Advertisement

ಸ್ವಚ್ಛ ಭಾರತದ ಸ್ವಪ್ನ ಸಾಕಾರಕ್ಕೆ ಸಪ್ತ ಸೂತ್ರಗಳು

06:29 PM Oct 03, 2021 | Team Udayavani |

ಸ್ವಚ್ಛ ಭಾರತ ಯೋಜನೆಯು ಆರಂಭವಾಗಿ ಆರೇಳು ವರ್ಷಗಳು ಕಳೆದರೂ ದೇಶವನ್ನು ನಾವು ನಿರೀಕ್ಷಿಸಿದಷ್ಟು ಸ್ವಚ್ಛ ಮಾಡುವುದು ಸಾಧ್ಯವಾಗಿಲ್ಲ. ಸರಕಾರವು ಈ ಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸು ವುದಕ್ಕಾಗಿ ಸ್ವಚ್ಛ ಭಾರತ ತೆರಿಗೆಯ ಸಂಗ್ರಹವನ್ನೂ ಆರಂಭಿಸಿತು. ಆದರೂ ದೇಶವು ಏಕೆ ಸ್ವಚ್ಛವಾಗಿಲ್ಲ? ಇದಕ್ಕೆ ಸರಕಾರದಿಂದಾದಿಯಾಗಿ ಸಾರ್ವಜನಿಕರೂ ಕೊಡುವ ಉತ್ತರಗಳೆಂದರೆ ಭಾರತ ವಿಶಾಲವಾದ ದೇಶ, ಬೃಹತ್‌ ಜನಸಂಖ್ಯೆಯನ್ನು ಹೊಂದಿರುವ ದೇಶ, ಇಲ್ಲಿ ಬಡತನ ಮತ್ತು ವಿದ್ಯೆಯ ಕೊರತೆ ಇದೆ. ಇಲ್ಲಿನ ಜನರನ್ನು ಬದಲಾಯಿಸುವುದು ಕಷ್ಟ ಇತ್ಯಾದಿ. ಇವುಗಳೆಲ್ಲ ಕೆಲಸ ಮಾಡಲು ಮನಸ್ಸಿಲ್ಲದವರು ಮತ್ತು ಸ್ವಚ್ಛತೆಗೆ ಪ್ರಾಮುಖ್ಯಕೊಡಲು ಇಷ್ಟವಿಲ್ಲದ ಜನರಾಡುವ ಮಾತುಗಳೆಂದರೆ ಅತಿಶಯೋಕ್ತಿಯಾಗಲಾರದು.

