ಅಮ್ಮ ನಾನೂ ಚುಜೀದಾರ ಹಾಕ್ಕೊತೀನಿ ನಿನ್ ಥರ” ಎಂದು ಮುದ್ದು ಮುದ್ದಾಗಿ ಗುಂಡಮ್ಮ ಅವರಮ್ಮನಿಗೆ ಹೇಳುತಿದ್ದಳು. “”ಪುಟ್ಟ, ನೀನು ದೊಡ್ಡವಳಾದ ಮೇಲೆ ಚೂಡಿದಾರ ಹಾಕ್ಕೊಳವಂತೆ” ಅವರಮ್ಮ ಸಮಾಧಾನ ಹೇಳಲು ಪ್ರಯತ್ನಿಸಿದರು. “”ನಾನು… ಈಗ ಎಷ್ಟು ದೊಡ್ಡೊಳಾಗಿದೀನಿ ನೋಡು” ಎಂದು ತನ್ನ ಪುಟ್ಟ ಕೈ ಎತ್ತರಿಸಿ ತೋರಿಸಿದಳು. ನಾವು ಬಿದ್ದು ಬಿದ್ದು ನಗಲಿಕ್ಕೆ ಶುರು ಮಾಡಿದೆವು.
ಮರುದಿನ ಗುಂಡಮ್ಮನ ಅಜ್ಜಿ ತಾತ ಊರಿಂದ ಬಂದರು. ಅವರೊಡನೆ ಒಂದು ಪುಟ್ಟ ಚೂಡಿದಾರವನ್ನೂ ತಂದಿದ್ದರು. ಆ ಮುದ್ದುಮರಿಯ ಸಂತೋಷಕ್ಕೆ ಪಾರವೇ ಇಲ್ಲ! “ಚುಜೀದಾರ’ ಹಾಕಿಕೊಂಡು ಓಡಾಡಿದ್ದೇ ಓಡಾಡಿದ್ದು. ಅದಾವ ಗಳಿಗೆಯಲ್ಲಿ “ಚುಜೀದಾರ’ ಮನೆಗೆ ಬಂತೋ, ತೀರಿತು. ಅಂದಿನಿಂದ ಕುಂತಾಗ ನಿಂತಾಗ ಎಲ್ಲಿ ಹೋದರಲ್ಲಿ “ಚುಜೀದಾರ’ದ್ದೇ ಧ್ಯಾನ. ಬೆಳಿಗ್ಗೆ ಏಳುತ್ತಲೇ, “”ಅಮ್ಮ ಚುಜೀದಾರ ಕೊಡು ಹಾಕ್ಕೋತೀನಿ”, ಸ್ಕೂಲಿನಿಂದ ಬರುತ್ತಲೇ, “”ಅಜ್ಜಿ ಚುಜೀದಾರ ಎಲ್ಲಿ…” ಕೊನೆಗೆ “ಚುಜೀದಾರ’ ಒಗೆದು ಹಾಕಿದಾಗಲೂ, “”ಅಮ್ಮ, ಬೇಗ ಒಗೆದುಕೊಡು, ಇವತ್ತು ಒಂದು ದಿನ ಹಸೀದೆ ಹಾಕಿಕೊತೀನಿ ಪರ್ವಾಗಿಲ್ಲ” ಎನ್ನುವುದೆ!
ಇರುವ ಒಂದು “ಚುಜೀದಾರ’ವನ್ನೇ ಹಗಲು-ರಾತ್ರಿ ಎನ್ನದೇ ಹಾಕಿಕೊಂಡು ತಿರುಗುತ್ತಿತ್ತು ಆ ಕೂಸು. ಆದರೆ, ಆ “ಚುಜೀದಾರ’ದಿಂದ ಆದ ರಗಳೆ ಅಷ್ಟಿಷ್ಟಲ್ಲ ! ಅದನ್ನು ಒಗೆಯಲು ಹಾಕಿದಾಗಲೆಲ್ಲ ಒಂದೊಂದು ನೆಪ ಹೇಳಿ ಅವಳ ಮನ ಒಲಿಸಿ ಬೇರೆ ಬಟ್ಟೆ ತೊಡಿಸಬೇಕು. “”ಇವತ್ತು ಪಾತಮ್ಮ ನಿನ್ ಚುಜೀದಾರ, ನನ್ನ ಸೀರೆ, ಎಲ್ಲ ಹಂಗೇ ನೆನೆಸಿ ಬಿಟ್ಟು ಹೋಗಿದಾಳೆ. ಒಗೆದೇ ಇಲ್ಲ” ಎಂದು ಒಮ್ಮೆ ಹೇಳಿದರೆ ಇನ್ನೊಮ್ಮೆ, “”ಇಸಿŒ ಮಾಡೋನು ತಗೊಂಡು ಹೋಗಿದಾನೆ. ಇನ್ನು ತಂದೇ ಕೊಟ್ಟಿಲ್ಲ” ಎಂದಾಗ, “”ಹಂಗರೆ ಬೇಗ ಇಸ್ಕೊಂಡು ಬರೂಣು ಬಾ” ಎಂದು ನಮ್ಮ ಕೈ ಎಳಕೊಂಡು ಹೊರಟೇಬಿಟ್ಟಿದ್ದಳು!
