ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿನೂತನ ಸಪ್ತಪದಿ ಯೋಜನೆಯ ಪ್ರಚಾರದ ಸಲುವಾಗಿ ತಾಲೂಕಿನ ಎಸ್.ಎಸ್ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸಮೀಪ ಸಪ್ತಪದಿ ರಥಕ್ಕೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಮದುವೆಯಾಗಲು, ಅಶಕ್ತರಾಗಿರುವ ಬಡವರು ಈ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಡೆಯಲಿರುವ ಸಪ್ತಪದಿ ಯೋಜನೆಯು ಬಡ ಹಾಗೂ ಮಧ್ಯಮ ವರ್ಗದವರಿಗೆ ವರದಾನ. ಈ ಯೋಜನೆಯನ್ನು ಎಲ್ಲಾ ಬಡವರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಮಾಹಿತಿ ನೀಡಿ, ಏಪ್ರಿಲ್ 26 ರಂದು ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ನಡೆಯಲಿದ್ದು, ವಧು-ವರರು ಹೆಸರು ನೋಂದಾಯಿಸಿಕೊಳ್ಳಲು ಮಾರ್ಚ್ 27 ಕೊನೆಯ ದಿನಾಂಕವಾಗಿದೆ. ಸರಳ ವಿವಾಹದಲ್ಲಿ ವರನಿಗೆ 5 ಸಾವಿರ ರೂಪಾಯಿ ,ವಧುವಿಗೆ 10 ಸಾವಿರ ರೂಪಾಯಿ ನೀಡಲಾಗುವುದು ಎಂದರು.
ಚಿನ್ನದ ತಾಳಿ,ಅಂದಾಜು 8 ಗ್ರಾಂ ತೂಕದ 2 ಚಿನ್ನದ ಗುಂಡು,ಒಟ್ಟು 55 ಸಾವಿರ ರೂ ವೆಚ್ಚವನ್ನು ದೇವಾಲಯದಿಂದ ಭರಿಸಲಾಗುವುದು ಸಾಮೂಹಿಕ ವಿವಾಗವಾಗುವ ವಧುವಿಗೆ ಕಂದಾಯ ಇಲಾಖೆ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ನೀಡುವ 10 ಸಾವಿರ ರೂ ನಿಶ್ಚಿತ ಠೇವಣಿ ಸೌಲಭ್ಯ ಒದಗಿಸಲಾಗುತ್ತೆ. ವಧು-ವರರು ಅವರ ಎಲ್ಲಾ ದಾಖಲೆಗಳನ್ನು ನಿಗದಿತ ದಿನಾಂಕದೊಳಗೆ ಘಾಟಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ವಿವಾಹದ ಸಮಯದಲ್ಲಿ ವಧು-ವರರು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ,ಹಾಗೂ ಇತರೆ ಆವಶ್ಯಕ ವ್ಯವಸ್ಥೆಗಳನ್ನು ದೇವಸ್ಥಾನದಿಂದ ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ಅಪ್ಪಯ್ಯಣ್ಣ ಮತ್ತಿತರರು ಹಾಜರಿದ್ದರು.