Advertisement

ಸರಕಾರ ಮತ್ತು ಜನರು ಆಡಿಕೊಂಡಿರುವ ವಿಷಯ ಗಳಾದ ದೇಶದ ವಿಸ್ತೀರ್ಣ, ಜನಸಂಖ್ಯೆ ಮುಂತಾದವು ನಿಜಕ್ಕಾದರೆ ದೇಶದ ದೌರ್ಬಲ್ಯ ಗಳಾಗಿರದೆ ಶಕ್ತಿಯಾಗಿ ರಬೇಕಿತ್ತು. ನಮಗಿಂತಲೂ ವಿಶಾಲವಾದ ದೇಶಗಳು ಎಷ್ಟೊಂದು ಸ್ವಚ್ಛವಾಗಿವೆಯಲ್ಲವೇ? ಮತ್ತೆ ನಮಗೇಕೆ ಸಾಧ್ಯವಿಲ್ಲ? ನಮ್ಮ ಜನಸಂಖ್ಯೆಯೂ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ವರದಾನವಾಗ ಬಲ್ಲುದು. ಭಾರತವನ್ನು ಸ್ವಚ್ಛಗೊಳಿಸಲು ವಿದ್ಯಾವಂತರೇ ಆಗಬೇಕೆಂದಿಲ್ಲ ಇದು ಯಾರಿಂದಲೂ ಸಾಧ್ಯ. ಇಲ್ಲಿನ ಜನರನ್ನು ಬದಲಾಯಿಸುವುದು ಕಷ್ಟವೆಂಬ ಮಾತು ಶುದ್ಧ ಸುಳ್ಳು. ನಮ್ಮ ರಾಜಾರಾಣಿಗಳನ್ನು ಬದಲಾ ಯಿಸಿದರೆ ಜನರ ಮನೋಸ್ಥಿತಿಯನ್ನು ಬದಲಾಯಿಸ ಬಹುದೇನೋ. ಇಂತಹ ಕೆಲಸ ವಾಗಬೇಕಾದರೆ ಪ್ರಧಾನ ಮಂತ್ರಿಯವರಿಂದ ಆರಂಭಗೊಂಡು ಗ್ರಾಮ ಪಂಚಾಯತ್‌ ಸದಸ್ಯರವರೆಗೆ ಎಲ್ಲರಲ್ಲೂ ಆ ತುಡಿತ, ಮಿಡಿತವಿರಬೇಕು. ಅದಕ್ಕಾಗಿ ಮೀಸಲಿಟ್ಟ ಹಣವು ಕೋಶದಿಂದ ಸರಾಗವಾಗಿ ಸರಿಯಾದ ದಾರಿಯಲ್ಲಿ ಹರಿದು ಸಂಪೂರ್ಣವಾಗಿ ವಿನಿಯೋಗವಾಗುವವರೆಗೆ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯತ್‌, ನಗರಸಭೆ/ಪುರಸಭೆಗಳು ಚುರುಕಾಗಿ ಕೆಲಸ ಮಾಡಬೇಕು. ತಳಮಟ್ಟದಲ್ಲಿ ಈ ಕೆಲವೊಂದು ವಿಷಯಗಳಿಗೆ ಒತ್ತು ಕೊಟ್ಟರೆ ಐದು ವರ್ಷಗಳ ಒಳಗೆ ಭಾರತವು ಸ್ವಚ್ಛವಾಗುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ:ಮುರಿದು ಬಿದ್ದ ಪುತ್ರನ ದಾಂಪತ್ಯ | ಭಾವುಕರಾದ ನಟ ನಾಗಾರ್ಜುನ್

1. ಜನಜಾಗೃತಿ ಸಭೆಗಳು
ಜನಪ್ರತಿನಿಧಿಗಳು ಆಗಾಗ ಕಸ ನಿರ್ವಹಣೆಗಾಗಿಯೇ ಮೀಸಲಿಟ್ಟ ಜನಜಾಗೃತಿ ಸಭೆಗಳನ್ನು ಮಾಡಿ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು. ಈ ಕಾರ್ಯ ಕ್ರಮವು ವಿವಿಧತೆಯಿಂದ ಕೂಡಿದ್ದರೆ ಪರಿಣಾಮಕಾರಿ ಯಾಗಿರಬಲ್ಲವು.

2. ಮನೆಮನೆಗೆ ಭೇಟಿ
ಜನಪ್ರತಿನಿಧಿಗಳು ಪ್ರತೀ ಮನೆಗೆ ಹೋಗಿ ಅಲ್ಲಿ ಉತ್ಪಾದನೆಯಾಗುವ ಕಸದ ಬಗ್ಗೆ, ಅದನ್ನು ಜನರು ಏನು ಮಾಡುತ್ತಾರೆ, ಹೇಗೆ ನಿರ್ವಹಣೆ ಮಾಡುತ್ತಾರೆ ಎನ್ನುವುದನ್ನು ಕೇಳಿ ತಿಳಿಯಬೇಕು. ಕಸದ ವಿಂಗಡಣೆ, ಅದರ ನಿರ್ವಹಣೆಯ ಬಗ್ಗೆ ಜನರಿಗೆ ತಿಳಿಹೇಳಬೇಕು.

