರಮ ಗುರುವಾರ ಮಧ್ಯಾಹ್ನ ನೆರವೇರಿತು.ಡಾ| ಶರಣಬಸವಪ್ಪ ಅಪ್ಪ ಅವರು ಉಚ್ಚಾಯಿಗೆ ಚಾಲನೆ ನೀಡಿದರು.
ರಥೋತ್ಸವ, ಉಚ್ಛಾಯಿಗೆ ಮನೆಯಲ್ಲಿದ್ದುಕೊಂಡೇ ಶರಣರ ಕೃಪೆಗೆ ಪಾತ್ರರಾಗಬೇಕೆಂದು ಡಾ| ಅಪ್ಪ ಕೋರಿದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರಲಿಲ್ಲ. ಹೀಗಾಗಿ ಕೆಲವೇ ಭಕ್ತರ ಉಪಸ್ಥಿತಿಯಲ್ಲಿ ಧಾರ್ಮಿಕ ಸಂಪ್ರದಾಯದಂತೆ ಉಚ್ಚಾಯಿ ನೆರವೇರಿತು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮುಂತಾದವರು ಪಾಲ್ಗೊಂಡಿದ್ದರು.
ಏಪ್ರಿಲ್ 2ರಂದು ನಡೆಯುವ ಶರಣಬಸವೇಶ್ವರ ರಥೋತ್ಸವದಂದು ಭಕ್ತರೆಲ್ಲರೂ ತಮ್ಮ ಮನೆಗಳಲ್ಲಿದ್ದುಕೊಂಡೆ ಶರಬಸವೇಶ್ವರರ ಕೃಪೆಗೆ ಪಾತ್ರರಾಗಬೇಕು. ಹೆಚ್ಚುತ್ತಿರುವ ಕೊರೊನಾ ತಡೆಗಟ್ಟಲು ಸರಕಾರ ಹಾಗೂ ಜಿಲ್ಲಾಡಳಿತ ಹೊರಡಿಸಿದ ಹೊಸ ಮಾರ್ಗಸೂಚಿ, ಸ್ಟ್ಯಾಂಡರ್ಡ್ ಆಫ್ ಆಪರೇಷನ್ ಪ್ರೊಸಿಜರ್ಸ್ (ಎಸ್‌ಒಪಿ) ಗಮನದಲ್ಲಿಟ್ಟುಕೊಂಡು ಜಾತ್ರಾ ಮಹೋತ್ಸವ ಮತ್ತು ಇತರ ಕಾರ್ಯಗಳಲ್ಲಿ ಭಕ್ತರು ಪಾಲ್ಗೊಳ್ಳುವುದನ್ನು ಮೊಟಕುಗೊಳಿಸಿದೆ.
ಡಾ| ಶರಣಬಸವಪ್ಪ ಅಪ್ಪ, ಪೀಠಾಧಿಪತಿ, ಶರಣಬಸವೇಶ್ವರ ಮಹಾ ದಾಸೋಹ ಸಂಸ್ಥಾನ