Advertisement
ನಿಮಗೆ ಗೊತ್ತಿರುವಂತೆ ಸೆ.01ರಂದು ತೆರೆಕಂಡ “ಸಪ್ತಸಾಗರ ದಾಚೆ ಎಲ್ಲೋ -ಸೈಡ್-ಎ’ ಚಿತ್ರ ಒಂದು ಎಮೋಶನಲ್ ಲವ್‌ಸ್ಟೋರಿಯಾಗಿ ಹಿಟ್‌ಲಿಸ್ಟ್ ಸೇರಿದೆ. ಸಿನಿಮಾ ನೋಡಿದವರಿಗೆ ಆ ಚಿತ್ರ ಒಂದು ಹೊಸ ಫೀಲ್ ಕಟ್ಟಿಕೊಟ್ಟಿದೆ. ಈಗ ಅದರ ಮುಂದುವರೆದ ಭಾಗವಾದ “ಸಪ್ತಸಾಗರದಾಚೆ ಎಲ್ಲೋ-ಸೈಡ್ ಬಿ’ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ಇಂದು ತೆರೆ ಕಾಣುತ್ತಿದೆ.
Related Articles
Advertisement
ಸೌತ್ ಇಂಡಿಯಾ ರಿಲೀಸ್
ಇನ್ನು, “ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಕನ್ನಡದಲ್ಲಿ ಹಿಟ್ ಆಗುತ್ತಿದ್ದಂತೆ ತೆಲುಗಿನಲ್ಲೂ ಆ ಚಿತ್ರಕ್ಕೆ ಬೇಡಿಕೆ ಬಂದಿದ್ದು, ಅದರಂತೆ ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾ ನೋಡಿದ ತೆಲುಗು ಮಂದಿ ಕೂಡಾ ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಇದರ ಜೊತೆಗೆ ರಕ್ಷಿತ್ ಶೆಟ್ಟಿ ಕೂಡಾ ತೆಲುಗಿನಲ್ಲಿ ತನ್ನ ನೆಲೆಯನ್ನು ಗಟ್ಟಿಮಾಡಿಕೊಳ್ಳುತ್ತಿದ್ದಾರೆ. ಈಗ ಸಪ್ತಸಾಗರದಾಚೆ ಎಲ್ಲೋ-2 ಚಿತ್ರ ಏಕಕಾಲಕ್ಕೆ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ತೆರೆಕಾಣುತ್ತಿದ್ದು, ಈಗಗಾಲೇ ಚಿತ್ರತಂಡ ಎಲ್ಲಾ ರಾಜ್ಯಗಳಿಗೂ ಹೋಗಿ ಸಿನಿಮಾ ಪ್ರಚಾರ ಮಾಡಿ ಬಂದಿದೆ.
ಕವಿತೆ ಇದ್ದಂತೆ…
“ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಒಂದು ಕವಿತೆ ಇದ್ದಂತೆ ಎನ್ನುವುದು ರಕ್ಷಿತ್ ಶೆಟ್ಟಿ ಮಾತು. “ಇದೊಂದು ಕವಿತೆಯಿದ್ದಂತೆ. ಕವಿತೆ ಯಾವಾಗಲೂ ವೈಭವೀಕರಿಸಿ ಹೇಳಲಾಗುತ್ತದೆ. ಆದರೆ ಜೀವನ ಹಾಗಲ್ಲ. ನಿಜ ಜೀವನದ ಅಂಶಗಳನ್ನು ತೆಗೆದುಕೊಂಡು ಅದನ್ನು ಕವಿತೆಯಾಗಿ ವೈಭವೀಕರಿಸಿ ಹೇಳಬಹುದಷ್ಟೇ. ಸಮುದ್ರದಂತಹ ಕನಸನ್ನು ನೀಲಿ ಬಣ್ಣದ ನೂಲಿನಲ್ಲಿ ಹೆಣೆಯುವ ಪ್ರಯತ್ನವನ್ನು ಮನು ಮತ್ತು ಪ್ರಿಯಾ ಪಾತ್ರದಲ್ಲಿ ಮೊದಲ ಭಾಗದಲ್ಲಿ ಹೇಮಂತ್ ಹೆಣೆದಿದ್ದಾರೆ. ಈಗ ಎರಡನೇ ಭಾಗ ಮತ್ತೂಂದು ಆಯಾಮ ಪಡೆದುಕೊಳ್ಳುತ್ತದೆ’ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.
ಟ್ರೇಲರ್ ಮತ್ತು ಕೆಂಪು ಬಣ್ಣ
“ಸಪ್ತಸಾಗರದಾಚೆ ಎಲ್ಲೋ-ಬಿ’ ಟ್ರೇಲರ್ ನೋಡಿದವರಿಗೆ “ಸೈಡ್-ಬಿ’ ಮತ್ತಷ್ಟು ಇಂಟೆನ್ಸ್ ಆಗಿರುವುದು ಎದ್ದು ಕಾಣುತ್ತದೆ. ಪ್ರೀತಿ ಕಳೆದುಕೊಂಡ ಮನುವಿನ ಒದ್ದಾಟ, ಅಲೆದಾಟ, ನೋವು ಎಲ್ಲವೂ ಇಲ್ಲಿ ಪ್ರೇಕ್ಷಕರನ್ನು “ದಟ್ಟ’ವಾಗಿ ಆವರಿಸುವ ಸುಳಿವು ನೀಡಿದೆ. ಜೊತೆಗೆ ಹೊಸ ಪ್ರೀತಿಯೊಂದು ಚಿಗುರೊಡೆದ ಸಣ್ಣ ಸೂಚನೆಯೂ ಟ್ರೇಲರ್‌ನಲ್ಲಿ ಸಿಕ್ಕಿದೆ. ಇಲ್ಲಿ ನಾಯಕನಿಂದ ಯಾವುದೇ ಮಾತಿಲ್ಲ. ಆಗಾಗ ಕಾಡುವ ಫ್ಲ್ಯಾಶ್ ಬ್ಯಾಕ್‌ಗಳು, ನೀಲಿ ಸಮುದ್ರ,ಅದರ ಪಕ್ಕ ಮನೆ ಮಾಡುವ ಆಸೆ, ಯಾರು ಅಂದ್ರೆ ಯಾರೂ ಇಲ್ಲದ ಕನಸು, ಜೊತೆಗೆ ಕೆಂಪು ಬಣ್ಣ ನೀಡುವ ಸುಳಿವು…ಹೀಗೆ ಹಲವು ಅಂಶಗಳು ಟ್ರೇಲರ್ ಅನ್ನು ಆವರಿಸಿಕೊಳ್ಳುವ ಮೂಲಕ ಸಿನಿಮಾದೊಳಗೊಂದು ಗಟ್ಟಿ ಕಂಟೆಂಟ್ ಇರುವ ಭರವಸೆ ನೀಡಿದೆ.
ರವಿಪ್ರಕಾಶ್ ರೈ