Advertisement

3. ಕಂಡಕಂಡಲ್ಲಿ ಕಸದ ಬುಟ್ಟಿಗಳು/
ತೊಟ್ಟಿಗಳು/ಕಸದ ಮನೆಗಳು
ಕಸವಿರದ ಮನೆಯುಂಟೇ? ಅರಮನೆಯಿಂದ ಗುಡಿಸಲವರೆಗೆ ಪ್ರತೀ ದಿನ ಸ್ವಲ್ಪವಾದರೂ ತ್ಯಾಜ್ಯದ ಉತ್ಪಾದನೆಯಾಗುತ್ತದೆ. ಅರಮನೆಯಲ್ಲಿ ಅದರ ಸೂಕ್ತ ನಿರ್ವಹಣೆಯಾದರೆ ಗುಡಿಸಲಿನಲ್ಲಿ ಅದರ ವ್ಯವಸ್ಥೆ ಇರುವುದಿಲ್ಲ. ಒಂದೋ ಮನೆಯ ಅಕ್ಕಪಕ್ಕ ಯಾರೂ ನೋಡದ ಜಾಗದಲ್ಲಿ ಎಸೆಯಬೇಕಾದ ಅನಿವಾರ್ಯ ಇರುತ್ತದೆ. ಹೀಗಾಗಿ ಅಲ್ಲಲ್ಲಿ, ಸಾರ್ವ ಜನಿಕ ಜಾಗಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತದೆ. ಎಷ್ಟೇ ಅವಿದ್ಯಾವಂತನಾದರೂ ತನ್ನ ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳುವುದನ್ನು ಕಲಿತಿರುತ್ತಾನೆ. ಮನೆಯ ಕಸವನ್ನು ಇತರರ ಜಾಗ, ಸರಕಾರಿ ಜಾಗ ಅಥವಾ ನದಿ ತೋಡುಗಳಲ್ಲಿ ಎಸೆಯುತ್ತಾನೆ. ಇದಕ್ಕಾಗಿ ಆಡಳಿತವು ಮಾಡಬೇಕಾದ ಉಪಾಯವಿಷ್ಟೇ. ರಸ್ತೆ ರಸ್ತೆಗಳಲ್ಲಿ ಕಸದ ಬುಟ್ಟಿ ಅಥವಾ ಕಸದ ತೊಟ್ಟಿಗಳನ್ನು ಅಳವಡಿಸಬೇಕು. ಹೆಚ್ಚಾಗಿ ಕಸ ಸಂಗ್ರಹವಾಗುವ ಸಾರ್ವಜನಿಕ ಜಾಗಗಳಲ್ಲಿ ಕಸದ ಮನೆಗಳನ್ನು ರಚಿಸಿ ಕಿಂಡಿಯಿಂದ ಕಸವನ್ನು ಈ ಮನೆಯೊಳಗೇ ಎಸೆಯುವಂಥಹ ಅವಕಾಶ ಕಲ್ಪಿಸ ಬೇಕು. ಇದರಿಂದ ನಾಯಿ, ಹಂದಿ, ದನಗಳು ಕಸವನ್ನು ರಸ್ತೆಗೆ ಹರಡದಂತೆ ತಡೆಯಬಹುದು.

ಯಾರು, ಎಲ್ಲಿ ಕಸ ಎಸೆದರೂ ಅದು ಯಾವುದಾದ ರೊಂದು ಕಸದ ಬುಟ್ಟಿಗೆ ಬೀಳುವಂತಿರಬೇಕು. ಕಸ ಹಾಕಬೇಕಾದ ಜಾಗವನ್ನೇ ತೋರಿಸದವರು (ಆಡಳಿತ ಗಾರರು) ಎಲ್ಲೆಂದರಲ್ಲಿ ಕಸ ಎಸೆಯುವವನನ್ನು ದೂರ ಬಹುದೇ? ಇದು ತಪ್ಪಲ್ಲವೇ?