ಅವಳು ಕೇಳಿದ ಕ್ಷಣಕ್ಕೆ “ಚುಜೀದಾರ’ ಇರಲಿಲ್ಲವೆಂದರೆ ಮನೆ ಹೆಂಚು ಹಾರಿ ಹೋಗೊ ಹಾಗೆ ಅಳೂದು. ದಿವಸಕ್ಕೆ ಒಮ್ಮೆಯಾದರೂ ಈ ವಿಷಯವಾಗಿ ಅಳೂದೇ ಮತ್ತು ಒಂದೆರಡು ಬಾರಿಯಾದರೂ ಅದರ ವಿಷಯವಾಗಿ ಚರ್ಚೆ ಇದ್ದದ್ದೇ. “ನೀನು ಚುಜೀದಾರ ಹಾಕ್ಕೊ. ನಾನು ಹಾಕ್ಕೋತೀನಿ. ಬಾಹುಬಲಿ ನೋಡಕ್ಕೆ ಹೋಗೂಣು’, “ನಾನು ಚುಜೀದಾರ ಹಾಕ್Rಂಡು ಸ್ಕೂಲಿಗೆ ಹೋಗ್ತಿàನಿ ನಾಳೆ’, “ಇವತ್ತು ಚುಜೀದಾರ ಹಾಕ್ಕೊಂಡು ಶ್ರೇಯಾ ಮನಿಗೆ ಆಡಕ್ಕೆ ಹೋಗಿದ್ದೆ ನಾನು’ ಇನ್ನು ಏನೇನೊ… ಮೂರು ವಾಕ್ಯದಲ್ಲಿ ಒಮ್ಮೆಯಾದ್ರೂ “ಚುಜೀದಾರ’ರದ ರೆಫರೆನ್ಸ್ ಇರೂದೇ!
ಕೊನೆಗೂ ಈ ಗುಂಡಮ್ಮನ “ಚುಜೀದಾರ’ದ ಕಾಟ ತಾಳಲಾರದೆ ಅವರಮ್ಮ ಅವಳಿಗೆ “ಚುಜೀದಾರ’ ಹೊಲಿಯಕ್ಕೆ ಹಾಕಿ ಬಂದರು. ಅಂದಿನಿಂದ ಅವಳ “ಚುಜೀದಾರ’ ಚರ್ಚೆಗಳಲ್ಲಿ ಹೊಲಿಯಕ್ಕೆ ಹಾಕಿಬಂದಿರೋದು ಒಂದು ಮುಖ್ಯ ವಿಷಯ. ಒಮ್ಮೊಮ್ಮೆ “”ಟೈಲರ್ ಆಂಟಿ ಹತ್ರ ಇಸ್ಕೊಂಡೂ ಬರೂಣು ನಡಿ” ಅಂತ ಇದ್ದಕ್ಕಿದ್ದಂತೆ ಹಟ ಶುರುಮಾಡಿಬಿಡುತ್ತಿದ್ದಳು.
ಒಂದು ದಿನ ಸಂಜೆ ಕಚೇರಿಯಿಂದ ಆಗತಾನೆ ಬಂದು ಕುರ್ಚಿಯ ಮೇಲೆ ಕುಳಿತಿದ್ದೆ. ಗುಂಡಮ್ಮ ಬಂದು ಬಾಗಿಲು ಜೋರಾಗಿ ತಟ್ಟಹತ್ತಿದಳು. ಬಾಗಿಲು ತೆರೆದು ನೋಡ್ತೀನಿ. ಗುಂಡಮ್ಮ ಹೊಸ “ಚುಜೀದಾರ’ ಹಾಕ್ಕೊಂಡು ನಿಂತುಬಿಟ್ಟಿದಾಳೆ!
ಮನೆಯವರೆಲ್ಲರೂ ಹುಸಿ ಆಶ್ಚರ್ಯ ತೋರುತ್ತ ಅವಳ ಹೊಸ “ಚುಜೀದಾರ’ವನ್ನು ಹೊಗಳುತ್ತ ಅವಳನ್ನು ಮುದ್ದುಮಾಡತೊಡಗಿದೆವು. ಎಲ್ಲರಿಗೂ ತನ್ನ ಹೊಸ “ಚುಜೀದಾರ’ ತೋರಿಸುತ್ತ, “”ನಾನು ಚುಜೀದಾರನ ಸ್ಕೂಲಿಗೆ ಹಾಕಿಕೊಂಡು ಹೋಗ್ತಿàನಿ. ಅಮ್ಮನ ಹತ್ರ ಎಷ್ಟೊಂದು ಚುಜೀದಾರ ಇದೆ ಆಫೀಸಿಗೆ ಹಾಕ್ಕೊಂಡು ಹೋಗಕ್ಕೆ. ನನ್ ಹತ್ರ ಬರೇ ಎರಡೇ ಎರಡು” ನಾನು ಅವಳ ಆ ಚುಜೀದಾರದ ಮೋಹಕ್ಕೆ ಬೆರಗಾಗಿ ಅವಳ ಮಾತಿಗೆ ತಲೆ ಆಡಿಸುತ್ತ ನಿಂತೆ.
– ಸೌಮ್ಯಾ ಹೊಸಮನಿ