Advertisement

ಜಿಲ್ಲೆಯ ಆಯ್ದ ದೇವಸ್ಥಾನಗಳಲ್ಲಿ ಸಪ್ತಪದಿ

11:58 AM Feb 26, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಎ ಹಾಗೂ ಬಿ ದರ್ಜೆಯ ದೇವಸ್ಥಾನಗಳು ಇಲ್ಲದಿರುವ ಕಾರಣ ಆಯ್ದ ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗುವುದು ಎಂದು ಮುಜರಾಯಿ ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಕುರಿತು ಸಭೆ ಕೈಗೊಂಡು ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಆದಾಯ ಹೊಂದಿರದ ಸಿ ದರ್ಜೆಯ 930 ದೇವಸ್ಥಾನಗಳಿವೆ. ಇವುಗಳಲ್ಲಿ ವಿಧಾನ ಸಭಾ ಕ್ಷೇತ್ರವಾರು ಪ್ರಮುಖ ದೇವಸ್ಥಾನಗಳನ್ನು ಆಯ್ದು ಸಪ್ತಪದಿ ಸಾಮೂಹಿಕ ವಿವಾಹವನ್ನು ಆಯೋಜಿಸಿ, ಇಲಾಖೆಯಿಂದ ನೇರವಾಗಿ ಯೋಜನೆಗೆ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಆರ್ಥಿಕ ಸೂಚ್ಯಂಕ ಕಡಿಮೆ ಇರುವ ಜಿಲ್ಲೆಗಳಲ್ಲಿ ಜನರು ಸಾಮೂಹಿಕ ವಿವಾಹದಲ್ಲಿ ಮದುವೆ ಆಗಲು ಇಚ್ಛಿಸುತ್ತಾರೆ. ಸರಳ ಹಾಗೂ ಆದರ್ಶ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಸಪ್ತಪದಿ ಯೋಜನೆಯನ್ನು ಜಾರಿಗೊಳಿಸಿದೆ. ಪ್ರತಿ ಜೋಡಿಗೆ ಇಲಾಖೆಯಿಂದ 55 ಸಾವಿರ ಹಣ ಮೀಸಲಿಡಲಾಗಿದೆ. ಇದರಲ್ಲಿ 8 ಗ್ರಾಂ ಚಿನ್ನದ ತಾಳಿ, 10 ಸಾವಿರ ವಧುವಿನ ಧಾರೆ ಸೀರೆಗೆ, 5 ಸಾವಿರ ವರನ ಬಟ್ಟೆ, ಶಲ್ಯ ಹಾಗೂ ಪಂಜೆಗೆ ನೀಡಲಾಗುತ್ತಿದೆ. ಇದರ ಜೊತೆಗೆ 10 ಸಾವಿರ ಆದರ್ಶ ವಿವಾಹ ಬಾಂಡ್‌ ನೀಡಲಾಗುವುದು. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಸಮುದಾಯದವರಿಗೆ ಪ್ರೋತ್ಸಾಹ ಧನವನ್ನು ಸಹ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಸಪ್ತಪದಿ ವಿವಾಹದ ಮೇಲ್ವಿಚಾರಣೆಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ನೋಡಲ್‌ ಅಧಿಕಾರಿಗಳನ್ನು ನೇಮಿಸುವಂತೆ ಜಿಲ್ಲಾ ಧಿಕಾರಿಗಳಿಗೆ ಸೂಚನೆ ನೀಡಿದರು. 7ಕ್ಕೆ ವಿಚಾರ ಸಂಕಿರಣ: ಜಿಲ್ಲೆಯಲ್ಲಿ ಯೋಜನೆಯ ಕುರಿತು ವ್ಯಾಪಕ ಪ್ರಚಾರ ನೀಡುವ ಸಲುವಾಗಿ ಮಾ. 7ರಂದು ವಿಚಾರ ಸಂಕಿರಣ ನಡೆಸಲಾಗುವುದು. ಇದರಲ್ಲಿ ಎಲ್ಲಾ ಶಾಸಕರು, ಜಿಪಂ-ತಾಪಂ ಹಾಗೂ ಗ್ರಾಪಂ ಸದಸ್ಯರನ್ನು ಆಹ್ವಾನಿಸಲಾಗುವುದು. ಸಪ್ತಪದಿ ರಥಕ್ಕೆ ಚಾಲನೆ ನೀಡಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಮಾಡಲಾಗುವುದು. ಈ ಯೋಜನೆ ಕುರಿತು ಕರಪತ್ರಗಳನ್ನು ಹಂಚುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ಬಸವರಾಜ ಹೊರಟ್ಟಿ, ಸಿ.ಎಂ. ನಿಂಬಣ್ಣವರ, ಎಸ್‌.ವಿ. ಸಂಕನೂರು, ಡಿಸಿ ದೀಪಾ ಚೋಳನ್‌, ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ, ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪಠಾಣ್‌, ಮುಜರಾಯಿ ಇಲಾಖೆ ಶಿರಸ್ತೇದಾರ ದಶರಥ ಜಾಧವ, ಎಲ್ಲಾ ತಾಲೂಕುಗಳ ತಹಶೀಲ್ದಾರರಿದ್ದರು.

Advertisement

ಏ. 26ರ ಅಕ್ಷಯ ತೃತೀಯ ದಿನದಂದು ಮೊದಲ ಹಂತದ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗುವುದು. ಇದಕ್ಕೆ ಅರ್ಜಿ ಸಲ್ಲಿಸಲು ಮಾ. 27 ಕಡೆಯ ದಿನವಾಗಿದೆ. ಮೇ 24ರಂದು ಎರಡನೇ ಹಂತದಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗುವುದು. ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next