4. ತ್ಯಾಜ್ಯ ಸಂಗ್ರಹಾಗಾರಗಳು
(ಡಂಪಿಂಗ್‌ ಯಾರ್ಡ್‌)
ಊರಿಗೊಂದಾದರೂ ಸಾರ್ವಜನಿಕ ಕಸ ಸಂಗ್ರ ಹಾಗಾರವನ್ನು ರಚಿಸಬೇಕು. ಈ ಸಂಗ್ರಹಾಗಾರದ ಸುತ್ತ ಗೋಡೆ ಕಟ್ಟಿ ಪ್ರಾಣಿಗಳು ಬೇಕಾಬಿಟ್ಟಿ ಒಳಹೊರಗೆ ಹೋಗದಂತೆ ನೋಡಿಕೊಳ್ಳಬೇಕು. ಡಂಪಿಂಗ್‌ ಯಾರ್ಡನ್ನು ನೋಡಿಕೊಳ್ಳಲು, ತ್ಯಾಜ್ಯಗಳನ್ನು ವಿಂಗಡಿ ಸುವ ಸಿಬಂದಿ ನಿಯೋಜನೆಯಾಗಬೇಕು. ಪಂಚಾ ಯತ್‌, ನಗರಸಭೆಗಳ ಅಧಿಕಾರಿಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಹೇಳುವ ಮಾತೆಂದರೆ ತ್ಯಾಜ್ಯ ಸಂಗ್ರ ಹಾಗಾರ ಮಾಡಲು ಜಾಗವಿಲ್ಲ. ಇದಕ್ಕೆ ಯಾರು ಹೊಣೆ? ಇದ್ದ ಸರಕಾರಿ ಜಾಗಗಳನ್ನು ಜನಪ್ರಿಯತೆ ಗಳಿಸುವುದಕ್ಕಾಗಿ ಅಕ್ರಮ ಸಕ್ರಮದಡಿ ಅತಿಕ್ರಮಣ ಮಾಡಿದವರಿಗೆ ಕೊಟ್ಟು ಅಥವಾ ನಿವೇಶನವಿಲ್ಲದವರಿಗೆ ನಿವೇಶನ ಯೋಜನೆಯ ಅಡಿಯಲ್ಲಿ ಕೊಟ್ಟು ಕೊಟ್ಟು ಬಲಿ ಚಕ್ರವರ್ತಿಯ ತಲೆಯಂತಾಗಿದೆ ಸರಕಾರದ ಪರಿಸ್ಥಿತಿ. ಒಳ್ಳೆಯ ಮೊತ್ತವನ್ನು ಕೊಟ್ಟು ಆಯಕಟ್ಟಿನ ಪ್ರದೇಶಗಳಲ್ಲಿ ಸ್ವಲ್ಪ ಜಾಗವನ್ನು ಖರೀದಿಸಿ ಈ ಯೋಜನೆಯನ್ನು ಸಾಕಾರಗೊಳಿಸಬಹುದು.

5. ವಿಶಿಷ್ಟ ವಿನ್ಯಾಸದ ಸೇತುವೆಗಳು
ನದಿ, ತೋಡುಗಳಲ್ಲಿ ಕಸ ಎಸೆಯುವುದು ಜನರ ಪಾಲಿಗೆ ಅತೀ ಸುಲಭದ ಕೆಲಸ. ರಸ್ತೆಯಲ್ಲಿ ಹೋಗುತ್ತಲೇ ಯಾರಿಗೂ ತಿಳಿಯದಂತೆ ನಿಮಿಷಾರ್ಧದಲ್ಲಿ ಈ ಕೆಲಸ ಮಾಡಬಹುದು. ಇದನ್ನು ತಪ್ಪಿಸಲು ಸುಲಭ ಉಪಾಯವೆಂದರೆ ಸೇತುವೆ ವಿನ್ಯಾಸಗೊಳಿಸುವಾಗ ಕಸ ಎಸೆಯಲಾಗದಂತೆ ಸೇತುವೆಯನ್ನು ವಿನ್ಯಾಸಗೊಳಿಸುವುದು ಅಥವಾ ಸೇತುವೆಯುದ್ದಕ್ಕೂ ಎಸೆಯಲ್ಪಟ್ಟ ಕಸ ಸಂಗ್ರಹವಾಗಲು ಕಸ ಸಂಗ್ರಾಹಕಗಳನ್ನುಅಳವಡಿಸುವುದು ಅಥವಾ ಸಿಸಿಟಿವಿ ಕೆಮರಾಗಳನ್ನು ಅಳವಡಿಸುವುದು.

6. ಕಸ ಸಂಗ್ರಾಹಕ ವಾಹನಗಳು
ಪ್ರತೀ ಪಂಚಾಯತ್‌/ನಗರಸಭೆಗಳು ಒಂದೆರಡು ದೊಡ್ಡ ಕಸ ಸಂಗ್ರಾಹಕ ವಾಹನಗಳನ್ನು ಹೊಂದಿದ್ದು ಪ್ರತೀ ದಿನ ಅಥವಾ ಕನಿಷ್ಠ ವಾರಕ್ಕೊಮ್ಮೆಯಾದರೂ ಕಸವನ್ನು ಕಸದ ತೊಟ್ಟಿಗಳಿಂದ ಅಥವಾ ಮನೆ ಮನೆಗಳಿಂದ ಸಂಗ್ರಹಿಸಿ ಅದನ್ನು ನಿರ್ವಹಣ ಕೇಂದ್ರಕ್ಕೆ ತಲುಪಿಸಬೇಕು. ಈ ಉದ್ದೇಶಕ್ಕಾಗಿಯೇ ಪ್ರತ್ಯೇಕ ಸಿಬಂದಿಯ ನೇಮಕವಾಗಬೇಕು.

7. ದಂಡ/ಶಿಕ್ಷೆ
ಇಷ್ಟೆಲ್ಲ ವ್ಯವಸ್ಥೆಗಳನ್ನು ಕಲ್ಪಿಸಿದ ಅನಂತರವೂ ಜನರು ಅನಾಗರಿಕತೆ ಪ್ರದರ್ಶಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಅನ್ಯರ ಸ್ಥಳದಲ್ಲಿ ಕಸ ಎಸೆಯುವುದು ಕಂಡುಬಂದರೆ ಮುಲಾಜಿಲ್ಲದೆ ಮತ್ತೆ ಮರೆಯಲಾರದಷ್ಟು ದೊಡ್ಡ ಮೊತ್ತವನ್ನು ದಂಡವಾಗಿ ವಸೂಲಿ ಮಾಡಬೇಕು ಅಥವಾ ಆರು ತಿಂಗಳು ಜೈಲುವಾಸದ ಶಿಕ್ಷೆ ವಿಧಿಸಬೇಕು.

ಆಡಳಿತ ಯಂತ್ರವು ಈ ಸಪ್ತಸೂತ್ರಗಳನ್ನು ಅಳವಡಿಸಲು ಸಿದ್ಧವಿದ್ದರೆ ಅದರಿಂದ ಭಾರತವು ಸ್ವತ್ಛವಾಗುವುದಷ್ಟೇ ಅಲ್ಲ ಅನೇಕ ಇತರ ಲಾಭಗಳೂ ಇವೆ. ಇದರಿಂದಾಗಿ ಅನೇಕ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಕಸದಿಂದ ರಸ ಯೋಜನೆಯಡಿ ಕಸದಿಂದ ಉತ್ತಮ ಗುಣಮಟ್ಟದ ಮರುಬಳಕೆಯ ಪ್ಲಾಸ್ಟಿಕ್‌, ಸಿಮೆಂಟ್‌, ಕಾಂಪೋಸ್ಟ್‌ ಗೊಬ್ಬರ ಇತ್ಯಾದಿಗಳನ್ನು ತಯಾರಿಸಬಹುದು. ಸ್ವತ್ಛವಾದ ದೇಶವನ್ನು ಅನ್ಯ ದೇಶಗಳ ಪ್ರವಾಸಿಗರೂ ಇಷ್ಟಪಡುವುದರಿಂದ ಭಾರತವು ಪ್ರವಾಸಿಗರ ನೆಚ್ಚಿನ ತಾಣವಾಗಿ ವಿದೇಶೀ ವಿನಿಮಯ ಉತ್ತಮಗೊಳ್ಳುತ್ತದೆ.

– ಡಾ| ಸತೀಶ ನಾಯಕ್‌, ಆಲಂಬಿ

Advertisement

Udayavani is now on Telegram. Click here to join our channel and stay updated with the latest news.

Next